ಬುಧವಾರ, ಸೆಪ್ಟೆಂಬರ್ 18, 2019
26 °C
ಕಚೇರಿ ಕೆಲಸಕ್ಕಾಗಿ ನಗರಸಭೆಗೆ ಸಾರ್ವಜನಿಕರ ನಿತ್ಯ ಅಲೆದಾಟ

ನಾಯಕರಿಲ್ಲದ ಮನೆಗೆ ಒಂದು ವರ್ಷ

Published:
Updated:
Prajavani

ಶಿರಸಿ: ಇಲ್ಲಿನ ನಗರಸಭೆಗೆ ಜನಪ್ರತಿನಿಧಿಗಳ ಆಯ್ಕಯಾಗಿ ಒಂದು ವರ್ಷ ಕಳೆದಿದ್ದರೂ, ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಯಾಗದಿರುವುದು ನಗರದ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇದರ ಜೊತೆಗೆ ಪೌರಾಯುಕ್ತ ಹುದ್ದೆ ಕೂಡ ಖಾಲಿ ಇರುವುದು ಸಮಸ್ಯೆಯನ್ನು ಇಮ್ಮಡಿಸಿದೆ.

ನಗರಸಭೆಯ 31 ವಾರ್ಡ್‌ಗಳಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆದು ನೂತನ ಸದಸ್ಯರ ಆಯ್ಕೆಯಾಗಿತ್ತು. ಆದರೆ, ಆಯ್ಕೆಯಾಗಿ ಒಂದು ವರ್ಷ ಕಳೆದರೂ ಅವರಿಗೆ ಅಧಿಕಾರ ದೊರೆತಿಲ್ಲ. ಎರಡು ತಿಂಗಳ ಹಿಂದೆ ಪೌರಾಯುಕ್ತರ ವರ್ಗಾವಣೆಯಾಗಿದೆ. ಇದರ ಹೆಚ್ಚುವರಿ ಅಧಿಕಾರವನ್ನು ಉಪವಿಭಾಗಾಧಿಕಾರಿಗೆ ನೀಡಲಾಗಿದೆ. ಉಪವಿಭಾಗದ ಹೊಣೆಗಾರಿಕೆ ಜತೆಗೆ ನಗರಸಭೆ ಅಧಿಕಾರವನ್ನು ಅವರು ಹೆಚ್ಚುವರಿಯಾಗಿ ನಿಭಾಯಿಸಬೇಕಾಗಿದೆ.

‘ನಗರಸಭೆ ಜನಪ್ರತಿನಿಧಿಗಳು ಇಲ್ಲದ ಕಾರಣ ದೈನಂದಿನ ಕೆಲಸಗಳನ್ನು ಸಹ ಮಾಡಿಸಿಕೊಳ್ಳಲಾಗುತ್ತಿಲ್ಲ. ಖಾತೆ ಬದಲಾವಣೆ, ಫಾರ್ಮ್ ನಂಬರ್ 3 ವಿತರಣೆ ವಿಳಂಬವಾಗುತ್ತಿದೆ. ಶೈಕ್ಷಣಿಕ ಸಾಲ, ಮನೆ ಸಾಲ ಮಾಡುವವರು ದಾಖಲೆ ಪೂರೈಸಲು ಸಾಧ್ಯವಾಗದೇ, ನಿತ್ಯ ನಗರಸಭೆಗೆ ಅಲೆದಾಡುತ್ತಿದ್ದಾರೆ’ ಎಂದು ನಾಗರಿಕರೊಬ್ಬರು ಅಲವತ್ತುಕೊಂಡರು.

‘ಅಧಿಕ ವೆಚ್ಚದ ಕೆಲಸಗಳಿಗೆ ಸಾಮಾನ್ಯಸಭೆಯಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ. ಸದಸ್ಯರಿಗೆ ಇನ್ನೂ ಅಧಿಕಾರ ದೊರೆಯದ ಕಾರಣ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯಿಂದ ಪ್ರತಿ ಕಡತಕ್ಕೂ ಅನುಮೋದನೆ ಪಡೆಯಬೇಕು. ಕೆಲಸ ಒತ್ತಡ, ಜಿಲ್ಲೆಯ ವಿವಿಧೆಡೆ ಸಂಚಾರದಿಂದ ಜಿಲ್ಲಾಧಿಕಾರಿ ಭೇಟಿ ಮಾಡಿ ಕಡತಕ್ಕೆ ಅನುಮೋದನೆ ಪಡೆಯುವುದು ನಿಧಾನವಾಗುತ್ತದೆ. ಪ್ರತಿ ಕೆಲಸಕ್ಕೂ ಕಾರವಾರಕ್ಕೆ ಅಲೆಯಬೇಕು’ ಎಂದು ಹೆಸರು ಹೇಳಲಿಚ್ಛಿಸದ ನಗರಸಭೆ ಸಿಬ್ಬಂದಿಯೊಬ್ಬರು ಹೇಳಿದರು.

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ, ಘನತ್ಯಾಜ್ಯ ಸಂಗ್ರಹದ ಸಮಸ್ಯೆ ಹೆಚ್ಚುತ್ತಿದೆ. ವಾಹನಗಳು ದುರಸ್ತಿಗೆ ಬಂದಿರುವುದರಿಂದ ಇರುವ ವಾಹನವನ್ನೇ ಬಳಸಿ ಕಸ ಸಂಗ್ರಹಿಸಲಾಗುತ್ತಿದೆ ಎಂದು ವಾಹನ ಚಾಲಕರು ಕಾರಣ ಹೇಳುತ್ತಾರೆ. ಮೂರ್ನಾಲ್ಕು ದಿನಗಳಿಗೊಮ್ಮೆ ವಾಹನ ಮನೆ ಬಾಗಿಲಿಗೆ ಬರುತ್ತದೆ. ಕಸ ಕೊಳೆತು ನಾರುತ್ತದೆ ಎನ್ನುತ್ತಾರೆ ಸವಿತಾ ಆಚಾರಿ.

ಈ ಬಾರಿಯ ಅತಿವೃಷ್ಟಿಗೆ ಅನೇಕ ರಸ್ತೆಗಳಲ್ಲಿ ಸಂಚಾರ ಸವಾಲಾಗಿದೆ. ದೊಡ್ಡ ಗುಂಡಿಗಳು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ. ’ತಿಳಿವಳಿಕೆ ಕೊರತೆಯಿಂದ ಅನೇಕ ಜನರು ವಾರ್ಡ್ ಸದಸ್ಯರ ಮೂಲಕ ನಗರಸಭೆಯ ಕೆಲಸ ಮಾಡಿಸಿಕೊಳ್ಳುತ್ತಾರೆ. ಸದಸ್ಯರಿಗೆ ಅಧಿಕಾರ ದೊರೆಯದ ಕಾರಣ ಈ ಕೆಲಸಕ್ಕೆ ಹಿನ್ನಡೆಯಾಗಿದೆ. ಚುನಾವಣೆ ವೇಳೆ ಮತದಾರರಿಗೆ ನೀಡಿದ್ದ ಭರವಸೆ ಈಡೇರಿಸಲು ಸಾಧ್ಯವಾಗಬಹುದೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ’ ಎನ್ನುತ್ತಾರೆ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ. 

Post Comments (+)