ಕಾಂಕ್ರೀಟ್ ರಸ್ತೆಯಿಂದ ದೀರ್ಘಕಾಲೀನ ಪ್ರಯೋಜನ

7
ಮೇಲ್ದರ್ಜೆಗೇರಲಿರುವ ಕುಮಟಾ–ಶಿರಸಿ ರಸ್ತೆ: ₹ 370 ಕೋಟಿ ವೆಚ್ಚದ ಕಾಮಗಾರಿ

ಕಾಂಕ್ರೀಟ್ ರಸ್ತೆಯಿಂದ ದೀರ್ಘಕಾಲೀನ ಪ್ರಯೋಜನ

Published:
Updated:
Deccan Herald

ಕುಮಟಾ:

ಅಂಕೋಲಾ–ಕುಮಟಾ–ಶಿರಸಿ ತಾಲ್ಲೂಕುಗಳನ್ನು ಸಂಪರ್ಕಿಸುವ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ₹ 370 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ಯೋಜನೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಕಾಮಗಾರಿ ಯೋಜನೆಯ ನಿರ್ದೇಶಕ ಕರ್ನಲ್ ಎ.ಕೆ.ಜಾನಬಾಗ್, ‘ಕುಮಟಾದ ದೀವಗಿ ನಂತರ ಶಿರಸಿವರೆಗಿನ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತದೆ. ಇಲ್ಲಿ ಹಾಳಾಗುವ ರಸ್ತೆಯನ್ನು ಪದೇ ಪದೇ ದುರಸ್ತಿ ಮಾಡುವುದು ವೆಚ್ಚದಾಯಕ. ಒಂದು ಸಲ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣವಾದರೆ ಈ ಭಾಗದಲ್ಲಿ ಸಂಚಾರ ಸುಲಭ ಹಾಗೂ ಸುರಕ್ಷಿತವಾಗುತ್ತದೆ’ ಎಂದರು.

ಆದರೆ, ಒಮ್ಮೆ ಕಾಮಗಾರಿ ಆರಂಭವಾದರೆ ಸಂಪೂರ್ಣವಾಗಲು ಸುಮಾರು ಎರಡು ವರ್ಷಗಳೇ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಶಿರಸಿ–ಕುಮಟಾ ನಡುವಿನ ವಾಹನ ಸಂಚಾರ ಈ ಮಾರ್ಗದಲ್ಲಿ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಇದರಿಂದ ಜಿಲ್ಲೆಯ ಕರಾವಳಿ ತಾಲ್ಲೂಕುಗಳಿಗೆ ವಾಣಿಜ್ಯ ದೃಷ್ಟಿಯಿಂದ ಪ್ರಮುಖ ನಗರ ಎನಿಸಿಕೊಂಡಿರುವ ಶಿರಸಿ ಸಂಪರ್ಕಿಸಲು ಜನರು ಪರದಾಡುವಂತಹ ಸ್ಥಿತಿ ಬರುವ ಆತಂಕ ಉಂಟಾಗಿದೆ.

ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟ ಪ್ರದೇಶ ಹಾಗೂ ಶಿರಸಿ ಭಾಗದ ಬಂಡಲ್ ಘಟ್ಟ ಪ್ರದೇಶಗಳಲ್ಲಿ ಕೆಲವು ವರ್ಷಗಳ ಹಿಂದೆ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಶಿರಸಿಯಿಂದ ಕುಮಟಾದ ದೀವಗಿ ಮೂಲಕ ಅಂಕೋಲಾದ ಬೇಲೆಕೇರಿವರೆಗೆ ರಸ್ತೆ ಸುಧಾರಣೆ ಮಾಡುವ ಬಗ್ಗೆ ಚಿಂತಿಸಲಾಗಿದೆ. ಶಿರಸಿಯಿಂದ ದೀವಗಿವರೆಗೆ ಮಾತ್ರ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತದೆ. ಅಲ್ಲಿಂದ ಮುಂದೆ ಬೇಲೆಕೇರಿವರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ.

‘ಕಾಂಕ್ರೀಟ್ ರಸ್ತೆ ಕಾಮಗಾರಿ ಸದ್ಯವೇ ಆರಂಭವಾಗಲಿದೆ. ಹಾಲಿ ರಸ್ತೆಯನ್ನು 5.5 ಮೀಟರ್‌ಗಳಿಂದ 10 ಮೀಟರ್‌ಗಳಷ್ಟು ವಿಸ್ತರಣೆ ಮಾಡಲಾಗುವುದು. ಆರ್.ಎನ್.ಎಸ್. ಬಿಲ್ಡರ್ಸ್ ಹಾಗೂ ಗಾಯತ್ರಿ ಕನ್‌ಸ್ಟ್ರಕ್ಷನ್ ಕಂಪನಿಗಳು ಕಾಮಗಾರಿ ನಿರ್ವಹಿಸಲಿವೆ. ಕಾಮಗಾರಿ ಅಂದಾಜು ಎರಡು ವರ್ಷಗಳಲ್ಲಿ ಮುಗಿಯಲಿದೆ. ಅಲ್ಲಿಯವರೆಗೆ ಕುಮಟಾ–ಸಿದ್ದಾಪುರ, ಅಂಕೋಲಾ–ಯಲ್ಲಾಪುರ ಪರ್ಯಾಯ ಮಾರ್ಗಗಳ ಮೂಲಕ ಶಿರಸಿ ತಲುಪುವುದು ಅನಿವಾರ್ಯ’ ಎಂದು ಜಾನಬಾಗ್ ಹೇಳಿದರು.

‘ಪ‌ದೇಪದೇ ದುರಸ್ತಿ ವೆಚ್ಚದಾಯಕ’: ‘ಈಗ ಇರುವ ಉತ್ತಮ ರಸ್ತೆಯನ್ನು ಅಗೆದು ಹಾಕಿ ಅಲ್ಲಿ ಹೊಸ ರಸ್ತೆ ನಿರ್ಮಾಣ ಮಾಡುವುದು ತೀರಾ ವೆಚ್ಚದಾಯಕವಲ್ಲವೇ’ ಎಂದು ಪ್ರಶ್ನಿಸಿದಾಗ ಜಾನಬಾಗ್, ‘ದೀರ್ಘ ಕಾಲದ ದೃಷ್ಟಿಯಿಂದ ನೋಡಿದರೆ ಪದೇ ಪದೇ ರಸ್ತೆ ಹಾಳಾಗುವುದು ದುರಸ್ತಿ ಮಾಡುವುದು ವೆಚ್ಚದಾಯಕ. ಆದರೆ, ಒಮ್ಮೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಿದರೆ ಭವಿಷ್ಯದಲ್ಲಿ ರಸ್ತೆ ನಿರ್ವಹಣೆ ವೆಚ್ಚ ಉಳಿಯುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !