ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪ್ರಕರಣ ಏರಿಕೆ: ದೇವರ ದರ್ಶನಕ್ಕೆ ಮಾತ್ರ ಅವಕಾಶ

ಮದುವೆಗಳಲ್ಲಿ ಭಾಗವಹಿಸಿದವರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಆದೇಶ
Last Updated 4 ಆಗಸ್ಟ್ 2021, 16:24 IST
ಅಕ್ಷರ ಗಾತ್ರ

ಕಾರವಾರ: ‘ಕೋವಿಡ್ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ ಕಾಣುತ್ತಿರುವ ಕಾರಣ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ಧಾರ್ಮಿಕ ಸ್ಥಳಗಳಲ್ಲಿ ಕೇವಲ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಂತೆಯೇ ಎಲ್ಲ ರೀತಿಯ ಸೇವಾ ಕಾರ್ಯಗಳನ್ನು ರದ್ದು ಮಾಡಿ ಆದೇಶಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಸದ್ಯ ಪಾಸಿಟಿವಿಟಿ ದರವು ಕಡಿಮೆಯಿದೆ. ಸೋಂಕಿನ ನಿಯಂತ್ರಣದ ಸಲುವಾಗಿ ನಿರ್ಬಂಧಗಳನ್ನು ಹೇರುವುದು ಅನಿವಾರ್ಯವಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರ ಜೊತೆ ಹೆಚ್ಚು ಸಂಪರ್ಕಕ್ಕೆ ಬರುವ ಅರ್ಚಕರು, ಸಿಬ್ಬಂದಿ ಮುಂತಾದ ಎಲ್ಲರಿಗೂ ವಾರಕ್ಕೊಮ್ಮೆ ಗಂಟಲುದ್ರವದ ಮಾದರಿ ಪರೀಕ್ಷೆ ಮಾಡಲಾಗುವುದು’ ಎಂದು ತಿಳಿಸಿದರು.

50 ಜನಕ್ಕೆ ಅವಕಾಶ:‘ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಿಗೆ ಆಯಾ ತಾಲ್ಲೂಕುಗಳ ತಹಶೀಲ್ದಾರ್ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. 50 ಜನರಷ್ಟೇ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ನೋಡಲ್ ಅಧಿಕಾರಿಯು ಸಮಾರಂಭಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಭಾಗವಹಿಸಿದವರ ಮೊಬೈಲ್ ಫೋನ್ ನಂಬರ್ ಸೇರಿದಂತೆ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಪಾಲ್ಗೊಂಡವರು ಉತ್ತರ ಕನ್ನಡದವರೇ ಆಗಿದ್ದರೆ, ಅವರನ್ನು ಎರಡು ದಿನಗಳ ಒಳಗಾಗಿ ಗಂಟಲು ದ್ರವದ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯ ಗಡಿಭಾಗಗಳ ಚೆಕ್‌‍ಪೋಸ್ಟ್‌ಗಳಲ್ಲಿ, ರೈಲು, ಬಸ್ ನಿಲ್ದಾಣಗಳಲ್ಲಿ ಹೊರ ರಾಜ್ಯಗಳಿಂದ ಬರುವವರ ಮೇಲೆ ಹೆಚ್ಚು ನಿಗಾ ವಹಿಸಬೇಕು. ಅವರಿಗೆ ಸಂಬಂಧಿಸಿದ ನೊಂದಣಿ ಪುಸ್ತಕವನ್ನು ನಿರ್ವಹಿಸಬೇಕು. ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿದ್ದರೂ ಪಡೆಯದಿದ್ದರೂ 72 ಗಂಟೆಗಳ ಒಳಗಾಗಿ ಪಡೆದಿರುವ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ತಿಳಿಸಿದರು.

ಪೊಲೀಸರ ನಿಯೋಜನೆ:‘ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕೋವಿಡ್ ನಿಯಮಾವಳಿಗಳ ಕಟ್ಟುನಿಟ್ಟಿನ ಪಾಲನೆಯನ್ನು ಪರಿಶೀಲಿಸಲು ತಲಾ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗುವುದು. ಮುಖಗವಸು ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಮತ್ತು ದಂಡ ವಿಧಿಸಲಾಗುವುದು. ಇದರ ಜವಾಬ್ದಾರಿಯು ಆಯಾ ‍ಪೊಲೀಸ್ ವೃತ್ತ ನಿರೀಕ್ಷಕರ ಜವಾಬ್ದಾರಿಯಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಕೋವಿಡ್‌ನ ಸಂಭಾವ್ಯ ಮೂರನೇ ಅಲೆ ಎದುರಿಸಲು ಪ್ರತಿ ತಾಲ್ಲೂಕಿಗೊಂದು ಆರೈಕೆ ಕೇಂದ್ರ, ಗ್ರಾಮ ಪಂಚಾಯಿತಿಗಳಲ್ಲಿ ಪ್ರತ್ಯೇಕ ವಾಸದ ವ್ಯವಸ್ಥೆ ಆರಂಭಿಸಲು ಸೂಚಿಸಲಾಗಿದೆ’ ಎಂದೂ ತಿಳಿಸಿದರು.

ಮಾಸ್ಕ್ ಧರಿಸದಿದ್ದರೆ ದಂಡ:‘ಹೆಚ್ಚು ಜನ ಸೇರುವ ಮಾರುಕಟ್ಟೆ, ಆಸ್ಪತ್ರೆ ಮುಂತಾದೆಡೆ ಸ್ಯಾನಿಟೈಸ್ ಮಾಡಲು, ಮುಖಗವಸು ಧರಿಸದವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ತಿಳಿಸಿದರು.

‘ಮೂರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದ ಪ್ರದೇಶಗಳನ್ನು ಸೂಕ್ಷ್ಮ ನಿರ್ಬಂಧಿತ ಪ್ರದೇಶಗಳೆಂದು ಗುರುತಿಸಲಾಗುತ್ತಿದೆ. ಅಂಕೋಲಾ, ಕುಮಟಾ ಮತ್ತು ಹೊನ್ನಾವರಗಳಲ್ಲಿ ಕೆಲವು ದಿನಗಳಿಂದ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ’ ಎಂದೂ ಹೇಳಿದರು.

ಲಸಿಕೆಯ ಮಾಹಿತಿ ನೀಡುವ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಯಿದ್ದು, ಕೇಂದ್ರವೇ ಸರಿಪಡಿಸಲಿದೆ. ಲಸಿಕೆಯ ಪೂರೈಕೆಯಲ್ಲೂ ಕೊರತೆಯಿದ್ದು ಶೀಘ್ರವೇ ಸರಿಹೋಗಲಿದೆ.

– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT