ಮಂಗಳವಾರ, ಸೆಪ್ಟೆಂಬರ್ 17, 2019
25 °C
ಗಂಗಾವಳಿಯಲ್ಲಿ ಕಡಿಮೆಯಾದ ನೀರಿನ ಹರಿವು

ನದಿಗೆ ಅಳವಡಿಸಿದ ಪಂಪ್‍ಸೆಟ್ ಸ್ಥಗಿತಗೊಳಿಸಿ: ಕ್ರಮಕ್ಕೆ ಜಿಲ್ಲಾಧಿಕಾರಿ ಆದೇಶ

Published:
Updated:

ಕಾರವಾರ: ಜಿಲ್ಲಾ ಕೇಂದ್ರ, ಅಂಕೋಲಾ, ಸೀಬರ್ಡ್ ನೌಕಾನೆಲೆ ಮತ್ತು ವಿವಿಧ ಗ್ರಾಮ ಪಂಚಾಯ್ತಿಗಳಿಗೆ ಕುಡಿಯುವ ನೀರು ಪೂರೈಕೆಯಾಗುವ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಆದ್ದರಿಂದ ನದಿಗೆ ಅಳವಡಿಸಿರುವ ಕೃಷಿ ಪಂಪ್‍ಸೆಟ್‍ಗಳ ಬಳಕೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.

ಈ ಸಂಬಂಧ ಹೆಸ್ಕಾಂ ಅಧಿಕಾರಿಗಳಿಗೆ, ಕಾರವಾರ ಮತ್ತು ಅಂಕೋಲಾ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ. ನದಿ ಪಾತ್ರದಲ್ಲಿ ಮಳೆಯಾಗದ ಕಾರಣ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸರಬರಾಜಿನಲ್ಲಿ ಬಹಳ ವ್ಯತ್ಯಾಸವಾಗುತ್ತಿದೆ. 

ಮೇ ತಿಂಗಳಲ್ಲಿ ಘಟ್ಟದ ಮೇಲ್ಭಾಗದಲ್ಲಿ ಮಳೆಯಾಗಿದ್ದರೆ ಗಂಗಾವಳಿ ನದಿಗೆ ನೀರಿನ ಹರಿವು ಸಮರ್ಪಕವಾಗುತ್ತಿತ್ತು. ಆದರೆ, ಅಲ್ಲಿ  ಮಳೆಯಾಗಿಲ್ಲ. ಅಲ್ಲದೇ ಬಿಸಿಲಿನ ಕಾವು ಮತ್ತಷ್ಟು ಹೆಚ್ಚಿದ್ದರಿಂದ ನದಿಯಲ್ಲಿದ್ದ ನೀರು ಆವಿಯಾಗಿ ಹೋಗಿ ಸಮಸ್ಯೆ ಉಲ್ಬಣಿಸಿದೆ. ಅಂತರ್ಜಲವೂ ಕುಸಿದಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಇದು ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇರುವುದರಿಂದ ನದಿಗೆ ಅಳವಡಿಸಿರುವ ಕೃಷಿ ಪಂಪ್‍ಸೆಟ್‍ಗಳನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾಗಿರುವ ಕಾರಣ ಈ ಕ್ರಮ ಅನಿವಾರ್ಯವಾಗಿದೆ. ಕಾರವಾರ ಉಪವಿಭಾಗದ ಸಹಾಯಕ ಆಯುಕ್ತರು ಈ ಬಗ್ಗೆ ಮೇಲ್ವಿಚಾರಣೆ ವಹಿಸಬೇಕು. ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.

Post Comments (+)