ಡಿಇಎಂಯು ರೈಲಿಗಾಗಿ ಹೋರಾಟ: ಶಾಸಕರು, ಸಂಸದರ ‘ವಿಶೇಷ ಪ್ರಯತ್ನ’ ಏನಿಲ್ಲ

7
ಹೋರಾಟ ಮಾಡಿದವರನ್ನು ಬಿಟ್ಟರು; ಮಾಧವನಾಯಕ ಅಸಮಾಧಾನ

ಡಿಇಎಂಯು ರೈಲಿಗಾಗಿ ಹೋರಾಟ: ಶಾಸಕರು, ಸಂಸದರ ‘ವಿಶೇಷ ಪ್ರಯತ್ನ’ ಏನಿಲ್ಲ

Published:
Updated:
Deccan Herald

ಕಾರವಾರ: ‘ಕಾರವಾರ– ಪೆರ್ನೆಮ್ ಡಿಇಎಂಯು ರೈಲಿನ ಬೋಗಿಯ ಹೆಚ್ಚಳಕ್ಕಾಗಿ ಹೋರಾಟ ಮಾಡಿದವರನ್ನು ಬಿಟ್ಟು, ಇದೀಗ ರೈಲನ್ನು ಮೇಲ್ದರ್ಜೇರಿಸುತ್ತಿದ್ದಂತೆ ಇಲ್ಲಿನ ಶಾಸಕರು ಹಾಗೂ ಸಂಸದರು ತಾವೇ ವಿಶೇಷ ಪ್ರಯತ್ನ ಮಾಡಿದ್ದೆಂದು ಹೇಳಿಕೊಳ್ಳುತ್ತಿರುವುದು ಖಂಡನೀಯ’ ಎಂದು ರೈಲ್ವೆ ಬಳಕೆದಾರರ ಹಿತರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಮಾಧವ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಡಿಭಾಗವಾದ ಇಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಯಾವುದೇ ಕೈಗಾರಿಕೆಗಳು ಇಲ್ಲಿ ಇಲ್ಲದ ಕಾರಣ ಹೆಚ್ಚಿನ ಯುವಕ– ಯುವತಿಯರು ಪ್ರತಿನಿತ್ಯ ಗೋವಾ ರಾಜ್ಯಕ್ಕೆ ಉದ್ಯೋಗಕ್ಕಾಗಿ ತೆರಳುತ್ತಾರೆ. ದುಡಿಯಲು ಅಲ್ಲಿಗೆ ತೆರಳುವವರ ಸಂಖ್ಯೆ ಹೆಚ್ಚುತ್ತಿದ್ದಂತೆ ಕಾರವಾರ– ಪೆರ್ನೆಮ್ ರೈಲಿನಲ್ಲಿ ಅಡಚಣೆ ಉಂಟಾಗಿತ್ತು. ಹೀಗಾಗಿ ಸಮಿತಿಯೊಂದನ್ನು ರಚಿಸಿಕೊಂಡು ಬೋಗಿಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದೆವು’ ಎಂದು ತಿಳಿಸಿದರು.

‘ಇದೀಗ ಯಾರೋ ಮಾಡಿದ ಹೋರಾಟದ ಫಲವನ್ನು ಶಾಸಕಿ ರೂಪಾಲಿ ನಾಯ್ಕ ಹಾಗೂ ಸಂಸದ ಅನಂತಕುಮಾರ್ ಹೆಗಡೆಯವರು ತಾವೇ ಮಾಡಿದ್ದು ಎಂದು ರೈಲಿಗೆ ಹಸಿರು ನಿಶಾನೆ ತೋರಿದ ಬಳಿಕ ಭಾಷಣ ಮಾಡಿದ್ದಾರೆ. ಹೋರಾಟ ಮಾಡಿದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕೆಂಬ ಕನಿಷ್ಠ ಸೌಜನ್ಯವನ್ನೂ ತೋರದಿರುವುದು ಬೇಸರ ತಂದಿದೆ’ ಎಂದರು.

‘ಪ್ರತಿ ವರ್ಷ ರೈಲಿನ ಬೋಗಿಗಳನ್ನು ಹೆಚ್ಚು ಮಾಡುವುದನ್ನು ಬಿಟ್ಟು ಗಡಿ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಯತ್ನಿಸಬೇಕಿದೆ. ತಾಲ್ಲೂಕಿನ ಮುಡಿಗೇರಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನು ಹಾಗೆಯೇ ಪಾಳು ಬಿದ್ದಿದೆ’ ಎಂದು ತಿಳಿಸಿದರು.

‘ಅನಂತಕುಮಾರ್ ಹೆಗಡೆ ದಾಖಲೆ ತೋರಿಸಲಿ’: ‘ಐದು ಬಾರಿ ಸಂಸದರಾಗಿ ಜಿಲ್ಲೆಯಿಂದ ಆಯ್ಕೆಯಾದ ಅನಂತಕುಮಾರ್ ಹೆಗಡೆಯವರು ಕೇಂದ್ರ ಸಚಿವರಾದರೂ ಮಾಡಿದ ಅಭಿವೃದ್ಧಿ ಕೆಲಸಗಳು ಏನೂ ಇಲ್ಲ. ಜಿಲ್ಲೆಯ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಕನಿಷ್ಠ ಪ್ರಯತ್ನವನ್ನೂ ಅವರು ಮಾಡಿಲ್ಲ. ಹಾಗೇನಾದರೂ ಮಾಡಿದ್ದಲ್ಲಿ ದಾಖಲೆಗಳನ್ನು ಅವರು ತೋರಿಸಲಿ’ ಎಂದು ಸವಾಲೆಸೆದರು.

‘ಈ ಕೆಲಸಗಳನ್ನು ಮಾಡಿಕೊಟ್ಟರೆ ಅವರ ಪರವಾಗಿ ನಾನೇ ಮುಂದೆ ನಿಂತು ಪ್ರಚಾರ ಮಾಡುತ್ತೇನೆ. ಇಲ್ಲವಾದಲ್ಲಿ ಮನೆಮನೆಗೆ ತೆರಳಿ ಅವರ ವಿರುದ್ಧ ಪ್ರಚಾರ ನಡೆಸುವುದು ಶತಸಿದ್ಧ’ ಎಂದರು.

ಸಮಿತಿಯ ಪ್ರಮುಖರಾದ ಇಮ್ತಿಯಾಜ್ ಬುಖಾರಿ, ಅಲ್ತಾಫ್ ಶೇಖ್, ಬಾಬು ಶೇಖ್, ಶಿವಾನಂದ ಮೇತ್ರಿ, ಪ್ರಭಾಕರ ಗೋವೆಕರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !