ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆಗೆ ಮೊಳಕೆಯೊಡೆದ ಬೆಳೆ ಒಣಗಿಸಲು ಬಲ್ಬ್, ಫ್ಯಾನ್

Last Updated 22 ಮೇ 2022, 16:05 IST
ಅಕ್ಷರ ಗಾತ್ರ

ಮುಂಡಗೋಡ: ನಾಲ್ಕೈದು ದಿನಗಳಿಂದ ಒಂದೇ ಸಮನೆ ಸುರಿದ ಮಳೆಯಿಂದ ಗೋವಿನಜೋಳ (ಮೆಕ್ಕೆಜೋಳ) ಫಸಲು ಒಣಗಿಸಲು ಅಡ್ಡಿಯಾಗಿದೆ. ಕೆಲವೆಡೆ ಕಾಳುಗಳು ಮೊಳಕೆಯೊಡೆದಿವೆ. ಇದರಿಂದ ಆತಂಕಗೊಂಡಿರುವ ರೈತರು, ಉಳಿದ ಬೆಳೆಯನ್ನಾದರೂ ಸಂರಕ್ಷಿಸಲು ವಿನೂತನ ಪ್ರಯೋಗಗಳು ಮೊರೆ ಹೋಗಿದ್ದಾರೆ.

ಕಾಂಕ್ರೀಟ್‌ ರಸ್ತೆಗಳ ಮೇಲೆ ತಾತ್ಕಾಲಿಕ ಟೆಂಟ್‌ಗಳನ್ನು ಹಾಕಿದ್ದಾರೆ. ಅದರಲ್ಲಿ ವಿದ್ಯುತ್‌ ಬಲ್ಬ್‌ ಬೆಳಗಿಸಿ ಶಾಖ ನೀಡುತ್ತಿದ್ದಾರೆ. ಕೆಲವೆಡೆ ಫ್ಯಾನ್ ಅಳವಡಿಸಿ ನಿರಂತರವಾಗಿ ಗಾಳಿ ಹರಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 500 ಹೆಕ್ಟೇರ್‌ಗಳಷ್ಟಷ್ಟು ಪ್ರದೇಶದಲ್ಲಿ ಬೇಸಿಗೆ ಬೆಳೆಯಾಗಿ ಗೋವಿನಜೋಳವನ್ನು ಬೆಳೆಯಲಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ಸದ್ಯ ₹ 2,000ದಿಂದ ₹ 2,300 ದರವಿದೆ. ಆದರೆ, ಕಟಾವು ಮಾಡಿ ಒಣಗಿಸಲು ಹಾಕಿದ್ದ ಶೇ 50ರಷ್ಟು ಬೆಳೆಯು ಮಳೆಯಿಂದ ಹಾನಿಯಾಗಿದೆ.

ರಸ್ತೆ ಹಾಗೂ ಎ.ಪಿ.ಎಂ.ಸಿ ಆವರಣದಲ್ಲಿ ರೈತರು ಬೆಳೆಯನ್ನು ಒಣಗಿಸಲು ಹಾಕಿದ್ದರು. ಆದರೆ, ನಿರಂತರ ಮಳೆಯಿಂದಾಗಿ ಮುಚ್ಚಿದ್ದ ತಾಡಪತ್ರಿಗಳ ಅಡಿಯಲ್ಲಿಯೇ ಕಾಳುಗಳು ಮೊಳಕೆ ಒಡೆಯುತ್ತಿವೆ.

ತಾಲ್ಲೂಕಿನ ಮುಡಸಾಲಿ ಗ್ರಾಮದ ನಾಲ್ಕೈದು ಕಡೆ ರೈತರು ಕಾಂಕ್ರೀಟ್ ರಸ್ತೆಯ ಮೇಲೆ ತಾತ್ಕಾಲಿಕವಾಗಿ ಟೆಂಟ್‌ಗಳನ್ನು ಅಳವಡಿಸಿ ಗೋವಿನಜೋಳ ಒಣಗಲು ಹಾಕಿದ್ದಾರೆ. ಇದೇರೀತಿ, ಹಗಲು ರಾತ್ರಿ ಎನ್ನದೇ ಬೆಳೆಗೆ ಫ್ಯಾನ್‌ ಮೂಲಕ ಗಾಳಿ ಬೀಸುವುದು, ವಿದ್ಯುತ್‌ ದೀಪದ ಬೆಳಕಿನ ಶಾಖದಿಂದ ಒಣಗಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

‘ಫಸಲು ಒಣಗಿಸಲು ಆಗದಂಥ ವಾತಾವರಣವಿದೆ. ಕೈಗೆ ಬಂದ ಬೆಳೆ ಕಣ್ಣ ಮುಂದೆಯೇ ಹಾಳಾಗುವುದನ್ನು ನೋಡಲಾಗದು. ಗುಡಿಸಲು ಆಕಾರದ ಟೆಂಟ್ ಮಾಡಿ, ಅದರಲ್ಲಿ ಬಲ್ಬ್ ಬೆಳಕು ಹಾಗೂ ಫ್ಯಾನ್ ಹಚ್ಚಿ ಅವುಗಳ ಸಹಾಯದಿಂದ ಒಣಗಿಸುತ್ತಿದ್ದೇವೆ. ಇನ್ನೊಂದು ವಾರ ಮಳೆ ಬರದೇ ಇದ್ದಿದ್ದರೆ ಬಂಪರ್‌ ಬೆಳೆಯ ಲಾಭ ಕೈಗೆ ಸಿಗುತ್ತಿತ್ತು. ಆದರೆ, ಅಕಾಲಿಕ ಮಳೆಯಿಂದ ಸಮಸ್ಯೆಯಾಗಿದೆ. ಬೆಳೆ ಕೈಗೆ ಸಿಗಲಾರದಂಥ ಪರಿಸ್ಥಿತಿಯಲ್ಲಿ ರೈತರಿದ್ದಾರೆ’ ಎಂದು ರೈತರಾದ ಮಾರುತಿ ಕೀರ್ತೆಪ್ಪನವರ್‌, ರಾಮಕೃಷ್ಣ ಪಾಟೀಲ, ಮಂಜುನಾಥ ಗುಲ್ಯಾನವರ್‌, ಶಾಂತಕುಮಾರ ಕೀರ್ತೆಪ್ಪನವರ ಸೇರಿದಂತೆ ಹಲವರು ಅಳಲು ತೋಡಿಕೊಂಡರು.

‘ಬೆಳೆಗೆ ಎಷ್ಟೇ ತಾಡಪತ್ರಿ ಮುಚ್ಚಿದರೂ ರಾಶಿ ಮಾಡಿದ ಬೆಳೆಯ ಒಳಗೆ ಮಳೆಯ ನೀರು ನುಸುಳುತ್ತಿದೆ. ಅಕಾಲಿಕ ಮಳೆಯಿಂದ ರೈತರು ತೀವ್ರ ಹಾನಿ ಅನುಭವಿಸಿದ್ದು, ರೈತರ ನೆರವಿಗೆ ಸರ್ಕಾರ ಧಾವಿಸಬೇಕು’ ಎಂದು ಅವರು ಒತ್ತಾಯಿಸಿದರು.

––––––

* ಮುಂಡಗೋಡ ತಾಲ್ಲೂಕಿನ ವಿವಿಧೆಡೆ ಮೆಕ್ಕೆಜೋಳದ ಫಸಲು ಮೊಳಕೆಯೊಡೆದಿದೆ. ಮುಂದಿನ ಕ್ರಮಕ್ಕಾಗಿ ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ಕೈಗೊಳ್ಳಲಾಗುವುದು.

– ಎಂ.ಎಸ್.ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT