ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ: ದಡಕ್ಕೆ ಬಂದು ಬೀಳುತ್ತಿದೆ ಮತ್ಸ್ಯ ರಾಶಿ!

ಭಟ್ಕಳದ ಬಂದರು ಹಾಗೂ ಕರಿಕಲ್ ಕಡಲತೀರದಲ್ಲಿ ಮೀನು ಹಿಡಿಯಲು ಜನರ ಸಾಲು
Last Updated 9 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನ ಕಡಲತೀರದಲ್ಲಿ ಆ.7ರಿಂದ ಈಚೆಗೆ ಬಲೆ ಹಾಕದಿದ್ದರೂ ಮೀನುಗಳು ಸಿಗುತ್ತಿವೆ. ತಾವಾಗಿಯೇ ಬಂದು ದಡಕ್ಕೆ ಬೀಳುತ್ತಿವೆ. ಅವುಗಳನ್ನು ಹಿಡಿಯಲು ಮತ್ಸ್ಯಪ್ರಿಯರ ಗುಂಪು ದಿನವೂ ಸಮುದ್ರ ತೀರದಲ್ಲಿ ಕಾದು ನಿಲ್ಲುತ್ತಿದ್ದಾರೆ.

ತಾಲ್ಲೂಕಿನ ಬಂದರು ಹಾಗೂ ಕರಿಕಲ್ ಕಡಲತೀರದಲ್ಲಿ ಭಾನುವಾರ ಬೆಳಿಗ್ಗೆ ‘ಮುರಿಯಾ’ ಮೀನುಗಳು ತಮ್ಮಷ್ಟಕ್ಕೇ ಬಂದು ಬೀಳಲು ಆರಂಭಿಸಿದವು. ಮೊದಮೊದಲು ಕಡಿಮೆ ಸಂಖ್ಯೆಯಲ್ಲಿದ್ದ ಮೀನುಗಳು, ಸಮಯ ಸರಿದಂತೆ ಹೆಚ್ಚಾದವು. ಕಡಲ ತೀರದಲ್ಲಿ ತಾಜಾ ಮೀನು ಬಂದು ಬೀಳುತ್ತಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆಯೇ 100ಕ್ಕೂ ಅಧಿಕ ಜನ ಸೇರಿದರು. ಕೆಲವರು ಜೀವದ ಹಂಗು ತೊರೆದು ಕಡಲಿಗೆ ಇಳಿದು, ತೇಲಿ ಬರುವ ಮೀನುಗಳನ್ನು ಹಿಡಿದರು.

ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಕಡಲಲ್ಲಿ ಉಂಟಾಗಿರುವ ಚಂಡಮಾರುತದಿಂದ ಮೀನುಗಾರರು ಕಡಲಿಗೆ ಇಳಿಯುವ ಧೈರ್ಯ ಮಾಡುತ್ತಿಲ್ಲ. ಮೀನುಗಾರಿಕೆ ನಿಷೇಧದ ಅವಧಿ ಮುಗಿದರೂ ಯಾಂತ್ರೀಕೃತ ದೋಣಿಗಳು ದಡದಲ್ಲೇ ಲಂಗರು ಹಾಕಿವೆ. ತಾಜಾ ಮೀನು ಸಿಗದ ಮತ್ಸ್ಯಪ್ರಿಯರಿಗೆ ಈ ರೀತಿ ದಡಕ್ಕೆ ಬಂದು ಬೀಳುವ ಮೀನುಗಳು ಉತ್ಸಾಹ ತಂದಿವೆ. ಅವುಗಳನ್ನು ಹಿಡಿದು ಪ್ಲಾಸ್ಟಿಕ್ ಲಕೋಟೆಗಳಲ್ಲಿ ತುಂಬಿಕೊಂಡು ಮನೆಗೆ ಸಾಗಿಸುತ್ತಿದ್ದಾರೆ.

ಮೀನುಗಳು ಈ ಸಂದರ್ಭದಲ್ಲಿ ಹೆಚ್ಚಾಗಿ ಕಡಲಿನ ಆಳದಲ್ಲಿ, ಕಲ್ಲುಗಳ ನಡುವೆ ಜೀವಿಸುತ್ತಿರುತ್ತವೆ. ಯಾಂತ್ರೀಕೃತ ದೋಣಿಗಳ ಮೀನುಗಾರರಿಗೆ ಮಾತ್ರ ಇವು ಬಲೆಗೆ ಸಿಗುತ್ತವೆ. ಆದರೆ, ಈ ರೀತಿ ದಡಕ್ಕೆ ಬಂದು ಬೀಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಮೀನುಗಳು ದಡಕ್ಕೆ ಬಂದು ಬೀಳುತ್ತಿರುವುದು ಹವಾಮಾನ ವೈಪರೀತ್ಯದ ಸಂಕೇತ ಎನ್ನುತ್ತಾರೆ ಮೀನುಗಾರರು.

ಭಾನುವಾರ ಬಂದರು, ಕರಿಕಲ್ ಕಡಲ ತಡಿಯಲ್ಲಿ ಬಿದ್ದಿರುವ ಮೀನು ಸೋಮವಾರ, ಮಂಗಳವಾರ ಹೊನ್ನಿಮಿಡಿ, ಗೊರ್ಟೆ ಹಾಗೂ ಹುಯಿಲಮಿಡಿ ಕಡಲತೀರಕ್ಕೂ ಬಂದು ಬಿದ್ದಿವೆ. ರಾಶಿ ರಾಶಿ ಮೀನುಗಳು ತೇಲಿಬರುವುದರಿಂದ ಮೀನುಗಾರರು, ಕಡಲತೀರ ವಾಸಿಗಳು ಮೀನಿಗಾಗಿ ಕಡಲ ತೀರವನ್ನೇ ಕಾಯುತ್ತಿದ್ದಾರೆ.

*
ಈ ಪ್ರಮಾಣದಲ್ಲಿ ಮುರಿಯಾ ಮೀನು ಸಮುದ್ರದದ ದಡಕ್ಕೆ ಬಿದ್ದಿರುವುದು ಅಚ್ಚರಿಯಾಗಿದೆ. ಅರ್ಧ ಕೆ.ಜಿ.ಯಷ್ಟು ತೂಕದ ಮೀನು ಕೂಡ ತೇಲಿ ದಡಕ್ಕೆ ಬಂದಿದೆ.
– ಸುರೇಶ ಮೊಗೇರ, ಮೀನುಗಾರ, ಭಟ್ಕಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT