ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ರಂದು ವಾಹನ ಸಂಚಾರ ತಡೆಯುವ ಎಚ್ಚರಿಕೆ

‘ಸುವರ್ಣ ತ್ರಿಭುಜ’ ದೋಣಿಯಲ್ಲಿದ್ದ ಮೀನುಗಾರರ ಪತ್ತೆಗೆ ಒತ್ತಾಯ: ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ
Last Updated 3 ಜನವರಿ 2019, 12:37 IST
ಅಕ್ಷರ ಗಾತ್ರ

ಭಟ್ಕಳ (ಉತ್ತರ ಕನ್ನಡ): ಮೀನುಗಾರಿಕೆಗೆಂದು ತೆರಳಿ ದೋಣಿ ಸಮೇತ ನಾಪತ್ತೆಯಾಗಿರುವ ಎಂಟು ಮೀನುಗಾರರ ಪತ್ತೆಗೆ ಕ್ರಮ ಕೈಗೊಳ್ಳಬೇಕು. ಅವರ ಕುಟುಂಬಗಳ ಆತಂಕವನ್ನು ದೂರ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಗುರುವಾರ ಸಾವಿರಾರು ಮೀನುಗಾರರು ಬೃಹತ್‌ ಪ್ರತಿಭಟನಾ ಮೆರವಣಿಗೆಹಮ್ಮಿಕೊಂಡರು.

ಪಟ್ಟಣದ ಸಂತೆ ಮಾರುಕಟ್ಟೆಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದರು. ಮೆರವಣಿಗೆಯುದ್ದಕ್ಕೂ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೀನುಗಾರರ ಮುಖಂಡ ವಸಂತ ಖಾರ್ವಿ,‘ನಾಪತ್ತೆಯಾಗಿರುವ ಮೀನುಗಾರ ಪತ್ತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳುಜ. 6ರೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ 6ರಂದು ಮಲ್ಪೆಯಲ್ಲಿ ಸುಮಾರುಎರಡುಲಕ್ಷ ಮೀನುಗಾರರು ಪ್ರತಿಭಟನೆ ನಡೆಸುತ್ತೇವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮುಖಂಡ ರಾಮ ಮೊಗೇರ್, ‘ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡರೆ ಮನೆ ಬಾಗಿಲಿಗೆ ಬರುವ ಸರ್ಕಾರಗಳು, ಮೀನುಗಾರರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿವೆ. ಮೀನುಗಾರರು ದೋಣಿ ಸಮೇತ ನಾಪತ್ತೆಯಾಗಿ 20 ದಿನ ಕಳೆಯುತ್ತ ಬಂತು. ಆದರೂಅವರ ಪತ್ತೆಗೆ ಸರ್ಕಾರ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಹಾಗಾದರೆ ಮೀನುಗಾರರ ಜೀವಕ್ಕೆ ಬೆಲೆಯಿಲ್ಲವೇ’ ಎಂದು ಪ್ರಶ್ನಿಸಿದರು.

‘ನಾಪತ್ತೆಯಾಗಿರುವ ಮೀನುಗಾರರ ಕುಟುಂಬದವರು ಅನ್ನ, ನೀರು ಬಿಟ್ಟು ಆತಂಕದಲ್ಲಿ ಕಾಯುತ್ತಿದ್ದಾರೆ. ಕೂಡಲೇ ಮೀನುಗಾರರ ಪತ್ತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು‌’ ಎಂದು ಒತ್ತಾಯಿಸಿದರು.

ಉಪ ವಿಭಾಗಾಧಿಕಾರಿ ಸಾಜಿದ್‌ ಅಹಮ್ಮದ್ ಮುಲ್ಲಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ್, ವಕೀಲ ನಾಗರಾಜ ಇ.ಎಚ್, ಆಳ ಸಮುದ್ರ ಟ್ರಾಲ್ ಬೋಟ್, ಪರ್ಸೀನ್ ಬೋಟ್, ಫಿಶಿಂಗ್ ಬೋಟ್, ಮೀನುಗಾರರ ಒಕ್ಕೂಟ, ದುರ್ಗಾಪರಮೇಶ್ವರಿ ಟ್ರಾಲ್ ಬೋಟ್ ಅಸೋಸಿಯೇಶನ್ ಹಾಗೂ ನಾಡದೋಣಿ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಿನ್ನೆಲೆ:ಡಿ.13ರಂದು ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆಂದು ಎಂಟು ಮಂದಿ ಮೀನುಗಾರರು ‘ಸುವರ್ಣ ತ್ರಿಭುಜ’ ಹೆಸರಿನ ದೋಣಿಯಲ್ಲಿ ತೆರಳಿದ್ದರು. ರಾತ್ರಿ 11ರ ಸುಮಾರಿಗೆ ತೆರಳಿದ್ದ ಮೀನುಗಾರರು, ಡಿ.15ರ ರಾತ್ರಿ ಒಂದು ಗಂಟೆಯವರೆಗೂ ಇತರ ಮೀನುಗಾರರ ಜತೆ ಸಂಪರ್ಕದಲ್ಲಿದ್ದರು. ಬಳಿಕ ಕಡಿತಗೊಂಡ ಸಂಪರ್ಕಈವರೆಗೆ ಸಾಧ್ಯವಾಗಿಲ್ಲ.

ಕರಾವಳಿ ಕಾವಲು ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದೆ.ದೋಣಿಯಲ್ಲಿ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಚಂದ್ರಶೇಖರ, ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT