ಭಾನುವಾರ, ಆಗಸ್ಟ್ 25, 2019
26 °C
ಕುಮಟಾ: ಅಘನಾಶಿನಿಯ ಪ್ರವಾಹದಲ್ಲಿ ಕೊಚ್ಚಿಹೋದ ತೂಗುಸೇತುವೆ

ನೆರವಿಗೆ ಕಾಯದೇ ಕಾಲುಸಂಕ ನಿರ್ಮಾಣ

Published:
Updated:
Prajavani

ಕುಮಟಾ (ಉತ್ತರ ಕನ್ನಡ): ಈಚೆಗೆ ಅಘನಾಶಿನಿ ನದಿಯ ನೆರೆಗೆ ತಾಲ್ಲೂಕಿನ ಸಂತೆಗುಳಿ ತೂಗುಸೇತುವೆ ಕೊಚ್ಚಿ ಹೋಗಿತ್ತು. ಇದರಿಂದ ಹೊರಗಿನ ಸಂಪರ್ಕ ಕಡಿದುಕೊಂಡಿದ್ದ ನಾಲ್ಕು ಗ್ರಾಮಗಳ ಜನರು, ಶ್ರಮದಾನ ಮಾಡಿದರು. ಸಮೀಪದ ಮುಂಡಗಿ ಹೊಳೆಗೆ ತಾವೇ ಕಾಲುಸಂಕ ನಿರ್ಮಿಸಿ ಅನುಕೂಲ ಮಾಡಿಕೊಂಡರು. 

ಕುಮಟಾ–ಸಿದ್ದಾಪುರ ರಸ್ತೆಯ ಸಂತೆಗುಳಿ ಬಳಿ ಅಘನಾಶಿನಿ ನದಿಗೆ ಸುಮಾರು 12 ವರ್ಷಗಳ ಹಿಂದೆ ತೂಗುಸೇತುವೆ ನಿರ್ಮಿಸಲಾಗಿತ್ತು. ಇದರಿಂದ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಂಡಗಿ, ಕಲವೆ, ಬಂಗಣೆ, ಮೊರಸೆ ಮುಂತಾದ ಗ್ರಾಮಗಳಿಗೆ ಸಂಪರ್ಕ ಏರ್ಪಟ್ಟಿತ್ತು. ಈಚೆಗೆ ಅಘನಾಶಿನಿ ಉಕ್ಕಿ ಹರಿದು ಬಂದ ನೆರೆಯಲ್ಲಿ ತೂಗು ಸೇತುವೆ ಕೊಚ್ಚಿ ಹೋಯಿತು. ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದರೂ ನಾಲ್ಕೂ ಗ್ರಾಮಗಳ ಜನರು ಶ್ರಮದಾನ ಮಾಡಿ ಸಾಧ್ಯವಾದ ಮಟ್ಟಿಗೆ ಪರಿಹಾರ ಕಂಡುಕೊಂಡರು.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಖಾದರ್ ಸಾಬ್, ‘ನಾಲ್ಕು ಗ್ರಾಮಗಳಲ್ಲಿ ಸುಮಾರು 300 ಮನೆಗಳಿವೆ. ಅಲ್ಲಿನವರು ಬಿದಿರು, ಕಟ್ಟಿಗೆ, ಹಗ್ಗ ಬಳಸಿ ತಾತ್ಕಾಲಿಕ ಕಾಲು ಸೇತುವೆ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಸುಮಾರು ₹ 75 ಸಾವಿರ ವೆಚ್ಚವಾಗಿಬಹುದು. ನೆರೆ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದ ಶಾಸಕ ದಿನಕರ ಶೆಟ್ಟಿ ₹ 2.20 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ಮಂಜೂರಾಗಿದೆ ಎಂದಿದ್ದಾರೆ’ ಎಂದು ತಿಳಿಸಿದರು.

Post Comments (+)