ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಉದ್ಧಾರಕ್ಕೆ ‘ಅಮೃತ ಸರೋವರ’: ಜಲಮೂಲಕ್ಕೆ ಹೊಸ ಕಳೆಯ ನಿರೀಕ್ಷೆ

12 ತಾಲ್ಲೂಕುಗಳ 14 ಕೆರೆಗಳ ಅಭಿವೃದ್ಧಿಗೆ ಚಾಲನೆ
Last Updated 16 ಜೂನ್ 2022, 19:30 IST
ಅಕ್ಷರ ಗಾತ್ರ

ಕಾರವಾರ: ಜಿ‌ಲ್ಲೆಯ ಜಲಮೂಲಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯಿತಿ ಮುಂದಾಗಿದ್ದು, ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ‘ಅಮೃತ ಸರೋವರ’ಗಳ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ ಎಲ್ಲ 12 ತಾಲ್ಲೂಕುಗಳಲ್ಲಿ 14 ಕೆರೆಗಳ ಅಭಿವೃದ್ಧಿಯಾಗಲಿದೆ.

ಹಂತ ಹಂತವಾಗಿ ಒಟ್ಟು 84 ಜಲಮೂಲಗಳ ಉನ್ನತೀಕರಣಕ್ಕೂ ಕಾಲ ಕೂಡಿ ಬರಲಿದೆ. ಕೆಲವು ಹೊಸ ಕೆರೆಗಳ ನಿರ್ಮಾಣವೂ ಆಗಲಿದೆ. ಈ ಯೋಜನೆಯನ್ನು ಪ್ರಾಶಸ್ತ್ಯದ ಮೇಲೆ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ. ಹಾಗಾಗಿ ಅಧಿಕಾರಿಗಳು ಇದರ ಕಡೆ ಹೆಚ್ಚು ಗಮನ ಹರಿಸಿದ್ದಾರೆ.

‘ಅಮೃತ ಸರೋವರ’ ಹೆಸರಿನಲ್ಲಿ ನಡೆಯುವ ಯೋಜನೆಯ ಕಾಮಗಾರಿಗಳನ್ನು ಉದ್ಯೋಗ ಖಾತ್ರಿಯಡಿ ಮುಂದುವರಿಸಲಾಗುತ್ತದೆ. ಇದರಿಂದ ಕೂಲಿ ಕಾರ್ಮಿಕರಿಗೆ ಉದ್ಯೋಗವೂ ಸಿಗಲಿದೆ.

ಈ ಕಾಮಗಾರಿಗೆ ಒಟ್ಟು ₹ 3.53 ಕೋಟಿಯ ಅಂದಾಜು ಮಾಡಲಾಗಿದೆ. ಜಿಲ್ಲಾ ಪಂಚಾಯಿತಿಯಿಂದ ತಲಾ ₹ 8 ಲಕ್ಷದಂತೆ ಒಟ್ಟು ₹ 96 ಲಕ್ಷ ಅನುದಾನ ಒದಗಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದ ‘ಸಾವಿರ ಕೆರೆ ಅಭಿವೃದ್ಧಿ ಯೋಜನೆ’ಯ ಅನುದಾನವನ್ನೂ ಬಳಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನೇನು ಕಾಮಗಾರಿ?:ಕೆರೆಗಳ ಹೂಳೆತ್ತುವುದು, ಕೆರೆಗಳ ಏರಿ ಮೇಲೆ ಹಸಿರೀಕರಣ, ವಾಯುವಿಹಾರಕ್ಕೆ ಪಥ ನಿರ್ಮಾಣ, ಕೆರೆಗೆ ತಂತಿಬೇಲಿ ಅಳವಡಿಕೆ, ಆಸನಗಳ ವ್ಯವಸ್ಥೆ ಹಾಗೂ ಸುತ್ತಮುತ್ತಲಿನ ನಾಲೆಗಳ ದುರಸ್ತಿಗೆ ಅವಕಾಶವಿದೆ.

‘ಅಭಿವೃದ್ಧಿ ಪಡಿಸಿದ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತದೆ. ಅದನ್ನು ಮೂರು ವರ್ಷಗಳಿಗೆ ಗುತ್ತಿಗೆ ನೀಡಲಾಗುತ್ತದೆ. ಅದರಿಂದ ಬಂದ ಆದಾಯವನ್ನು ಗ್ರಾಮ ಪಂಚಾಯಿತಿಗಳು ಕೆರೆಗಳ ನಿರ್ವಹಣೆಗೆ ಬಳಸಬಹುದು. ಇದಕ್ಕೆ ಅಗತ್ಯವಾದ ಮೀನಿನ ಮರಿಗಳನ್ನು ಮೀನುಗಾರಿಕೆ ಇಲಾಖೆಯಿಂದ ಒಂದು ಬಾರಿ ಉಚಿತವಾಗಿ ಪೂರೈಕೆ ಮಾಡಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಿ.ಎಂ.ಜಕ್ಕಪ್ಪಗೋಳ್ ವಿವರಿಸುತ್ತಾರೆ.

‘ಯೋಜನೆಯ ಮೂಲಕ ಕೆರೆಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ ಮಾತ್ರವಲ್ಲದೇ ಅದರ ಪರಿಸರವನ್ನು ಆಕರ್ಷಕವಾಗಿಯೂ ರೂಪಿಸಲಾಗುತ್ತದೆ. ಇದರಿಂದ ಸ್ಥಳೀಯ ಪ್ರವಾಸೋದ್ಯಮಕ್ಕೂ ಒಂದಷ್ಟು ಉತ್ತೇಜನ ಸಿಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಗುರಿ ತಲುಪಲು ಯತ್ನ’:‘ಅಮೃತ ಸರೋವರ ಯೋಜನೆಯಡಿ ಉದ್ಯೋಗ ಖಾತ್ರಿಯ ಮೂಲಕ ಕೆರೆಗಳ ಅಭಿವೃದ್ಧಿಗೆ ಅವಕಾಶವಿದೆ. ಈ ಹಣಕಾಸು ವರ್ಷದ ಒಳಗಾಗಿ ಪೂರ್ಣಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಈಗಾಗಲೇ ಮಳೆಗಾಲ ಶುರುವಾಗಿರುವ ಕಾರಣ ಎಷ್ಟು ಸಾಧ್ಯವೋ ಅಷ್ಟನ್ನು ಪೂರ್ಣಗೊಳಿಸಿ ನಂತರ ಮುಂದುವರಿಸಲಾಗುತ್ತದೆ. ಆದಷ್ಟು ಮಧ್ಯಮ ಗಾತ್ರದ ಕೆರೆಗಳನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

ಯಾವ್ಯಾವ ಕೆರೆಗಳು?:‌ ಸಿದ್ದಾಪುರ ತಾಲ್ಲೂಕಿನ ಶಿರಳಗಿಯ ಮುಗುಡೂರು ಹರೆಕುಂಟೆ ಕೆರೆ, ಕಾವಂಚೂರಿನ ಅಕ್ಕುಂಜಿ ಕೆರೆ, ಹೊನ್ನಾವರ ತಾಲ್ಲೂಕಿನ ಜಲವಳ್ಳಿಯ ಜಲವಳ್ಳಿ ಕರ್ಕಿ ಕೆರೆ, ಯಲ್ಲಾಪುರ ತಾಲ್ಲೂಕಿನ ಮದನೂರು ಗ್ರಾಮ ಹುಲಗೋಡು ದೊಡ್ಡಕೆರೆ, ಚಂದಗುಳಿ ಗ್ರಾಮ ಕೆರೆ, ಕಾರವಾರ ತಾಲ್ಲೂಕಿನ ಹಣಕೋಣದ ಭೀಮಕೋಲ್ ಕೆರೆ ಅಭಿವೃದ್ಧಿಯಾಗಲಿವೆ.

ಶಿರಸಿ ತಾಲ್ಲೂಕಿಮ ಹಲಗದ್ದೆಯ ಮರಗುಂಡಿ ಸೋನಾಪುರ ಕೆರೆ, ಹಳಿಯಾಳ ತಾಲ್ಲೂಕಿನ ಅರ್ಲವಾಡದ ಹಳಬರ ಕೆರೆ, ನಾಗಶೆಟ್ಟಿಕೊಪ್ಪದ ಹೊಸಕೆರೆ ಎನ್.ಎಸ್. ಕೊಪ್ಪ ಕೆರೆ, ಜೊಯಿಡಾ ತಾಲ್ಲೂಕಿನ ಕ್ಯಾಸಲ್‌ರಾಕ್ ಗ್ರಾಮದ ಕುಣಿಗಿಣಿ ಕೆರೆ, ಪ್ರಧಾನಿ ಗ್ರಾಮದ ಗವೆಗಾಳಿ ಕೆರೆ, ದಾಂಡೇಲಿ ತಾಲ್ಲೂಕಿನ ಬಡಾಕಾನ ಶಿರಡಾ ಕೆರೆ, ಮುಂಡಗೋಡ ತಾಲ್ಲೂಕಿನ ಬಾಚಣಕಿ ಗ್ರಾಮದ ಹೊಲಗಟ್ಟಿ ಕೆರೆ ಈ ಪಟ್ಟಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT