ಶುಕ್ರವಾರ, ಮಾರ್ಚ್ 5, 2021
27 °C
ಮೊದಲ ಹಂತದಲ್ಲಿ 101 ಗ್ರಾ.ಪಂ.ಗಳ 1,380 ಸ್ಥಾನಗಳಿಗೆ ಸದಸ್ಯರ ಆಯ್ಕೆ

ಮೊದಲ ದಿನ 40 ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಡಿ. 22ರಂದು ನಡೆಯಲಿರುವ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಯು ಸೋಮವಾರ ಶುರುವಾಗಿದೆ. ಮೊದಲ ದಿನ 40 ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ.

ಈ ಪೈಕಿ ಕುಮಟಾ ತಾಲ್ಲೂಕಿನಲ್ಲಿ ಅತಿಹೆಚ್ಚು 15, ಭಟ್ಕಳ ತಾಲ್ಲೂಕಿನಲ್ಲಿ 13, ಕಾರವಾರ ತಾಲ್ಲೂಕಿನಲ್ಲಿ ಏಳು, ಅಂಕೋಲಾ ತಾಲ್ಲೂಕಿನಲ್ಲಿ ಮೂರು ಮತ್ತು ಹೊನ್ನಾವರ ತಾಲ್ಲೂಕಿನಲ್ಲಿ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ.

ಚುನಾವಣೆ ಪ್ರಕ್ರಿಯೆಯ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಜಿಲ್ಲೆಯ 101 ಗ್ರಾಮ ಪಂಚಾಯಿತಿಗಳ 1,380 ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ’ ಎಂದರು.

‘ಒಟ್ಟು 698 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಅನ್ವಯವಾಗುವುದಿಲ್ಲ’ ಎಂದು ಹೇಳಿದರು.

‘ಮೊದಲ ಹಂತದಲ್ಲಿ 4,49,955 ಮತದಾರರಿದ್ದಾರೆ. ಈ ಬಾರಿ ಮಂಕಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಹಾಗಾಗಿ ಆ ವ್ಯಾಪ್ತಿಯ ನಾಲ್ಕು ಗ್ರಾಮಗಳನ್ನು ಚುನಾವಣೆ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ಅಲ್ಲಿ ಕ್ಷೇತ್ರ ವಿಂಗಡಣೆ ಮಾಡಿ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಗಳ ಚುನಾವಣೆಗಳನ್ನು ಮತ್ತೊಮ್ಮೆ ಹಮ್ಮಿಕೊಳ್ಳಲಾಗುವುದು‌’ ಎಂದು ಮಾಹಿತಿ ನೀಡಿದರು.

‘ಪ್ರತಿ 10ರಿಂದ 15 ಮತಗಟ್ಟೆಗಳಿಗೆ ಸೆಕ್ಟರ್ ಆಫೀಸರ್ ಮತ್ತು ಸೆಕ್ಟರ್ ಆರೋಗ್ಯ ನಿಯಂತ್ರಕರನ್ನು ನೇಮಿಸಲಾಗಿದೆ. ಪ್ರತಿ ತಾಲ್ಲೂಕಿಗೆ ತಲಾ ಎರಡು ಫ್ಲೈಯಿಂಗ್ ಸ್ಕ್ವಾಡ್ ನಿಯೋಜಿಸಲಾಗಿದೆ. ತಹಶೀಲ್ದಾರ್ ನೇತೃತ್ವದಲ್ಲಿ ಮಾದರಿ ನೀತಿ ಸಂಹಿತೆ ತಂಡವನ್ನು ಪ್ರತಿ ತಾಲ್ಲೂಕಿನಲ್ಲಿ ರಚಿಸಲಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು, ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ತಂಡದಲ್ಲಿ ಇದ್ದಾರೆ’ ಎಂದರು.

‘ಕೋವಿಡ್ ಸಂದರ್ಭದಲ್ಲಿ ಚುನಾವಣೆ ನಡೆಯುತ್ತಿದೆ. ಹಾಗಾಗಿ ಆರೋಗ್ಯ ವಿಚಾರದಲ್ಲಿ ಆ ಇಲಾಖೆಯ ಅಧಿಕಾರಿಗಳ ನಿರ್ಣಯವೇ ಅಂತಿಮವಾಗುತ್ತದೆ. ಕೋವಿಡ್ ಪೀಡಿತರಿಗೂ ಮತದಾನಕ್ಕೆ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆ

‘ಮೊದಲ ಹಂತದಲ್ಲಿ ಮತದಾನ ನಡೆಯುವ ಐದು ತಾಲ್ಲೂಕುಗಳಲ್ಲಿ 53 ಸೂಕ್ಷ್ಮ ಮತಗಟ್ಟೆಗಳು, 164 ಸೂಕ್ಷ್ಮ ಮತಗಟ್ಟೆಗಳು ಹಾಗೂ 513 ಸಾಮಾನ್ಯ ಮತಗಟ್ಟೆಗಳಿವೆ. ಎರಡನೇ ಹಂತದಲ್ಲಿ 72 ಅತಿ ಸೂಕ್ಷ್ಮ, 113 ಸೂಕ್ಷ್ಮ ಹಾಗೂ 479 ಸಾಮಾನ್ಯ ಮತಗಟ್ಟೆಗಳಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದರು.

‘ಭದ್ರತೆಗೆ ಐವರು ಡಿವೈಎಸ್‌ಪಿಗಳು, 17 ಸರ್ಕಲ್ ಇನ್‌ಸ್ಪೆಕ್ಟರ್‌ಗಳು, 70 ಇನ್‌ಸ್ಪೆಕ್ಟರ್‌ಗಳು, 160 ಎಎಸ್ಐಗಳು, 1,160 ಕಾನ್‌ಸ್ಟೆಬಲ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ. 15 ಡಿಎಆರ್ ತುಕಡಿಗಳು, ಆರು ಕೆಎಸ್ಆರ್‌ಪಿ ತುಕಡಿಗಳು, 400 ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗುವುದು. 54 ಚೆಕ್‌‍ಪೋಸ್ಟ್‌ಗಳನ್ನು ತೆರೆಯಲಾಗಿದೆ’ ಎಂದು ಅಂಕಿ ಅಂಶ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ. ಪ್ರಿಯಾಂಗಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಇದ್ದರು.

***

ಚುನಾವಣೆ ಬಹಿಷ್ಕಾರ ಸರಿಯಲ್ಲ. ಸಮಸ್ಯೆಗಳನ್ನು ತಿಳಿಸಲಾದರೂ ಪ್ರತಿನಿಧಿಯ ಅಗತ್ಯವಿದೆ. ಗ್ರಾಮಸ್ಥರಿಗೆ ಮನವರಿಕೆ ಮಾಡಲಾಗುವುದು.

– ಡಾ.ಕೆ. ಹರೀಶಕುಮಾರ್, ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.