ಪ್ರಕೃತಿ ವಿಕೋಪ: ತಕ್ಷಣ ಪರಿಹಾರಕ್ಕೆ ಸೂಚನೆ

7
72ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ

ಪ್ರಕೃತಿ ವಿಕೋಪ: ತಕ್ಷಣ ಪರಿಹಾರಕ್ಕೆ ಸೂಚನೆ

Published:
Updated:
Deccan Herald

ಕಾರವಾರ: ಪ್ರಕೃತಿ ವಿಕೋಪದ ಸಂದರ್ಭ ತಕ್ಷಣ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಖಾತೆಯಲ್ಲಿ ತಲಾ ₹5 ಕೋಟಿ ಠೇವಣಿ ಇಡಲಾಗಿದೆ. ನಷ್ಟದ ಪ್ರಮಾಣವನ್ನು ಪರಿಶೀಲಿಸಿ ಪರಿಹಾರ ನೀಡಲು ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಹಲವು ಜಿಲ್ಲೆಗಳಲ್ಲಿ ಅನಾವೃಷ್ಟಿಯಿದೆ. ಈ ಜಿಲ್ಲೆಗಳಲ್ಲಿ ಇನ್ನು 10 ದಿನಗಳಲ್ಲಿ ಮಳೆಯಾಗದಿದ್ದರೆ ಅಂದಾಜು 8 ಲಕ್ಷ ಹೆಕ್ಟೇರ್ ಕೃಷಿ ನಾಶವಾಗುವ ಸಾಧ್ಯತೆಯಿದೆ. ಎರಡೂ ಸನ್ನಿವೇಶಗಳಲ್ಲಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ 3,176 ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ನೀಡಲಾಗಿದೆ. ಅವುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಅಧಿಕವಾಗಿದ್ದಾರೆ. ಇತರ ಸಮುದಾಯದವರಿಗೂ ಶೀಘ್ರವೇ ವಿತರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರವಾಸೋದ್ಯಮಕ್ಕೆ ₹ 240 ಕೋಟಿ: ‘ಸ್ವದೇಶ ದರ್ಶನ’ ಯೋಜನೆಯಡಿ ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲಾಗುತ್ತಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಪ್ರವಾಸೋದ್ಯಕ್ಕೆ ₹ 240 ಕೋಟಿ ವ್ಯಯಿಸಲಾಗಿದೆ ಎಂದು ಅವರು ತಿಳಿಸಿದರು.

ಬಗರ್ ಹುಕುಂನ ಅರ್ಜಿದಾರರಿಗೆ ಫಾರ್ಮ್ 57ರ ಅಡಿಯಲ್ಲಿ ಈ ಹಿಂದೆ ಅರ್ಜಿ ಸಲ್ಲಿಸದವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಮುಂದಿನ ವರ್ಷದ ಮಾರ್ಚ್ ಒಳಗಾಗಿ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಅಂತಿಮ ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಸೈನಿಕರ ಕುಟುಂಬಗಳಿಗೆ ಪಹಣಿ ವಿತರಣೆ:  ದೇಶ ರಕ್ಷಣೆಯ ವಿವಿಧ ಸಂದರ್ಭಗಳಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಕ್ಕೆ, ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸೈನಿಕರಿಗೆ ಇದೇವೇಳೆ ಸರ್ಕಾರದಿಂದ ತಲಾ ಒಂದು ಎಕರೆ ಜಮೀನಿನ ಪಹಣಿ ಪತ್ರಗಳನ್ನು ಹಸ್ತಾಂತರ ಮಾಡಲಾಯಿತು.

ಈಚೆಗೆ ಛತ್ತೀಸಗಡದಲ್ಲಿ ನಕ್ಸಲರ ದಾಳಿಗೆ ಮೃತಪಟ್ಟ ಬಿಎಸ್‌ಎಫ್ ಯೋಧ, ನಗರದ ವಿಜಯಾನಂದ ನಾಯ್ಕ ಅವರ ತಂದೆ ಸುರೇಶ್ ನಾಯ್ಕ ಮತ್ತು ತಾಯಿ ವಿದ್ಯಾ ನಾಯ್ಕ ಅವರು ಸಚಿವ ದೇಶಪಾಂಡೆ ಅವರಿಂದ ಪಹಣಿ ಪಡೆದುಕೊಂಡರು.

ಜಮ್ಮು ಕಾಶ್ಮೀರದಲ್ಲಿ 1996ರಲ್ಲಿ ನಡೆದ ‘ಆಪರೇಷನ್ ರಕ್ಷಕ್’ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸೈನಿಕ ರಾಜೇಶ್ ಮಲ್ಲು ನಾಯ್ಕ ಅವರಿಗೂ ಸಚಿವರು ಪಹಣಿ ಹಸ್ತಾಂತರಿಸಿದರು. 1999ರಲ್ಲಿ ಇದೇ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಾಜಿ ಯೋಧ ರಮಾಕಾಂತ್ ಮುಕುಂದ್ ಸಾವಂತ್ ಕೂಡ ಪಹಣಿ ಸ್ವೀಕರಿಸಿದರು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಹಮ್ಮದ್ ರೋಷನ್, ಎಎಸ್‌ಪಿ ಗೋಪಾಲ ಬ್ಯಾಕೋಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಜಯಶ್ರೀ ಮೊಗೇರ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !