ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ | ದೇಸಿ ಆಕಳಿಗೆ ಮಧ್ಯಾಹ್ನದ ಬಿಸಿಯೂಟ!

ಪದವೀಧರನ ಆರೈಕೆಯಲ್ಲಿವೆ ‘ಮಲೆನಾಡು ಗಿಡ್ಡ’ ತಳಿಯ 80ಕ್ಕೂ ಅಧಿಕ ಹಸುಗಳು
Last Updated 23 ಮಾರ್ಚ್ 2020, 18:24 IST
ಅಕ್ಷರ ಗಾತ್ರ

ಕಾರವಾರ: ಇವರ ಮನೆಯಲ್ಲಿ ಮಲೆನಾಡು ಗಿಡ್ಡ ಹಸು, ಕರುಗಳಿಗೆ ಮಧ್ಯಾಹ್ನ ಬಿಸಿಯೂಟ ತಿನಿಸುತ್ತಾರೆ. ಶ್ರೀಕೃಷ್ಣಾಷ್ಟಮಿ, ದೀಪಾವಳಿಗೆ ಬೂಂದಿ ಲಾಡು, ಹೋಳಿಗೆ ಊಟ ಕೊಡುತ್ತಾರೆ. ಉಳಿದ ಹಬ್ಬಗಳಲ್ಲಿ ಪಾಯಸ ಮಾಡಿ ಬಡಿಸುತ್ತಾರೆ!

‘ಸುಂದರು.. ಅಂಬಾ ಭವಾನಿ.. ಹಂಡಪ್ಪಿ.. ಬೋಂಟ.. ಬೆಳ್ಳಿ.. ಪದ್ಮಾವತಿ.. ಹಂಪಣ್ಣ.. ಎಲ್ಲ ಬನ್ನಿ, ತಿಂಡಿ ತಿನ್ನಿ..!’ ಎಂದು ಜೋರಾಗಿ ಕೂಗಿ ಕರೆಯುತ್ತಿದ್ದಂತೆ ಒಂದೊಂದೇ ಬಂದು ಮನೆಯ ಮುಂದೆ ಹಾಜರಾಗುತ್ತವೆ.

ಇದು ಹೊನ್ನಾವರ ತಾಲ್ಲೂಕಿನ ಕೊಂಡಕುಳಿಯ ಯುವಕ ವಿನಯ ಶೆಟ್ಟಿ ಅವರ ಮನೆಯಂಗಳದಲ್ಲಿ ಕಂಡುಬರುವ ದೃಶ್ಯ. ಅವರ ಆರೈಕೆಯಲ್ಲಿ ಈಗ ಮಲೆನಾಡು ಗಿಡ್ಡ ತಳಿಯ 80ಕ್ಕೂ ಅಧಿಕ ಆಕಳು ಇವೆ. ಕೆಲವು ಗರ್ಭ ಧರಿಸಿದ್ದು, ಸ್ವಲ್ಪ‍ ದಿನಗಳಲ್ಲಿ 100ರಷ್ಟವಾಗುತ್ತವೆ ಎಂದು ಮುಗುಳ್ನಗುತ್ತಾರೆ.

‘ಇವೆಲ್ಲ ನಮ್ಮ ಮನೆ ಸದಸ್ಯರೇ. ನಾವುಕೊಟ್ಟಿಗೆಯಲ್ಲಿ ಕಟ್ಟಿ ಹಾಕುವುದಿಲ್ಲ. ಜಮೀನಿನ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದು, ಅಲ್ಲೇ ಸುತ್ತಾಡುತ್ತಿರುತ್ತವೆ. ತೋಟ, ಸೊಪ್ಪಿನ ಗುಡ್ಡದಲ್ಲಿ ಅವುಗಳ ಪಾಡಿಗೆ ಮೇಯುತ್ತ, ಕುಣಿಯುತ್ತ, ಓಡುತ್ತ ಇರುತ್ತವೆ’ ಎಂದು ಸಂತೃಪ್ತಿ ವ್ಯಕ್ತಪಡಿಸುತ್ತಾರೆ.

‘ದೇಸಿತಳಿಯ ಹಸುವಿಗೆ ಹಾಲು ಕಡಿಮೆಯಿರುತ್ತದೆ. ಹಾಗಾಗಿ ನಾವು ಹಾಲು ಕರೆಯುವುದೇಇಲ್ಲ. ಎಲ್ಲವನ್ನೂಕರುಗಳಿಗೇ ಬಿಟ್ಟಿದ್ದು, ಮನೆ ಬಳಕೆಗೆ ಪ್ಯಾಕೇಟ್ ಹಾಲು ತರುತ್ತೇವೆ. ಮಲೆನಾಡು ತಳಿಗಳು ನಮ್ಮವು. ಅವುಗಳನ್ನು ಉಳಿಸಬೇಕು ಎಂಬ ಉದ್ದೇಶದಿಂದ ಖರ್ಚು ವೆಚ್ಚಗಳನ್ನೂ ಲೆಕ್ಕಿಸದೇ ಆರೈಕೆ ಮಾಡುತ್ತಿದ್ದೇವೆ’ ಎಂದು ಹೇಳುತ್ತಾರೆ.

ಪತ್ರಿಕೋದ್ಯಮ, ಚರಿತ್ರೆ ವಿಷಯದಲ್ಲಿಸ್ನಾತಕೋತ್ತರ ಪದವೀಧರನಾಗಿರುವ ವಿನಯ ಶೆಟ್ಟಿ, ರಾಜ್ಯಮಟ್ಟದ ಟಿ.ವಿ ವಾಹಿನಿಯೊಂದರಲ್ಲಿ ಸಿಕ್ಕಿದ್ದ ಉದ್ಯೋಗವನ್ನುಹೈನುಗಾರಿಕೆಮತ್ತು ಕೃಷಿಯ ಮೇಲಿನ ಮಮಕಾರದಿಂದ ತ್ಯಜಿಸಿದರು. ಈಗ ಅಡಿಕೆ ಕೃಷಿಯಲ್ಲಿ ಸಿಗುವ ಆದಾಯದಲ್ಲಿ ಒಂದಿಷ್ಟು ಪಾಲನ್ನು ದೇಸಿ ಹಸುಗಳ ಲಾಲನೆ ಪಾಲನೆಗೆ ವಿನಿಯೋಗಿಸುತ್ತಿದ್ದಾರೆ. ತಂದೆಯೊಡನೆ ತೋಟದ ಬೇಸಾಯ ಮಾಡುತ್ತಿದ್ದಾರೆ. ಅವರ ಸಹೋದರರಿಬ್ಬರು ಬೇರೆ ಬೇರೆ ವೃತ್ತಿಗಳಲ್ಲಿದ್ದಾರೆ.

‘ನಮ್ಮ ಮನೆಯಲ್ಲಿ ಸುಮಾರು 40 ವರ್ಷಗಳಿಂದ ಆಕಳು ಸಾಕುತ್ತಿದ್ದೇವೆ. ಅವು ನಮ್ಮ ಪಾಲಿಗೆ ದೇವರಿದ್ದಂತೆ. ಹಾಗಾಗಿ ದಿನವೂ ಅವುಗಳಿಗೆ ಹುಲ್ಲು, ಹಿಂಡಿ, ಗಂಜಿ ಕೊಟ್ಟ ನಂತರವೇ ನಮ್ಮ ಊಟ, ತಿಂಡಿಯೆಲ್ಲ’ ಎಂದು ಅವರ ತಂದೆ ಸುಬ್ರಾಯ ಶೆಟ್ಟಿ ಸಂಭ್ರಮಿಸುತ್ತಾರೆ.

ದಿನಕ್ಕೆ ಒಂದು ಚೀಲ ನುಚ್ಚಕ್ಕಿ!:ಮಲೆನಾಡು ಗಿಡ್ಡ ಹಸುಗಳಿಗೆ ಮೇವಿನ ಕೊರತೆಯಾಗದಂತೆ ವಿನಯ ಶೆಟ್ಟಿ ಮತ್ತು ಕುಟುಂಬದವರು ಕಾಳಜಿ ವಹಿಸುತ್ತಾರೆ.

ಬೇಸಿಗೆಯಲ್ಲಿ ಅಕ್ಕಿ ಹಾಗೂ ತೌಡನ್ನು (ದೂಳು) ಬೇಯಿಸಿ ಗಂಜಿ ಮಾಡುತ್ತಾರೆ. ಅದಕ್ಕೆ ನೀರು ಬೆರೆಸಿ ಕುಡಿಯಲು ಕೊಡುತ್ತಾರೆ.ಜೊತೆಗೇಹತ್ತಿಕಾಳಿನ ಹಿಂಡಿ, ಒಂದು ಚೀಲ (50 ಕೆ.ಜಿ) ನುಚ್ಚಕ್ಕಿಯನ್ನು ಬೇಯಿಸಿ ಬೆಳಿಗ್ಗೆ ಮತ್ತು ಮಧ್ಯಾಹ್ನ, ದಿನಕ್ಕೆ ಐದು ಬಾರಿ ಒಣಹುಲ್ಲನ್ನು ನೀಡುತ್ತಾರೆ. ಜಮೀನಿನಲ್ಲಿ ಎರಡು ತೊಟ್ಟಿಗಳನ್ನು ಇಟ್ಟಿದ್ದು, ಸದಾ ನೀರು ತುಂಬಿಡುತ್ತಾರೆ.

ಪಶು ಆಸ್ಪತ್ರೆಯ ಅಗತ್ಯ:ಕವಲಕ್ಕಿ ಸಮೀಪ ಪಶುವೈದ್ಯ ಆಸ್ಪತ್ರೆಯಿಲ್ಲ ಎಂಬ ಕೊರಗು ಇಲ್ಲಿನ ಹೈನುಗಾರರದ್ದು. ಆಕಳು, ನಾಯಿಯಂತಹ ಸಾಕುಪ್ರಾಣಿಗಳಿಗೆ ಏನೇ ಚಿಕಿತ್ಸೆ ಬೇಕಿದ್ದರೂ 10 ಕಿಲೋಮೀಟರ್ ದೂರದ ಹೊನ್ನಾವರಕ್ಕೆ, ಸಾಲ್ಕೋಡು ಅಥವಾ ಅರೆ ಅಂಗಡಿಗೆಹೋಗಬೇಕಿದೆ.

‘ನಮ್ಮ ಮನೆಯ ಕರುವಿನ ಚಿಕಿತ್ಸೆಗೆ ಆಟೊ ರಿಕ್ಷಾ ಮಾಡಿಕೊಂಡು ಹೊನ್ನಾವರಕ್ಕೆ ಕರೆದೊಯ್ಯುತ್ತೇವೆ. ಮೂಡ್ಕಣಿಹಾಗೂ ಸಾಲ್ಕೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಶುವೈದ್ಯರುಅವುಗಳಮೇಲಿನ ಮಮಕಾರದಿಂದ ಹಲವು ಸಲ ಚಿಕಿತ್ಸೆ ನೀಡಿದ್ದಾರೆ. ಗ್ರಾಮದ ಪ್ರತಿ ಮನೆಯಲ್ಲೂ ಒಂದು, ಎರಡು ಆಕಳು ಇದ್ದೇ ಇವೆ. ಆದ್ದರಿಂದ ಕವಲಕ್ಕಿಯಲ್ಲೇಪಶು ಆಸ್ಪತ್ರೆ ಸ್ಥಾಪನೆಯಾದರೆ ಅನುಕೂಲ’ ಎನ್ನುತ್ತಾರೆ ಸುಬ್ರಾಯ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT