ಗುರುವಾರ , ಫೆಬ್ರವರಿ 25, 2021
31 °C
ನಿರಂತರ ವರ್ಷಧಾರೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟ

ಕಾರವಾರ: ಅಪಾರ ಹಾನಿಯನ್ನೂ ಸುರಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯಲ್ಲಿ ಕುಂಭದ್ರೋಣ ಮಳೆ ಜನಜೀವನನ್ನು ಸಂಪೂರ್ಣ ಅಸ್ತವ್ಯಸ್ತ ಮಾಡಿದೆ. ಭಾನುವಾರ ಸಂಜೆಯಿಂದ ಸುರಿಯುತ್ತಿರುವ ವರ್ಷಧಾರೆಯಿಂದ ಹತ್ತಾರು ಮನೆಗಳಿಗೆ ಹಾನಿಯಾಗಿದೆ. ₹ 8.50 ಲಕ್ಷ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕದ್ರಾ ಮತ್ತು ಕೊಡಸಳ್ಳಿ ಅಣೆಕಟ್ಟೆಗೆ ಸೋಮವಾರ 65,000 ಕ್ಯುಸೆಕ್‌ಗೂ ಅಧಿಕ ಒಳಹರಿವಿತ್ತು. ಹಾಗಾಗಿ ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಕಾಳಿ ನದಿಗೆ ರಾತ್ರಿ 1 ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಯಿತು. ಬೆಳಿಗ್ಗೆ 9ಕ್ಕೆ ಅಣೆಕಟ್ಟೆಯಿಂದ 10 ಗೇಟ್‌ಗಳ ಮೂಲಕ 70 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗಿತ್ತು. ಇದೇವೇಳೆ ವಿದ್ಯುತ್ ಉತ್ಪಾದನೆ ಮಾಡಿ 21 ಸಾವಿರ ಕ್ಯುಸೆಕ್ ನೀರು ಕಾಳಿಯನ್ನು ಸೇರಿತ್ತು.

ಗ್ರಾಮದ 23 ಮನೆಗಳಿಗೆ ನೀರು ನುಗ್ಗಿದ್ದು, ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಉಪವಿಭಾಗಾಧಿಕಾರಿ ಅಭಿಜಿನ್, ಗ್ರೇಡ್– 2 ತಹಶೀಲ್ದಾರ್ ಶ್ರೀದೇವಿ ಭಟ್ಟ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತರಿಗೆ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ತಾತ್ಕಾಲಿಕ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ.

ಮಳೆ ಹಾನಿಗೆ ಸಂಬಂಧಿಸಿ ತಕ್ಷಣ ಸ್ಪಂದಿಸಲು 18 ಗ್ರಾಮ ಪಂಚಾಯ್ತಿಗಳು ಮತ್ತು ನಗರಸಭೆ ವ್ಯಾಪ್ತಿಯಲ್ಲಿ 14 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಳೆಯಿಂದ ಹಾನಿಗೆ ಒಳಗಾದ ವಿವಿಧ ಪ್ರಕರಣಗಳಲ್ಲಿ ಈಗಾಗಲೇ ₹ 10.47 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಗೋಕರ್ಣದಲ್ಲೂ ಭಾರಿ ಮಳೆಯಾಗಿದ್ದು, 11 ಮನೆಗಳಿಗೆ ನೀರು ನುಗ್ಗಿದೆ. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಪ್ರಮಾಣದಲ್ಲಿ ಮಳೆ ಆದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ತೆರೆಯಲು ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊನ್ನಾವರ ತಾಲ್ಲೂಕಿನಲ್ಲಿ ಮಳೆಯೊಂದಿಗೆ ಗಾಳಿಯೂ ಇತ್ತು. ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 

‘ಕಾಸರಕೋಡಿನ ಗಣೇಶ ಪಿ.ಗೌಡ, ಹಳದೀಪುರದ ದಾಮೋದರ ಶಾಬಣ್ಣ ಶಾನಭಾಗ ಅವರ ಅಂಗಡಿಗಳಿಗೆ, ಮೇಲಿನ ಮೂಡ್ಕಣಿಯ ಈಶ್ವರ ವೆಂಕಟ್ರಮಣ ನಾಯ್ಕ, ಅಡಿಕೆಕುಳಿಯ ಕೃಷ್ಣ ನಾಗು ಮರಾಠಿ, ಮುಗ್ವಾದ ಮಂಜುನಾಥ ಮಂಜು ಗೌಡ, ಗುಣವಂತೆಯ ಯಶೋದಾ ಲಕ್ಷ್ಮಣ ಅವರ ಮನೆಗಳಿಗೆ ಹಾನಿಯಾಗಿದೆ. ನವಿಲಗೋಣದ ನಾಗೇಶ ಹನುಮಂತ ದೇಶಭಂಡಾರಿ ಅವರಿಗೆ ಸೇರಿದ ಕೊಟ್ಟಿಗೆಗೂ ಹಾನಿಯಾಗಿದ್ದು. ಒಟ್ಟು ₹ 2.70 ಲಕ್ಷ ಹಾನಿಯ ಅಂದಾಜು ಮಾಡಲಾಗಿದೆ’ ಎಂದು ಕಂದಾಯ ಇಲಾಖೆಯ ಅಧಿಕಾರಿಗಳ ವರದಿ ತಿಳಿಸಿದೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ನಿರಂತರ ಮಳೆಯಿಂದ ವ್ಯಾಪಕವಾಗಿ ಕೊಳೆ ರೋಗ ಬಾಧಿಸಿದೆ. ಎರಡು ಬಾರಿ ಕೊಳೆಮದ್ದು ಸಿಂಪಡಿಸಿದರೂ ಕೊಳೆ ಹಬ್ಬುವುದು ನಿಂತಿಲ್ಲ ಎಂದು ಅಡಿಕೆ ಬೆಳೆಗಾರರು ಆತಂಕ ವ್ಯಕ್ತಪಡಿಸಿದರು.

ಸಹಾಯವಾಣಿ: ಮಳೆಯೂ ಸೇರಿದಂತೆ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೂ ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಶಾಖೆಯ ದೂರವಾಣಿ: 08382 229857 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.