ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್.ಪಿ.ಎಸ್ ರದ್ದತಿಗೆ ಪತ್ರ ಬರೆಯಿರಿ’

ವಿಧಾನಪರಿಷತ್ ಸದಸ್ಯರ ಮೇಲೆ ಒತ್ತಡ ಹೇರಲು ಬಸವರಾಜ ಹೊರಟ್ಟಿ ಸಲಹೆ
Last Updated 30 ನವೆಂಬರ್ 2020, 12:00 IST
ಅಕ್ಷರ ಗಾತ್ರ

ಕಾರವಾರ: ‘ವಿಧಾನಪರಿಷತ್‌ನ ಪದವೀಧರರ ಕ್ಷೇತ್ರಗಳಿಂದ ಹೊಸದಾಗಿ ಆಯ್ಕೆಯಾಗಿರುವ ನಾಲ್ವರು ಸದಸ್ಯರಿಗೆ ಪತ್ರ ಬರೆದು, ಹೊಸ ಪಿಂಚಣಿ ವ್ಯವಸ್ಥೆ (ಎನ್.ಪಿ.ಎಸ್) ರದ್ದು ಮಾಡಲು ಒತ್ತಾಯಿಸಿ’ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಸದಸ್ಯರಿಗೆ ಸಲಹೆ ನೀಡಿದರು.

ನಗರದ ಹಿಂದೂ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ನಿರಂತರ ಹೋರಾಟದ ಕಾರಣ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ನೌಕರರಿಗೂ ವಿವಿಧ ಸವಲತ್ತುಗಳನ್ನು ದೊರಕಿಸಿ ಕೊಟ್ಟಿದ್ದೇವೆ. ಎನ್.ಪಿ.ಎಸ್ ರದ್ದು ಮಾಡಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೂ ಇದೇ ರೀತಿಯ ಹೋರಾಟ ಅಗತ್ಯವಾಗಿದೆ. ಆದ್ದರಿಂದ ಡಿ.5ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿಯ ಎದುರು ನಡೆಯುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.

‘ಕೋವಿಡ್ ಅವಧಿಗೆ ವಿಶೇಷ ಪರಿಹಾರದ ಪ್ಯಾಕೇಜ್ ಕೊಡುವುದು, ಕಾಲ್ಪನಿಕ ವೇತನ ಸಮಿತಿಯ ವರದಿಯ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಅಂದು ಮಂಡಿಸಲಾಗುವುದು’ ಎಂದರು.

‘ಅನುದಾನಿತ ಶಾಲಾ ಶಿಕ್ಷಕರು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು. ಸಂಘದಲ್ಲಿ ಭಿನ್ನಾಭಿಪ್ರಾಯ ಇರಬಾರದು. ಮುಂದಿನ ದಿನಗಳಲ್ಲಿ ಕೇವಲ ಸಂಘದ ಸದಸ್ಯರ ಸಮಸ್ಯೆಗಳನ್ನು ಪರಿಹರಿಸಲು ಗಮನ ಹರಿಸಲಾಗುವುದು. ನಮ್ಮ ಮೂಲಕ ಸೌಲಭ್ಯಗಳನ್ನು ಪಡೆದವರು ನಂತರ ಮರೆಯುವುದು ಸರಿಯಲ್ಲ’ ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಸಂಚಾಲಕ ಪ್ರಕಾಶ ನಾಯ್ಕ, ‘ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಬಸವರಾಜ ಹೊರಟ್ಟಿ ಅವರು 40 ವರ್ಷಗಳಿಂದ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ವೃತ್ತಿಯಲ್ಲಿ ಹಾಗೂ ಜನಪ್ರತಿನಿಧಿಯಾಗಿ ಒಂದೂ ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವ ಅವರದ್ದು’ ಎಂದು ಹೊಗಳಿದರು.

‘ಶಿಕ್ಷಕರಿಗೆ ನೆರವು ನೀಡಲಿ’:

‘ಕೋವಿಡ್‌ನಿಂದ ತೊಂದರೆಗೆ ಒಳಗಾದ ಹಲವು ಕಾರ್ಮಿಕ ವರ್ಗಗಳಿಗೆ ರಾಜ್ಯ ಸರ್ಕಾರವು ಪರಿಹಾರದ ಪ್ಯಾಕೇಜ್ ನೀಡಿತು. ಆದರೆ, ಖಾಸಗಿ ಅನುದಾನ ರಹಿತ ಸಂಸ್ಥೆಗಳ ನೌಕರರಿಗೆ ನೆರವು ಕೊಟ್ಟಿಲ್ಲ. ತಿಂಗಳಿಗೆ ₹ 5 ಸಾವಿರವನ್ನಾದರೂ ಕೊಡುವ ಕನಿಷ್ಠ ಸೌಜನ್ಯ ಸರ್ಕಾರಕ್ಕೆ ಬೇಕು’ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದರು.

ಕಾರ್ಯಕ್ರಮಕ್ಕೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರೂ ಕಾರ್ಮಿಕರೇ. ನಾನು ಹೋರಾಟ ಮಾಡಿದ್ದರಿಂದ ಮುಖ್ಯಮಂತ್ರಿ ಅವರು ಶಿಕ್ಷಣ ಹಕ್ಕು ಕಾಯ್ದೆಯಡಿ ₹ 275 ಕೋಟಿ, ಮತ್ತೊಮ್ಮೆ ₹ 30 ಕೋಟಿ ಬಿಡುಗಡೆ ಮಾಡಿದರು. ಈ ಕಾಯ್ದೆಯಡಿ ₹ 1,200 ಕೋಟಿಗೂ ಅಧಿಕ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರವಾರ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ.ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಪ್ರಭಾಕರ, ರಂಗನಾಥ, ಅರುಣ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT