ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಕೋವಿಡ್ ಕಾಲದಲ್ಲಿ ನೆರವಾದ ಕ್ಯಾಂಟೀನ್

ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
Last Updated 26 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಅಂಕೋಲಾ: ಪಟ್ಟಣದ ಇಂದಿರಾ ಕ್ಯಾಂಟೀನ್, ಕೋವಿಡ್ ಸಂಕಷ್ಟದ ಸಮಯದಲ್ಲಿ ಬಡ ಜನರ ಪಾಲಿನ ಆಶಾಕಿರಣವಾಗಿದೆ. ಜೂನ್ 5ರಂದು ಉದ್ಘಾಟನೆಯಾದ ಕ್ಯಾಂಟೀನ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಆರೋಗ್ಯ ಇಲಾಖೆ ಮತ್ತು ಸಹಕಾರ ಬ್ಯಾಂಕ್‌ನ ಗುತ್ತಿಗೆ ಸಿಬ್ಬಂದಿ, ಬೀದಿಬದಿ ವ್ಯಾಪಾರಿಗಳು, ಟೆಂಪೊ ಹಾಗೂ ಆಟೊ ಚಾಲಕರು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಹೀಗೆ ಹಲವರಿಗೆ ನಿತ್ಯ ಅನ್ನದಾಸೋಹ ಬಡಿಸುತ್ತಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಊಟ, ಉಪಾಹಾರಗಳು ಸಿಗುತ್ತಿರುವ ಕಾರಣ, ಕೋವಿಡ್ ಅವಧಿಯಲ್ಲಿ ಆದಾಯ ಕಳೆದುಕೊಂಡಿರುವ ವಿವಿಧ ವರ್ಗಗಳ ಜನರಿಗೆ ಅನುಕೂಲವಾಗಿದೆ.

ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಸುಮಾರು 300 ಮಂದಿ ನಿತ್ಯ ಗ್ರಾಹಕರಿದ್ದಾರೆ. ರಾಜ್ಯದ ಬೇರೆಬೇರೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಶುಚಿತ್ವ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಆರೋಪಗಳಿದ್ದವು. ಆದರೆ, ಅಂಕೋಲಾದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿದ್ದು, ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ. ಒಟ್ಟು ಆರು ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಮೆನು ಚಾರ್ಟ್ ಆಧಾರದ ಮೇಲೆ ಪ್ರತಿದಿನ ಆಹಾರವನ್ನು ತಯಾರಿಸಲಾಗುತ್ತದೆ.

ಸತೀಶ್ ಸೈಲ್ ಶಾಸಕರಾಗಿದ್ದ ಅವಧಿಯಲ್ಲಿ ಕ್ಯಾಂಟೀನ್ ಕಾಮಗಾರಿ ಆರಂಭಗೊಂಡಿತ್ತು. ನಂತರ ನನೆಗುದಿಗೆ ಬಿದ್ದಿತ್ತು. ಬಳಿಕ ಶಾಸಕಿ ರೂಪಾಲಿ ನಾಯ್ಕ ವಿಶೇಷ ಮುತುವರ್ಜಿ ವಹಿಸಿ ಕ್ಯಾಂಟೀನ್ ಉದ್ಘಾಟನೆ ಆಗುವಂತೆ ಮಾಡಿದ್ದರು. ಪುರಸಭೆಯ ಮಾರ್ಗದರ್ಶನದಲ್ಲಿ ಈ ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿದ್ದು, ಜನಪ್ರತಿನಿಧಿಗಳು ಮತ್ತು ಪುರಸಭೆ ಅಧಿಕಾರಿಗಳ ಕಳಕಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

* ಸರ್ಕಾರದ ನಿಯಮಾವಳಿಯಂತೆ ಪ್ರತಿದಿನ ಆಹಾರಗಳನ್ನು ವಿತರಿಸುತ್ತೇವೆ. ಗುಣಮಟ್ಟದ ಆಹಾರದೊಂದಿಗೆ ಶುಚಿತ್ವಕ್ಕೆ ಮಹತ್ವ ನೀಡಲಾಗುತ್ತಿದೆ.

– ವಿನಯ ನಾಯ್ಕ, ಕ್ಯಾಂಟೀನ್ ಉಸ್ತುವಾರಿ.

* ವಾರಕ್ಕೊಮ್ಮೆ ಅಂಕೋಲಾದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತೇನೆ. ಊಟ ರುಚಿಕರ ಮತ್ತು ಗುಣಮಟ್ಟದಿಂದ ಕೂಡಿದೆ.

– ಸಂತೋಷ ಶಿಂಧೆ, ಸಹಕಾರ ಬ್ಯಾಂಕ್‌ನ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT