ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಒಂದೇ ಬಾರಿ ವರ್ಷದ ದಿನಸಿ ಸಂಗ್ರಹ!

ಮೂಲ ಸೌಕರ್ಯಗಳ ಕೊರತೆಯಿಂದ ಕುಗ್ಗಿದ ಹೊನ್ನಾವರ ತಾಲ್ಲೂಕಿನ ಕುಗ್ರಾಮ ‘ಮಹಿಮೆ’
Last Updated 30 ಜನವರಿ 2020, 7:20 IST
ಅಕ್ಷರ ಗಾತ್ರ

ಕಾರವಾರ: ‘ಬೇಸಿಗೆಯಲ್ಲಿ ಮೂರು ತಿಂಗಳು ಅಡ್ಡಿಯಿಲ್ಲ ಸರ್. ಮಳೆಗಾಲದಲ್ಲಿ ಮಾತ್ರ ಈ ಕಡೆ ಸಂಪರ್ಕವೇ ಇರಲ್ಲ. ನಮ್ಮ ಮನೆಗಳಿಗೆ ಒಂದು ವರ್ಷದ ದಿನಸಿ ಸಾಮಗ್ರಿಯನ್ನು ಮೇ ತಿಂಗಳಲ್ಲೇ ತಂದಿಡ್ತೇವೆ..’

‘ಲ್ಯಾಂಡ್‌ಲೈನ್ ಫೋನ್ ಸರಿಯಿರುದೇ ಇಲ್ಲ.ಊರಿನ ಹತ್ರ ಎಲ್ಲೂ ಮೊಬೈಲ್ ಟವರ್ ಇಲ್ಲ. ಹಾಗಾಗಿ ಅದ್ರ ಸಿಗ್ನಲ್ಲೂ ಸಿಗಲ್ಲ. ಪೋಸ್ಟ್ ಆಫೀಸೂ ಇಲ್ಲ. ಮಳೆಗಾಲ ಇಲ್ಲಿ ಬೈಕ್ ಓಡ್ಸೋದಿರ್ಲಿ, ನೆಲಕ್ಕೆ ಕಾಲಿಟ್ರೆ ಜಾರಿ ಬೀಳುವ ಹಾಗಿರ್ತದೆ...’

‘ಈ ಮಳೆಗಾಲದಲ್ಲಿ ಹಳ್ಳದ ನೀರು ಕಾಲುಸಂಕದ ಮೇಲೆ ಬಂದಿತ್ತು. ಶಾಲೆಗೆ ಹುಡುಗ್ರು ಬರಲು ಒಂದು ತಿಂಗಳು ತೊಂದರೆಯಾಯಿತು.ಹಳ್ಳ ಹರಿಯುವ 15 ಕಿ.ಮೀ ಉದ್ದಕ್ಕೂ ಗದ್ದೆ, ತೋಟದ ಮಣ್ಣನ್ನು ಕೊರೆದಿದೆ...’

ಹೊನ್ನಾವರ ತಾಲ್ಲೂಕಿನಕುಗ್ರಾಮ ಮಹಿಮೆಗೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಎದುರು ಸ್ಥಳೀಯರು ತಮ್ಮ ಊರಿನ ಸಮಸ್ಯೆಗಳನ್ನು ಒಂದೊಂದಾಗಿ ಬಿಚ್ಚಿಟ್ಟರು.

ಊರಿನಸುತ್ತಲೂ ಸುಂದರವಾದ ಬೆಟ್ಟಗುಡ್ಡಗಳು ಕೋಟೆಯಂತೆ ನಿಂತಿವೆ.ಅದರ ತಪ್ಪಲಲ್ಲಿ ಕುಮ್ರಿ ಮರಾಠಿ, ನಾಮಧಾರಿ, ಮುಸ್ಲಿಂ, ಗಾಬಿತ ಸೇರಿದಂತೆ ಹಲವು ಸಮುದಾಯದವರಿದ್ದಾರೆ. ಊರಿನಲ್ಲಿ ಸುಮಾರು ಒಂದು ಸಾವಿರ ಜನಸಂಖ್ಯೆಯಿದೆ. ಅಡಿಕೆ, ಗದ್ದೆ ಕೃಷಿ ಊರಿನ ಅಂದವನ್ನು ಹೆಚ್ಚಿಸಿದೆ.

ಗೇರುಸೊಪ್ಪಾದ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 35 ಕಿಲೋಮೀಟರ್ ಸಾಗಿ ಮಹಿಮೆ ಕ್ರಾಸ್‌ನಲ್ಲಿ ಎಡಭಾಗದ ರಸ್ತೆಯಲ್ಲಿ ಗುಡ್ಡವನ್ನೇರಬೇಕು. ಸುಮಾರು ಮೂರು ಕಿ.ಮೀ ಡಾಂಬರು ರಸ್ತೆಯಿದ್ದು, ನಂತರ ಐದು ಕಿ.ಮೀ ಕಚ್ಚಾ ರಸ್ತೆಯಲ್ಲಿ ಸಾಗಬೇಕು. ಹಳ್ಳದ ನೀರು ಉಕ್ಕಿ ಹರಿದಾಗ ಈ ರಸ್ತೆಯ ಮೂಲಕ ಊರಿಗೆ ಸಂಪರ್ಕ ಕಡಿತವಾಗುತ್ತದೆ. ಖಾಸಗಿ ಜಮೀನಿನ ಮೂಲಕ ಕಾಲುದಾರಿಯಿದ್ದು, ಗದ್ದೆಯ ಓಣಿಯಲ್ಲಿಬೈಕ್ ಪ್ರಯಾಣ ಅನಿವಾರ್ಯವಾಗುತ್ತದೆ.

‘ಕಾಲುದಾರಿಯಲ್ಲಿ ಬಂದರೆ ಊರಿಗೆ ಒಂದೂವರೆ ಕಿಲೋಮೀಟರ್ ಆಗುತ್ತದೆ. ಆದರೆ, ರಸ್ತೆಯಲ್ಲೇ ಬಂದರೆ ಸುಮಾರು ಐದು ಕಿಲೋಮೀಟರ್ ಬೇಕು’ ಎನ್ನುತ್ತಾರೆ ಗ್ರಾಮಸ್ಥ ಶುಖುರ್ಅಕ್ಬರ್ ಖಾನ್.

‘ಹಾಗಾಗಿ ಆರೋಗ್ಯ ಸೇವೆಗಳಿಗೆ 30 ಕಿ.ಮೀ ದೂರದ ಹೊನ್ನಾವರವೇ ಗತಿ. ಹೆರಿಗೆ, ಬಾಣಂತನ ಸಮಯದಲ್ಲಂತೂ ಇಲ್ಲಿನವರ ಸಂಕಷ್ಟ ಹೇಳತೀರದು’ ಎಂದು ಬೇಸರಿಸುತ್ತಾರೆ ಮತ್ತೊಬ್ಬ ಗ್ರಾಮಸ್ಥ ತಿಪ್ಪಯ್ಯ ಸುಬ್ಬ ನಾಯ್ಕ.

ಈ ಪ್ರದೇಶವು ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು ಶಾಸಕ ಸುನೀಲ್ ನಾಯ್ಕ, ಈ ಹಿಂದಿನ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಆದರೆ, ಗ್ರಾಮದ ಅಗತ್ಯ ಬೇಡಿಕೆಗಳು ಈಡೇರುತ್ತಿಲ್ಲ ಎಂಬ ಕೊರಗೂ ಸ್ಥಳೀಯರದ್ದಾಗಿದೆ.

ಬಸ್ ಸಿಬ್ಬಂದಿಗೂ ಸಮಸ್ಯೆ

ಮಹಿಮೆಗೆ ದಿನಕ್ಕೆ ಒಂದು ಬಾರಿ ಬರುವ ಸರ್ಕಾರಿ ಬಸ್ ಹೊರತಾಗಿ ಯಾವುದೇ ಸಾರ್ವಜನಿಕ ಸಾರಿಗೆ ಸಂಪರ್ಕವಿಲ್ಲ. ಹೊನ್ನಾವರದಿಂದ ಸಂಜೆ5.15ಕ್ಕೆ ಹೊರಟು ಗ್ರಾಮದಲ್ಲಿ ರಾತ್ರಿ ಉಳಿದುಕೊಂಡು ಬೆಳಿಗ್ಗೆ 7ಕ್ಕೆ ಮತ್ತೆ ಹೊನ್ನಾವರಕ್ಕೆ ಹೋಗಬೇಕು. ಆದರೆ, ಗ್ರಾಮದಲ್ಲಿ ಹೋಟೆಲ್ ಇಲ್ಲದ ಕಾರಣ ಚಾಲಕ ಮತ್ತು ನಿರ್ವಾಹಕರಿಗೆ ಊಟ, ತಿಂಡಿಯ ಸಮಸ್ಯೆಯಾಗುತ್ತಿದೆ.

ಹಾಗಾಗಿ ಮಹಿಮೆಗೆ ಸಂಜೆ ಬಂದ ಬಸ್, 16 ಕಿ.ಮೀ ದೂರದ ಗೇರುಸೊಪ್ಪಾಕ್ಕೆ ಹೋಗುತ್ತದೆ. ಬೆಳಿಗ್ಗೆ ಅಲ್ಲಿಂದ ಪುನಃಗ್ರಾಮಕ್ಕೆಬಂದು ನಂತರ ಹೊನ್ನಾವರಕ್ಕೆ ತೆರಳುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

‘ಈ ಬಸ್ ತಪ್ಪಿದರೆ ಗ್ರಾಮಸ್ಥರು ಮಹಿಮೆ ಕ್ರಾಸ್‌ವರೆಗೆ ನಡೆಯಬೇಕು ಅಥವಾ ಯಾರಾದರೂ ಬಾಡಿಗೆಗೆ ಮಾಡಿಕೊಂಡು ಬಂದ ಆಟೊರಿಕ್ಷಾ ಬರುವ ತನಕ ಕಾಯಬೇಕು.ಹಾಗಾಗಿ ಊರಿನಲ್ಲಿ ಬಹುತೇಕರು ದ್ವಿಚಕ್ರ ವಾಹನ ಹೊಂದಿದ್ದಾರೆ’ಎಂದು ಹೇಳುತ್ತಾರೆ.

*
ಮಹಿಮೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ.10– 12 ಕಿಲೋಮೀಟರ್ ದೂರದಲ್ಲಿ ಬೇರೆ ಗ್ರಾಮಗಳಿದ್ದರೂ ಆರೋಗ್ಯ ಸೌಕರ್ಯಗಳು ಸೂಕ್ತವಾಗಿಲ್ಲ.
-ತಿಪ್ಪಯ್ಯ ಸುಬ್ಬ ನಾಯ್ಕ,ಗ್ರಾಮಸ್ಥ

*
ಗ್ರಾಮದ ರಸ್ತೆಯ ದುರಸ್ತಿಯಾಗಬೇಕು. ಮಳೆಗಾಲದಲ್ಲಿ ಕೂಡ ಅನಾಯಾಸವಾಗಿ ಸಂಚರಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಅನುಕೂಲ ಮಾಡಿಕೊಡಬೇಕು.
-ಶುಖುರ್ ಅಕ್ಬರ್ ಖಾನ್, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT