ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯಿದ್ದಲ್ಲಿ ಮ್ಯಾಜಿಕ್ ಅಕ್ಷರಶಃ ಸತ್ಯ

ಕಾನೂನು ಅರಿವು– ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಸಿ.ರಾಜಶೇಖರ
Last Updated 8 ಮಾರ್ಚ್ 2022, 13:06 IST
ಅಕ್ಷರ ಗಾತ್ರ

ಕಾರವಾರ: ‘ದೇಶದಲ್ಲಿ ಹಿಂದಿನಿಂದಲೂ ಮಹಿಳೆಗೆ ಗೌರವ, ಪೂಜನೀಯ ಸ್ಥಾನ ನೀಡಲಾಗಿದೆ. ಆದರೂ ಪುರುಷರ ಸಮಾನವಾಗಿ ನೋಡುತ್ತಿಲ್ಲ ಎಂಬ ಲೋಪವಿದೆ. ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಲೇ ಇದ್ದಾರೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ರಾಜಶೇಖರ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಿಂದ ಮಂಗಳವಾರ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು– ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾಯ್ದೆಗಳಿವೆ. ಮಹಿಳೆಯರ ಹಕ್ಕು ಮತ್ತು ಕರ್ತವ್ಯವನ್ನು ಅರಿತು ಕೆಲಸ ಮಾಡಬೇಕಿದೆ. ಮಹಿಳೆಯಿದ್ದಲ್ಲಿ ಮ್ಯಾಜಿಕ್ ನಡೆಯುತ್ತದೆ ಎಂಬುದು ಅಕ್ಷರಶಃ ಸತ್ಯ’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಸಂತೋಷಕುಮಾರ ಶೆಟ್ಟಿ ಮಾತನಾಡಿ, ‘ಮಹಿಳೆಯರನ್ನು ಜಾಗೃತಗೊಳಿಸಬೇಕು, ಮುಖ್ಯವಾಹಿನಿಗೆ ತರಬೇಕು ಎಂಬುದು ಮಹಿಳಾ ದಿನಾಚರಣೆಯ ಹಿಂದಿನ ಉದ್ದೇಶವಾಗಿದೆ. ಇದು ಒಂದೇ ದಿನಕ್ಕೆ ಸೀಮಿತವಾಗದೇ ವರ್ಷವಿಡೀ ಆಗಬೇಕು. ಮಹಿಳೆಯರು ತಮ್ಮತನವನ್ನು ಕಾಪಾಡಿಕೊಂಡು ಬರಬೇಕು’ ಎಂದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಜಿ.ನಾಯಕ, ‘ಸಮಾಜದಲ್ಲಿ ಸಮಾನತೆ ಬರಬೇಕು. ಹಾಗೆಂದು ಸಿಕ್ಕಿದ ಸ್ವಾತಂತ್ರ್ಯವು ಸ್ವೇಚ್ಛಾಚಾರ ಆಗಬಾರದು. ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಂಡು ಮೊಬೈಲ್ ಫೋನ್‌ಗಳನ್ನು ಸ್ವಲ್ಪ ದೂರವಿಡಿ’ ಎಂದು ತಿಳಿಸಿದರು.

ಹೆಚ್ಚು ಅಧ್ಯಯನ ಮಾಡಿ’:

ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಮಾತನಾಡಿ, ‘ನಮ್ಮಲ್ಲೇ ಆತ್ಮವಿಶ್ವಾಸದ ಕೊರತೆಯಿದೆ. ವಿದ್ಯಾಭ್ಯಾಸದಲ್ಲಿ ಶ್ರದ್ಧೆ ವಹಿಸಿದರೆ ಮುಂದಿನ ಜೀವನ ಸುಲಭವಾಗುತ್ತದೆ. ಪ್ರತಿದಿನವೂ ಮಹಿಳಾ ದಿನವಾಗಬೇಕು. ನಮ್ಮ ಶ್ರಮ ಮತ್ತು ಪ್ರಾಮಾಣಿಕತೆಯಿದ್ದಾಗ ನಾವು ಸವಾಲನ್ನು ಎದುರಿಸಲು ಸಾಧ್ಯ. ಇದಕ್ಕೆ ಪೂರ್ವಭಾವಿಯಾಗಿ ಹೆಚ್ಚು ಅಧ್ಯಯನ ಮಾಡಬೇಕು’ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ವಕೀಲೆ ರಾಜೇಶ್ವರಿ ವಿ.ನಾಯ್ಕ ‘ಮಹಿಳೆ ಮತ್ತು ಕಾನೂನು’ ವಿಚಾರವಾಗಿ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಎಂ.ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT