ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರಿಗೆ 719 ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ

ಯೋಜನೆಗೆ ಎರಡೂವರೆ ವರ್ಷ: ಆದ್ಯತೆ ಮೇರೆಗೆ ವಿತರಿಸಲು ಮುಖ್ಯಮಂತ್ರಿ ಸೂಚನೆ
Last Updated 25 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಕಾರವಾರ: ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ) ವಿತರಣೆಯು ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಯೋಜನೆಯು ಜಾರಿಯಾಗಿ ಎರಡೂವರೆ ವರ್ಷಗಳ ಅವಧಿಯಲ್ಲಿ ಉತ್ತರ ಕನ್ನಡದಲ್ಲಿ 719 ಕಾರ್ಡ್‌ಗಳ ವಿತರಣೆಯಾಗಿದೆ.

ಬೆಂಗಳೂರಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಮೀನುಗಾರರಿಗೆ ಆದ್ಯತೆಯ ಮೇರೆಗೆ ಕೆ.ಸಿ.ಸಿ.ಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಮೀನುಗಾರರ ಸಮುದಾಯದಲ್ಲಿ ಈ ಕಾರ್ಡ್‌ಗಳ ಫಲಾನುಭವಿಗಳ ಸಂಖ್ಯೆಯನ್ನು ಒಟ್ಟು 25 ಸಾವಿರಕ್ಕೆ ಏರಿಕೆ ಮಾಡಬೇಕು. ಇದು ಅಭಿಯಾನದ ಮಾದರಿಯಲ್ಲಿ ಆಗಬೇಕು ಎಂದೂ ತಿಳಿಸಿದ್ದರು.

2020ರ ಜ.2ರಂದು ತುಮಕೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೀನುಗಾರರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಂದು ರಾಜ್ಯದಲ್ಲೇ ಮೊದಲ ಬಾರಿಗೆ ಈ ಸವಲತ್ತನ್ನು ಕಾರವಾರದ ಮೀನುಗಾರ ಮಹಿಳೆ ಸುಪ್ರಿಯಾ ಸುಧೀರ ಸಾರಂಗ್ ಪಡೆದುಕೊಂಡಿದ್ದರು.

ಈ ಯೋಜನೆಯಲ್ಲಿ ಜಿಲ್ಲೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತಮ ಪ್ರಗತಿ ಸಾಧಿಸಿದಂತೆ ಕಂಡರೂ ಮುಖಂಡರಲ್ಲಿ ಅಸಮಾಧಾನವಿದೆ.

‘ಯೋಜನೆಯು ಜಾರಿಯಾದ ಆರಂಭದಲ್ಲಿ ಕೆಲವರಿಗೆ ಮಾತ್ರ ಮೀನುಗಾರಿಕಾ ಇಲಾಖೆಯಿಂದ ಮಾಹಿತಿ ನೀಡಲಾಯಿತು. ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಸಿಗುವ ಪ್ರಯೋಜನಗಳ ಬಗ್ಗೆ ಸರಿಯಾಗಿಸಂವಹನ ನಡೆಸಿಲ್ಲ. ಪ್ರಧಾನಮಂತ್ರಿ ಬಂದು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಹೋದ ಬಳಿಕ ಇಲಾಖೆ ಅದನ್ನು ಸಮರ್ಪಕವಾಗಿ ಮುನ್ನಡೆಸಲಿಲ್ಲ’ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ಹೇಳುತ್ತಾರೆ.

ಮೀನುಗಾರಿಕೆಯ ವಿವಿಧ ವಿಭಾಗಗಳಿಗೆ ಬಳಕೆ ಮಾಡಿಕೊಳ್ಳುವ ರೀತಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ ವಿಂಗಡಣೆ ಮಾಡಲಾಗಿರುತ್ತದೆ. ಉದಾಹರಣೆಗೆ, ಒಳನಾಡು ಮೀನುಗಾರಿಕೆಗೆ ಪ್ರತಿ ಎಕರೆಗೆ ₹ 2 ಲಕ್ಷ, ಪಂಜರ ಕೃಷಿಗೆ ಪ್ರತಿ ಫಸಲಿಗೆ ₹ 1 ಲಕ್ಷ, ಹಿನ್ನೀರಿನಲ್ಲಿ ಐದು ತಿಂಗಳ ಅವಧಿಯಲ್ಲಿ ಸೀಗಡಿ ಸಾಕಾಣಿಕೆಗೆ ₹ 2.80 ಲಕ್ಷ, 15 ದಿನಗಳ ಸಮುದ್ರ ಮೀನುಗಾರಿಕೆಗೆ (15x20 ಮೀಟರ್ ಅಳತೆಯ ದೋಣಿ) ₹ 3.30 ಲಕ್ಷ ಸೇರಿದಂತೆ ವಿವಿಧ ಅಗತ್ಯಗಳಿಗೆ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಳ್ಳಬಹುದು.

ಅರ್ಜಿಯಲ್ಲಿ ಉಲ್ಲೇಖಿಸಿದ ಉದ್ದೇಶಕ್ಕೆ ಅನುಗುಣವಾಗಿ ಕ್ರೆಡಿಟ್ ಕಾರ್ಡ್‌ನಲ್ಲಿ ವಹಿವಾಟಿನ ಮಿತಿಯು ₹ 1.50 ಲಕ್ಷದಿಂದ ₹ 3 ಲಕ್ಷದವರೆಗೆ ನಿಗದಿಯಾಗುತ್ತದೆ. ನಿಗದಿತ ಅವಧಿಯಲ್ಲಿ ಕಂತು ಪಾವತಿಸಿದವರಿಗೆ ಬಡ್ಡಿ ದರದಲ್ಲಿ ಸ್ವಲ್ಪ ರಿಯಾಯಿತಿ ಇರುತ್ತದೆ.

‘₹ 3.79 ಕೋಟಿ ಹಂಚಿಕೆ’:

‘ಜಿಲ್ಲೆಯಲ್ಲಿ ಮೀನುಗಾರರಿಗೆ ಈವರೆಗೆ ₹ 3.79 ಕೋಟಿ ಮೊತ್ತದವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಸುಮಾರು 300ರಷ್ಟು ಅರ್ಜಿಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗಿದೆ. ಅವುಗಳನ್ನು ಪರಿಶೀಲಿಸಿ ಮೀನುಗಾರರಿಗೆ ಕಾರ್ಡ್‌ಗಳ ವಿತರಣೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಪ್ರಗತಿ ಉತ್ತಮವಾಗಿದೆ’ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಕವಿತಾ ಆರ್.ಕೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT