ಸೋಮವಾರ, ಸೆಪ್ಟೆಂಬರ್ 20, 2021
21 °C
ಪಡುಬಿದ್ರಿ: ಆರು ವರ್ಷಗಳ ನಂತರ ಪೂರ್ಣಗೊಂಡ ನಿರ್ಮಾಣ ಕಾಮಗಾರಿ

ಕಲ್ಸಂಕ ಸೇತುವೆ: ವಾಹನ ಸಂಚಾರಕ್ಕೆ ಮುಕ್ತ

ಹಮೀದ್‌ ಪಡುಬಿದ್ರಿ Updated:

ಅಕ್ಷರ ಗಾತ್ರ : | |

Prajavani

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಕಲ್ಸಂಕ ಸೇತುವೆ ಆರು ವರ್ಷಗಳ ಬಳಿಕ ಈಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಪಡುಬಿದ್ರಿ-ಎರ್ಮಾಳು ಭಾಗದಲ್ಲಿ ಕಾಮಿನಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿದ್ದ ಕಲ್ಸಂಕ ಸೇತುವೆ
ಯಲ್ಲಿ ರಸ್ತೆಯ ಒಂದು ಪಾರ್ಶ್ವವನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಇನ್ನೊಂದು ಪಾರ್ಶ್ವದ ಸೇತುವೆ ಸಹಿತ ರಸ್ತೆ ಕಾಮಗಾರಿ ಆರಂಭಿಸಲಾಗಿತ್ತಾದರೂ ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿತ್ತು. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ, ವಿವಿಧ ಸಂಘಟನೆಗಳು ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸುತ್ತ ಬಂದಿದ್ದವು.

ಆದರೂ, ಕಾಮಗಾರಿಗೆ ವೇಗ ದೊರಕಿರಲಿಲ್ಲ. ಕಳೆದ ತಿಂಗಳು ಗ್ರಾಮ ಪಂಚಾಯಿತಿಯ ಎಚ್ಚರಿಕೆಯ ಬಳಿಕ ಎಚ್ಚೆತ್ತ ನವಯುಗ ಕಂಪನಿ ಕಾಮಗಾರಿಗೆ ವೇಗ ನೀಡಿತು. ಈಗ ಸೇತುವೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿರುವುದರಿಂದ ಜನ ನಿಟ್ಟುಸಿರು ಬಿಡುವಂತಾಗಿದೆ.

ಪಡುಬಿದ್ರಿ ಪೇಟೆ ಭಾಗದಲ್ಲಿ ಸಾಕಷ್ಟು ಕಾಮಗಾರಿಗಳು ಅಪೂರ್ಣವಾಗಿವೆ. ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಭಾಗದಲ್ಲಿ ಚರಂಡಿ ಸಹಿತ ಸರ್ವಿಸ್ ರಸ್ತೆ ಅಪೂರ್ಣವಾಗಿದೆ. ಬಸ್ ನಿಲ್ದಾಣ, ಆಟೊರಿಕ್ಷಾ, ಟೂರಿಸ್ಟ್ ಕಾರು, ಟೆಂಪೊ ನಿಲುಗಡೆಗೂ ಸೂಕ್ತ ನಿಲ್ದಾಣಗಳ ನಿರ್ಮಾಣ ಇನ್ನಷ್ಟೇ ಆಗಬೇಕಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಸ್ ನಿಲ್ದಾಣ ಇಲ್ಲ: ಪಡುಬಿದ್ರಿ ಪೇಟೆಯಲ್ಲಿ ಬಸ್‌ ನಿಲ್ದಾಣ ಇಲ್ಲದೆ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಡುಬಿದ್ರಿಯಿಂದ ಉಡುಪಿ, ಕಾರ್ಕಳ ಹಾಗೂ ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರು ಮಳೆ, ಗಾಳಿ, ಬಿಸಿಲು ಏನೇ ಇದ್ದರೂ ತೆರೆದ ಸ್ಥಳದಲ್ಲಿ ನಿಲ್ಲಬೇಕಾಗಿದೆ. ಜಾಗ ಗುರುತಿಸಿ ಕೂಡಲೇ ಬಸ್ ನಿಲ್ದಾಣ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.