ಕಾಲು ಸಂಕದ ಮೇಲೆ ಸರ್ಕಸ್

7
ಮುಕ್ತೆ ಹೊಳೆಗೆ ಸಿಕ್ಕಿಲ್ಲ ಸೇತುವೆ ಭಾಗ್ಯ; ಓಡಾಟಕ್ಕೆ ಸ್ಥಳೀಯರ ಹರಸಾಹಸ

ಕಾಲು ಸಂಕದ ಮೇಲೆ ಸರ್ಕಸ್

Published:
Updated:
Deccan Herald

ಸಿದ್ದಾಪುರ: ಇವರು ಹೊರ ಜಗತ್ತಿಗೆ ಬರಲು ಹೊಳೆ ದಾಟಲೇ ಬೇಕು. ಹೊಳೆ ದಾಟಲು ಅಡಿಕೆ ಮರದ ಸಂಕದ ಮೇಲೆ ಸರ್ಕಸ್ ಮಾಡಲೇಬೇಕು. ತಾಲ್ಲೂಕಿನ ಗಡಿಯಾಚೆಗೆ ಇರುವ ಕೊಡಗಿ, ಹಾಸಳ್ಳಿ, ಹೊಸಗದ್ದೆ, ದೊಡ್ಡಗದ್ದೆ ಎಂಬ ಊರುಗಳ ಜನರ ಮಳೆಗಾಲದ ಪರಿಸ್ಥಿತಿ ಇದು.

ಸ್ಥಳೀಯರು ಮುಕ್ತೆ ಹೊಳೆ ಎಂದು ಕರೆಯುವ ಈ ಹೊಳೆ ದಾಟಲು ಮಳೆಗಾಲದಲ್ಲಿ ಅಡಿಕೆ ಮರದ ಕಾಲು ಸಂಕ ಹಾಕಿಕೊಳ್ಳುತ್ತಾರೆ. ಹಲವಾರು ದಶಕಗಳಿಂದ ಈ ಕಾಲು ಸಂಕವೇ ಇವರಿಗೆ ಹೆದ್ದಾರಿಯಾಗಿದೆ. ಹೊನ್ನಾವರ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಈ ಹಳ್ಳಿಗಳ ಜನರು, ಮುಕ್ತೆ ಹೊಳೆ ದಾಟಿ ಸಿದ್ದಾಪುರ ತಾಲ್ಲೂಕಿನ ಬೀರ್ಲಮಕ್ಕಿಗೆ ಬಂದ ನಂತರವೇ ಸಿದ್ದಾಪುರ ಕಡೆಗೆ ಅಥವಾ ಹೊನ್ನಾವರ ಕಡೆಗೆ ಹೋಗಬೇಕು.

ಈ ಹಳ್ಳಿಗಳಲ್ಲಿರುವ ಸುಮಾರು 30 ಮನೆಗಳ ಜನರು ಪೇಟೆ- ಪಟ್ಟಣಗಳಿಗೆ ಹೋಗಲು ಕಾಲು ಸಂಕ ದಾಟುವುದು ಅನಿವಾರ್ಯವಾಗಿದೆ. ಇವರು ಪಡಿತರ ವಸ್ತುಗಳನ್ನು ತರಲು ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪೆಗೆ ಮುಕ್ತೆ ಹೊಳೆ ದಾಟಿಯೇ ಹೋಗಬೇಕು!

‘ಈ ಭಾಗದ ಜನರ ಸೇತುವೆಯ ಸಮಸ್ಯೆಯನ್ನು ಕ್ಷೇತ್ರದ ಹಿಂದಿನ ಶಾಸಕರಾಗಿದ್ದ ಮಂಕಾಳ ವೈದ್ಯ ಅವರ ಗಮನಕ್ಕೆ ಚುನಾವಣೆಯ ಮೊದಲು ತರಲಾಗಿತ್ತು. ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೂಡ ಈ ಬಗ್ಗೆ ಗೊತ್ತಿದೆ. ಇಲ್ಲಿನ ಜನರಿಗೆ ಪರ್ಯಾಯ ಮಾರ್ಗ ಇಲ್ಲ. ಯಾಕೆಂದರೆ ಈ ಹಳ್ಳಿಗಳ ಪಶ್ಚಿಮದ ದಿಕ್ಕಿನಲ್ಲಿ ದಟ್ಟಾರಣ್ಯ(ಪಶ್ಚಿಮ ಘಟ್ಟ ಪ್ರದೇಶ) ಇರುವುದರಿಂದ ಆ ದಿಕ್ಕಿನಲ್ಲಿ ಘಟ್ಟ ಇಳಿದು ಹೊನ್ನಾವರಕ್ಕೆ ಹೋಗಲು ಸಾಧ್ಯ ಇಲ್ಲ. ಮುಕ್ತೆ ಹೊಳೆಯ ಆಚೆಗಿರುವ ಜನರಿಗೆ ಸೇತುವೆ ಅತ್ಯಂತ ಅಗತ್ಯ. ಶಾಸಕರು ಹಾಗೂ ಸಂಸದರು ಮನಸ್ಸು ಮಾಡಿದರೆ ಈ ಸೇತುವೆ ನಿರ್ಮಾಣ ಸಾಧ್ಯ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ವಿವೇಕ ಭಟ್ಟ ಹೇಳಿದರು.

‘ಈ ಹಿಂದೆ ₹ 42 ಲಕ್ಷ ವೆಚ್ಚದ ಸೇತುವೆ ನಿರ್ಮಾಣದ ಅಂದಾಜು ಯೋಜನೆಯನ್ನು ಸಿದ್ದಾಪುರ ತಾಲ್ಲೂಕಿನ ಜಿಲ್ಲಾ ಪಂಚಾಯ್ತಿ ವಿಭಾಗ ತಯಾರಿಸಿತ್ತು. ಆದರೆ ಈ ಸೇತುವೆಯ ಸ್ಥಳ ಹೊನ್ನಾವರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವುದರಿಂದ ಯೋಜನೆಯನ್ನು ಅಲ್ಲಿಗೆ ಕಳುಹಿಸಲಾಯಿತು’ ಎಂದು ಅವರು ಪ್ರತಿಕ್ರಿಯಿಸಿದರು.

ಈ ಹೊಳೆಯ ಆಚೆಗೆ ಜಲಪಾತವಿದೆ. ಕೊಡಗಿಯಲ್ಲಿ ಪುರಾತನವಾದ ಶಂಭುಲಿಂಗೇಶ್ವರ ದೇವಾಲಯ ಕೂಡ ಇದೆ. ಅಲ್ಲಿ ಒಂದು ಗುಹೆಯಿದ್ದು, ತಾಲ್ಲೂಕಿನ ಐತಿಹಾಸಿಕ ಸ್ಥಳವಾಗಿರುವ ಬಿಳಗಿಯಲ್ಲಿರುವ ಗೋಲ ಬಾವಿಯ ಸುರಂಗ ಮಾರ್ಗ ಆ ಗುಹೆಗೆ ಸಂಪರ್ಕ ನೀಡುತ್ತದೆ ಎನ್ನುತ್ತಾರೆ ಸ್ಥಳೀಯರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !