ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯಲ್ಲಿ ಅಕ್ಕಿಗೆ ಬಂತು ಬೆಲೆ: ಬೆಳೆದ ರೈತರಿಗೆ ಸಿಗುತ್ತಿದೆ ಕೊಂಚ ಲಾಭ

ಲಾಕ್‌ಡೌನ್ ಪರಿಣಾಮ
Last Updated 3 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಬೆಲೆಯಿಲ್ಲದೇ ಬೆಳೆಗಾರರನ್ನು ಕಷ್ಟಕ್ಕೆ ನೂಕುತ್ತಿದ್ದ ಭತ್ತಕ್ಕೆ ಈಗ ಬೆಲೆ ಬಂದಿದೆ. ಲಾಕ್‌ಡೌನ್ ಆರಂಭವಾದ ಮೇಲೆ ಹಳ್ಳಿಗರು ಸಂಗ್ರಹಿಸಿಟ್ಟಿರುವ ಭತ್ತ ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ.

ಹಿಂದೆ, ಹಳ್ಳಿಗರು ಪೇಟೆ ವ್ಯಾಪಾರಸ್ಥರನ್ನು ಸಂಪರ್ಕಿಸಿದರೆ ಅತಿ ಬೆಲೆಗೆ ಭತ್ತವನ್ನು ಮಾರಾಟ ಮಾಡುವ ಸಂದರ್ಭವಿತ್ತು. ಹೀಗಾಗಿ ಬಹುತೇಕ ಹಳ್ಳಿಗರು, ಆಯಾ ಊರಿನಲ್ಲಿರುವ ಸೊಸೈಟಿಯ ಗೋದಾಮು ಅಥವಾ ಮನೆಯಲ್ಲಿಯೇ ಭತ್ತದ ಚೀಲಗಳ ಸಂಗ್ರಹವಿಟ್ಟುಕೊಂಡು, ಮನೆ ಬಳಕೆಗೆ, ಸಂಬಂಧಿಕರಿಗೆ ಅಗತ್ಯವಿದ್ದಾಗ ಅಕ್ಕಿ ಮಾಡಿಸಿಕೊಡುತ್ತಿದ್ದರು.

‘ಪೇಟೆಯಲ್ಲಿ ಕೇಳಿದರೆ ಒಂದು ಕೆ.ಜಿ ಭತ್ತಕ್ಕೆ ₹ 12ರಿಂದ13 ದರ ಹೇಳುತ್ತಿದ್ದರು. ಈಗ ಹಳ್ಳಿಯಲ್ಲೇ ₹ 20ರಿಂದ22ಕ್ಕೆ ಭತ್ತ ಖರೀದಿಯಾಗುತ್ತಿದೆ. ಒಂದು ಕ್ವಿಂಟಲ್ ಭತ್ತದಿಂದ 70 ಕೆ.ಜಿ ಅಕ್ಕಿ ಸಿಗುತ್ತದೆ. ಹೀಗಾಗಿ, ಕ್ವಿಂಟಲ್‌ಗೆ ಸರಾಸರಿ ₹ 1600 ದರ ದೊರೆಯುತ್ತಿದೆ’ ಎನ್ನುತ್ತಾರೆ ಮತ್ತಿಘಟ್ಟದ ಓಮಿ ಮರಾಠಿ.

ತಾಲ್ಲೂಕು ಕೇಂದ್ರದಿಂದ 40 ಕಿ.ಮೀ ದೂರದಲ್ಲಿರುವ ಮುಂಡಗನಮನೆ ಗ್ರೂಪ್ ಗ್ರಾಮಗಳ ಸಹಕಾರ ಸಂಘವು ಒಂದು ವಾರದಿಂದ ರೈತರಿಂದ ಸುಮಾರು 50 ಕ್ವಿಂಟಲ್ ಅಕ್ಕಿ ಖರೀದಿಸಿದೆ. ‘ಜಿಲ್ಲೆಯಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಂಡ ಮೇಲೆ ಅಕ್ಕಿ ಮಿಲ್‌ಗಳು ಬಂದಾಗಿದ್ದವು. ಆಡಳಿತದಿಂದ ಅನುಮತಿ ಸಿಕ್ಕ ಮೇಲೆ ದೇವನಳ್ಳಿಯ ಅಕ್ಕಿ ಮಿಲ್ ಮತ್ತೆ ಆರಂಭವಾಗಿದೆ. ಹಳ್ಳಿಗರಲ್ಲಿ ಅನೇಕರು 50 ಕೆ.ಜಿ, ಒಂದು ಕ್ವಿಂಟಲ್‌ವರೆಗೂ ಅಕ್ಕಿ ಖರೀದಿಸಿ, ಒಯ್ಯುತ್ತಿದ್ದಾರೆ. ಜನರ ಬೇಡಿಕೆಯಂತೆ ಸ್ಥಳೀಯ ಬೆಳೆಗಾರರಿಂದಲೇ ಭತ್ತ ಖರೀದಿಸಿ ಅಕ್ಕಿ ಮಾಡಿಸಿಕೊಡುತ್ತಿದ್ದೇವೆ’ ಎನ್ನುತ್ತಾರೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ.

‘ಇದು ಸವಾಲಿನ ಸಂದರ್ಭ. ಜನರಿಗೆ ಸೌಲಭ್ಯ ಕೊಡುವ ಜತೆಗೆ ಸಿಬ್ಬಂದಿ ಧೈರ್ಯದಿಂದ ಕೆಲಸ ಮಾಡಬೇಕಾಗುತ್ತದೆ. ಸಂಘದ ಸದಸ್ಯರಿಗೆ ಯಾವ ಕೊರತೆಯಾಗದಂತೆ ಸೌಲಭ್ಯ ನೀಡುತ್ತಿದ್ದೇವೆ. ಪಶು ಆಹಾರ ಕೂಡ ಪೂರೈಕೆಯಾಗುತ್ತಿದೆ. ತಾಲ್ಲೂಕು ಕೇಂದ್ರದಲ್ಲಿ ವ್ಯವಹಿಸುವವರೂ ಈಗ ಸಂಘಕ್ಕೆ ಬಂದು, ಸಾಮಗ್ರಿ ಖರೀದಿಸುತ್ತಾರೆ’ ಎನ್ನುತ್ತಾರೆ ಸೊಸೈಟಿ ಕಾರ್ಯದರ್ಶಿ ನಾಗಪತಿ ಹೆಗಡೆ.

ಔಷಧ ಪೂರೈಕೆ:ಜನರಿಗೆ ಪೇಟೆಗೆ ಹೋಗಲು ಸಾಧ್ಯವಾಗದೇ ಇರುವುದರಿಂದ, ದೀರ್ಘಕಾಲೀನ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಅಗತ್ಯವಿರುವ ಔಷಧ, ಗುಳಿಗೆಗಳನ್ನು ಪೂರೈಸಲಾಗುತ್ತಿದೆ. ಪ್ರತಿ ಎರಡು ದಿನಕ್ಕೊಮ್ಮೆ ಸೊಸೈಟಿ ವತಿಯಿಂದ ಅನುಮತಿ ಪಡೆದ ಒಬ್ಬ ವ್ಯಕ್ತಿ, ಪೇಟೆಗೆ ಹೋಗಿ ಔಷಧ ತಂದು ಕೊಡುತ್ತಾರೆ. ತುರ್ತು ಸಂದರ್ಭದಲ್ಲಿ ಸೊಸೈಟಿಯ ವಾಹನದಲ್ಲೇ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಸೊಸೈಟಿ ಮಾಜಿ ಕಾರ್ಯದರ್ಶಿ ವಿ.ಆರ್.ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT