ಭಾನುವಾರ, ಜನವರಿ 19, 2020
28 °C
ಪ್ರತಿಭಟನಾ ಸ್ಥಳದಲ್ಲಿಯೇ ಸಂಕ್ರಾಂತಿ ಹಬ್ಬ ಆಚರಣೆ

ಮೂರನೇ ದಿನವೂ ಮುಂದುವರಿದ ‘ಸಾಗರಮಾಲಾ’ ಧರಣಿ: ಕಾರವಾರ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಸಾಗರಮಾಲಾ’ ಯೋಜನೆಯಡಿ ಅಲೆ ತಡೆಗೋಡೆ ಕಾಮಗಾರಿಯ ವಿರುದ್ಧದ ಹೋರಾಟ ಮೂರನೇ ದಿನವಾದ ಬುಧವಾರವೂ ಹಗಲಿಡೀ ಮುಂದುವರಿಯಿತು. ಮೀನುಗಾರ ಮುಖಂಡರು, ಮಹಿಳೆಯರು ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸಿ ಧರಣಿ ಕೈಗೊಂಡರು. 

ಮೀನುಗಾರರು ಏಂಡಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದ ಪ್ರದೇಶದಲ್ಲಿ ರಾತ್ರೋರಾತ್ರಿ ಮಣ್ಣು, ಕಲ್ಲು ಸುರಿದು ರಸ್ತೆ ನಿರ್ಮಿಸಲಾಗಿತ್ತು. ಇದರಿಂದ ಮೀನುಗಾರರು ಆಕ್ರೋಶಗೊಂಡರು. ಬೆಳಿಗ್ಗೆ ಕಡಲತೀರದ ಬಳಿ ಸೇರಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. 

ಕಡಲತೀರದಲ್ಲಿ ಪ್ರತಿಭಟಿಸಿದ ನಂತರ ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಕುಳಿತರು. ‘ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿ ನ್ಯಾಯ ಒದಗಿಸುವವರೆಗೂ ನಾವು ಹೋರಾಡುತ್ತೇವೆ. ಜನಪ್ರತಿನಿಧಿಗಳು ನಮ್ಮ ಮೇಲೆ ನಿರ್ಲಕ್ಷ್ಯ ಧೋರಣೆ ತಾಳಿರುವುದು ನೋವು ತಂದಿದೆ. ನಮ್ಮ ಕೂಗು ಮುಖ್ಯಮಂತ್ರಿಗೆ ತಲುಪಬೇಕು’ ಎಂದು ಮೀನುಗಾರ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

‘ಸಾಗರಮಾಲಾ’ ಯೋಜನೆಯ ವಿರುದ್ಧ ಮೀನುಗಾರರು ಸೋಮವಾರದಿಂದಲೇ ಪ್ರತಿಭಟನೆಗಿಳಿದಿದ್ದರು. ಇದರ ಕಾವು ಹೆಚ್ಚುತ್ತಿದ್ದಂತೆ ಪೊಲೀಸರು 70ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರು. ಇದನ್ನು ವಿದ್ಯಾರ್ಥಿ ಮುಖಂಡ ಆಶಿಶ್ ಗಾಂವ್ಕರ್ ಹಾಗೂ ಅವರ ಗೆಳೆಯರು ಖಂಡಿಸಿದ್ದಾರೆ. 

ಧರಣಿ ಸ್ಥಳದಲ್ಲೇ ಸಂಕ್ರಾಂತಿ: ನಗರದೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮವಿತ್ತು. ಆದರೆ, 100ಕ್ಕೂ ಹೆಚ್ಚು ಮೀನುಗಾರರು 
ಧರಣಿಯಲ್ಲಿ ಭಾಗವಹಿಸಿದ್ದರು. ಇದರಿಂದ ಮನೆಯಲ್ಲಿ ಪ್ರತಿವರ್ಷದಂತೆ ಹಬ್ಬ ಆಚರಿಸಲು ಸಾಧ್ಯವಾಗಲಿಲ್ಲ. ಮೀನುಗಾರ ಮಹಿಳೆಯರು ಧರಣಿ ನಡೆಸುತ್ತಿದ್ದ ಜಾಗದಲ್ಲೇ ನೆಲಕ್ಕೆ ನೀರು ಹಾಕಿ ತೊಳೆದು, ರಂಗೋಲಿ ಬಿಡಿಸಿದರು. ಅದರ ಕೆಳಗಡೆ ‘ಕಾರವಾರ ಕಡಲತೀರವನ್ನು ಉಳಿಸಿ’ ಎಂದು ಬರೆದಿದ್ದರು.

ನಂತರ ಎಲ್ಲರಿಗೂ ಸಂಕ್ರಾಂತಿ ಕಾಳುಗಳು, ಎಳ್ಳುಂಡೆಗಳನ್ನು ಹಂಚಿ ಪರಸ್ಪರ ಶುಭಾಶಯ ಕೋರಿಕೊಂಡರು. ಭದ್ರತೆ ಒದಗಿಸಿದ ಪೊಲೀಸ್ ಸಿಬ್ಬಂದಿಗೂ ಎಳ್ಳು–ಬೆಲ್ಲ ಹಂಚಿ ಸಂಕ್ರಮಣದ ಶುಭಾಶಯವನ್ನು ಕೋರಿದ್ದು ವಿಶೇಷವಾಗಿತ್ತು.

ಬಂದ್‌ಗೆ ಸಂಘಟನೆಗಳ ಬೆಂಬಲ: ಮೂರು ದಿನ ಪ್ರತಿಭಟನೆ ನಡೆಸಿದ ಬಳಿಕ ಜ.16ರಂದು ಕಾರವಾರ ಬಂದ್‌ಗೆ ಮೀನುಗಾರರು ಕರೆ ಕೊಟ್ಟಿದ್ದಾರೆ. ಇದಕ್ಕೆ ವಿವಿಧ ಸಂಘಟನೆಗಳು ಕೂಡ ಬೆಂಬಲ ನೀಡಿವೆ. 

ಅಂಗಡಿ, ಮುಂಗಟ್ಟುಗಳು, ಹೋಟೆಲ್‌ಗಳು, ಮಾರುಕಟ್ಟೆ ಸೇರಿದಂತೆ ಎಲ್ಲವನ್ನೂ ಮುಚ್ಚಲಾಗುತ್ತಿದೆ. ಟೆಂಪೊ, ಆಟೊ ಚಾಲಕ ಮಾಲೀಕರ ಸಂಘವೂ ಬಂದ್‌ಗೆ ಸಂಪೂರ್ಣ ಬೆಂಬಲ ಪ್ರಕಟಿಸಿದೆ. ಗುರುವಾರ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ನಗರದಲ್ಲಿ ವ್ಯಾಪಾರ ವಹಿವಾಟುಗಳು ಸ್ತಬ್ಧಗೊಳ್ಳುವ ಸಾಧ್ಯತೆಯಿದೆ.

ಬಂದ್‌ಗೆ ವಿವಿಧ ಸಂಘಟನೆಗಳೂ ಸಹಮತ ಸೂಚಿಸಿದ್ದು, ಸಿ.ಪಿ.ಎಂ ಜಿಲ್ಲಾ ಸಮಿತಿಯೂ ಬೆಂಬಲ ಸೂಚಿಸಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಂತಾರಾಮ ನಾಯಕ, ‘ಬಂದರು ವಿಸ್ತರಣೆ ಯೋಜನೆಯನ್ನು ನಿಲ್ಲಿಸುವಂತೆ ಆರು ತಿಂಗಳಿನಿಂದ ಒತ್ತಾಯಿಸಲಾಗುತ್ತಿದೆ. ಆದರೂ ಕಾಮಗಾರಿ ಆರಂಭಿಸಿರುವುದು ಖಂಡನೀಯ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು