ಶುಕ್ರವಾರ, ಏಪ್ರಿಲ್ 3, 2020
19 °C
ತಾಲ್ಲೂಕಿನಲ್ಲಿ 50 ಮಂಗಗಳು ಮೃತ, ಮುನ್ನೆಚ್ಚರಿಕೆ ವಹಿಸಲು ಸಲಹೆ

ಮಂಗನ ಕಾಯಿಲೆ: ಮತ್ತದೇ ಆತಂಕ

ರವೀಂದ್ರ ಭಟ್ ಬಳಗುಳಿ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ತಾಲ್ಲೂಕಿನ ಹೊನ್ನೇಘಟಕಿ ಸಮೀಪ ಮಂಗನ ಕಾಯಿಲೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಆತಂಕ ಮತ್ತು ಭಯ ಮನೆ ಮಾಡಿದೆ.

ತಾಲ್ಲೂಕಿನಲ್ಲಿ ಈವರೆಗೆ 50 ಮಂಗಗಳು ಮೃತಪಟ್ಟಿವೆ. ಅವುಗಳಲ್ಲಿ ಇಟಗಿ, ಹೊನ್ನೇಘಟಕಿ ಭಾಗದಲ್ಲಿಯೇ 17 ಮಂಗಗಳು ಸಾವು ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಒಟ್ಟು 201 ಮಂಗಗಳು ಮೃತಪಟ್ಟಿದ್ದವು. ಕಳೆದ ವರ್ಷ 62 ಜನರಲ್ಲಿ ಮಂಗನ ಕಾಯಿಲೆ ಸೋಂಕು ಕಂಡು ಬಂದಿತ್ತು. ಆದರೆ ಈ ವರ್ಷ ಇದುವರೆಗೆ ಕೇವಲ ಇಬ್ಬರಲ್ಲಿ ಮಾತ್ರ ಮಂಗನ ಕಾಯಿಲೆ ವೈರಾಣು ಇದ್ದುದು ದೃಢ ಪಟ್ಟಿದೆ. ಆದ್ದರಿಂದ ಮಂಗನ ಕಾಯಿಲೆಯ ತೀವ್ರತೆ ಕಳೆದ ವರ್ಷದಷ್ಟು ಇಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವುದಕ್ಕೆ ಸ್ವಲ್ಪ ಮಟ್ಟಿಗೆ ಕಾರಣವಾಗಿದೆ.

‘ಮಂಗನ ಕಾಯಿಲೆ ಕುರಿತು ತಕ್ಷಣದ ಮಾಹಿತಿ ಪಡೆಯಲು ಮೂರು ಮಾರ್ಗಗಳನ್ನು ಅನುಸರಿಸುತ್ತಿದ್ದೇವೆ. ಸಾರ್ವಜನಿಕರು, ಆರೋಗ್ಯ ಇಲಾಖೆಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತೆಯರಿಂದ ಈ ಕುರಿತು ಮಾಹಿತಿ ಸಂಗ್ರಹ ಮಾಡಲಾಗುತ್ತದೆ. ಯಾವುದೇ ಮಾಹಿತಿ ಕೈತಪ್ಪದಂತೆ ಎಚ್ಚರಿಕೆ ವಹಿಸಲಾಗುತ್ತದೆ’ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳುತ್ತವೆ.

‘ ಮಂಗನ ಕಾಯಿಲೆ ನಿರೋಧಕ ಚುಚ್ಚುಮದ್ದು ಅಥವಾ ಡಿಎಂಪಿ ತೈಲದ ಕೊರತೆ ಇಲ್ಲ. ಈ ವರೆಗೆ 18ಸಾವಿರ ಜನರಿಗೆ ಚುಚ್ಚುಮದ್ದು ನೀಡಿದ್ದೇವೆ. 8000 ಬಾಟಲ್ ಡಿಎಂಪಿ ತೈಲ ವಿತರಣೆ ಮಾಡಿದ್ದೇವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ಮಾಹಿತಿ ನೀಡಿದರು.

ಈ ಕಾಯಿಲೆಯ ಭಯದಿಂದ ಕೃಷಿ ಕೆಲಸಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆಗಳು ಕೂಡ ಕಂಡು ಬರುತ್ತಿವೆ. ಕೃಷಿಕರು ಅದರಲ್ಲಿಯೂ ಅಡಿಕೆ ಬೆಳೆಗಾರರಿಗೆ ಕಾಡಿನ ಸೊಪ್ಪು, ದರಕು, ಕರಡ ಅಗತ್ಯ. ಅದರೊಂದಿಗೆ ಅಡಿಕೆ ತೋಟಗಳು ಇರುವುದೇ ಕಾಡಿನ ಅಂಚಿನಲ್ಲಿ. ಈಗ ಮಂಗಗಳೂ ಕೂಡ ಈಗ ಅಡಿಕೆ ತೋಟದಲ್ಲಿರುವುದು ಮಾಮೂಲು ಸಂಗತಿಯಾಗಿದೆ. ಇದರಿಂದ ಇಡೀ ತಾಲ್ಲೂಕಿನಲ್ಲಿಯೂ ಆತಂಕ ಮನೆ ಮಾಡಿದೆ.

‘ಮಂಗನ ಕಾಯಿಲೆಯ ಭಯದಿಂದ ಕೃಷಿ ಕೂಲಿಕಾರರನ್ನು ಕೆಲಸಕ್ಕೆ ತೆಗೆದುಕೊಳ್ಳುವುದೂ ಕಷ್ಟವಾಗುತ್ತಿದೆ. ನಮ್ಮ ಕೆಲಸ ಮಾಡುವ ಸಂದರ್ಭದಲ್ಲಿ ಕೃಷಿ ಕೂಲಿಕಾರರಿಗೆ ಮಂಗನ ಕಾಯಿಲೆ ಬಂದರೆ ನಾವೇ ಅದರ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಇಟಗಿ ಭಾಗದ ಕೃಷಿಕರ ಅಭಿಪ್ರಾಯ.

‘ ಕಳೆದ ವರ್ಷ ಬಾಳಗೋಡಿನಲ್ಲಿ ಉಂಟಾಗಿದ್ದ ಪರಿಸ್ಥಿತಿ ಈ ಬಾರಿ ನಮ್ಮ ಭಾಗದಲ್ಲಿ ಉಂಟಾಗಿದೆ. ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ಅವರ ಕರ್ತವ್ಯ ಮಾಡುತ್ತಿದ್ದಾರೆ. ಆದರೂ ದಿನದಿಂದ ದಿನಕ್ಕೆ ಜನರ ಆತಂಕ ಹೆಚ್ಚಾಗುತ್ತಿದೆ’ ಎಂದು ಇಟಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಹೆಗಡೆ ಕೊಡ್ತಗಣಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು