ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನಕಾಯಿಲೆ: ಉತ್ತರಕನ್ನಡದ ಗಡಿ ತಾಲ್ಲೂಕುಗಳಲ್ಲಿ ಕಳವಳ

ಶಿವಮೊಗ್ಗ ಜಿಲ್ಲೆಯ ಗಡಿಭಾಗದ ಗ್ರಾಮಗಳಲ್ಲಿ ಹೆಚ್ಚಿನ ಪ್ರಕರಣ: ಮುಂಜಾಗ್ರತೆಗೆ ಸಲಹೆ
Last Updated 8 ಜನವರಿ 2019, 19:46 IST
ಅಕ್ಷರ ಗಾತ್ರ

ಕಾರವಾರ:ಹೊನ್ನಾವರ ತಾಲ್ಲೂಕಿನ ಸಾಲ್ಕೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸತ್ತ ಮಂಗನಲ್ಲಿ ಮಂಗನಕಾಯಿಲೆಯ (ಕೆಎಫ್‌ಡಿ) ವೈರಸ್ ಪತ್ತೆಯಾಗಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಕೆಎಫ್‌ಡಿ ನಿಯಂತ್ರಣ ಘಟಕದ ವೈದ್ಯಾಧಿಕಾರಿ ಡಾ.ಸತೀಶ ಶೇಟ್ ತಿಳಿಸಿದ್ದಾರೆ.

ಅತ್ತ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆಯ ಪ್ರಕರಣಗಳು ಹೆಚ್ಚುತ್ತಿರುವುದು ಉತ್ತರಕನ್ನಡದ ಗಡಿ ತಾಲ್ಲೂಕುಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಇದಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅವರು ‘ಪ್ರಜಾವಾಣಿ’ ಜತೆ ಮಂಗಳವಾರ ಮಾತನಾಡಿದರು.‌

‘ನಮ್ಮ ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಡಿಸೆಂಬರ್‌ವರೆಗೆ ನಾನಾ ಕಾರಣಗಳಿಂದ 23 ಮಂಗಗಳು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಅವುಗಳಲ್ಲಿ ಎರಡನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. 13 ಉಣ್ಣಿಗಳ (ಉಣುಗು) ಮಾದರಿಗಳನ್ನೂ ಸಂಗ್ರಹಿಸಲಾಗಿದ್ದು, ಒಂದರಲ್ಲೂ ಮಂಗನಕಾಯಿಲೆಯ ವೈರಸ್ ಕಂಡುಬಂದಿಲ್ಲ’ ಎಂದು ಮಾಹಿತಿ ನೀಡಿದರು.

2018ರಲ್ಲಿ ನಾಲ್ವರಲ್ಲಿ ದೃಢ:‘ನಮ್ಮ ಜಿಲ್ಲೆಯಲ್ಲಿ ಕಳೆದ ವರ್ಷ 19 ರೋಗಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಅವರ ಪೈಕಿ ಹೊನ್ನಾವರ ತಾಲ್ಲೂಕಿನ ಸಂಶಿಯ ನಾಲ್ವರಲ್ಲಿ ದೃಢಪಟ್ಟಿತ್ತು. ಕಳೆದ ಎರಡು ತಿಂಗಳ ಅವಧಿಯಲ್ಲಿ ಯಾರಲ್ಲೂ ಪತ್ತೆಯಾಗಿಲ್ಲ’ ಎಂದು ದೃಢಪಡಿಸಿದರು.

ಹೊನ್ನಾವರ, ಸಿದ್ದಾಪುರ ಮತ್ತು ಭಟ್ಕಳ ತಾಲ್ಲೂಕಿನ ಹಳ್ಳಿಗಳಲ್ಲಿ ಕರಪತ್ರಗಳ ಹಂಚಿಕೆ, ಧ್ವನಿವರ್ಧಕಗಳಲ್ಲಿ ಮಾಹಿತಿ ಪ್ರಕಟಣೆ, ಉಣ್ಣೆ ಕಚ್ಚದಂತೆ ತಡೆಯುವ ಡಿಎನ್‌ಸಿ ತೈಲ ವಿತರಣೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ, ಮನೆಮನೆ ಭೇಟಿ, ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

‘ಸಾಗರ ತಾಲ್ಲೂಕು ಅರಲಗೋಡು ಗ್ರಾಮದಲ್ಲಿ ಮಂಗನಕಾಯಿಲೆಯ ವೈರಸ್ ಇದ್ದ ಮಂಗಗಳು ಮೃತಪಟ್ಟಿವೆ. ಅಲ್ಲಿಂದ 10 ಕಿ.ಮೀ ದೂರದಲ್ಲಿರುವ ಸಿದ್ದಾಪುರ ತಾಲ್ಲೂಕಿನ ಕೊರ್ಲಕೈ ಗ್ರಾಮದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗಿದೆ. ಸ್ಥಳೀಯ ಗ್ರಾಮ ಪಂಚಾಯ್ತಿ ಸಹಕಾರದೊಂದಿಗೆ ಧ್ವನಿವರ್ಧಕದಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಈ ಗ್ರಾಮದಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗಿದೆ’ ಎಂದು ವಿವರಿಸಿದರು.

ವಿವಿಧೆಡೆ ಲಸಿಕೆ ವ್ಯವಸ್ಥೆ:ಜಿಲ್ಲೆಯ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಂಗನಕಾಯಿಲೆಯ ಲಸಿಕೆ ನೀಡಲಾಗುತ್ತಿದೆ. ಹೊನ್ನಾವರ ತಾಲ್ಲೂಕಿನಲ್ಲಿ ಏಳು, ಭಟ್ಕಳ ತಾಲ್ಲೂಕಿನ ಮುರ್ಡೇಶ್ವರ, ಸಿದ್ದಾಪುರ ತಾಲ್ಲೂಕಿನ ಕಾನಸೂರು ಹಾಗೂ ಕೊರ್ಲಕೈ, ಜೊಯಿಡಾ ತಾಲ್ಲೂಕಿನ ಕ್ಯಾಸಲ್‌ರಾಕ್ ಗ್ರಾಮಗಳಲ್ಲಿ ಈ ವ್ಯವಸ್ಥೆಯಿದೆ.

ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಗ್ರಾಮದ ಸುತ್ತಮುತ್ತ ಜ.9ರಂದು ಲಸಿಕೆ ನೀಡಲಾಗುವುದು. ಭಟ್ಕಳದ ಕೊಣಾರ ಗ್ರಾಮದಲ್ಲಿ ಕೂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಡಾ.ಸತೀಶ ಶೇಟ್ ತಿಳಿಸಿದ್ದಾರೆ.

ಸ್ಥಳೀಯವಾಗಿ ಪತ್ತೆಯಾಗದು:ಮಂಗನಕಾಯಿಲೆ ಪತ್ತೆಹಚ್ಚಲು ಸ್ಥಳೀಯವಾಗಿ ಸೌಲಭ್ಯವಿಲ್ಲ. ಶಂಕಿತ ರೋಗಿಯ ರಕ್ತದ ಮಾದರಿ, ಸತ್ತ ಮಂಗನ ಅವಯವಗಳನ್ನು ಪುಣೆಗೆ ಕಳುಹಿಸಲಾಗುತ್ತದೆ. ಅಲ್ಲಿಂದ ವರದಿ ಬಂದ ಮೇಲೆ ದೃಢಪಡುತ್ತದೆ.

ಮುನ್ನೆಚ್ಚರಿಕೆಯೇನು?: ಡೆಂಗಿ ಜ್ವರದ ಬಹುತೇಕ ಲಕ್ಷಣಗಳೇ ಮಂಗನಕಾಯಿಲೆಯಲ್ಲೂ ಕಂಡುಬರುತ್ತದೆ. ಇದನ್ನು ತಡೆಯಲು ಸ್ವರಕ್ಷಣೆ ಮುಖ್ಯ ಎನ್ನುವುದು ಡಾ.ಸತೀಶ ಶೇಟ್ ಅವರ ಸಲಹೆ.

ಕಾಡಿಗೆ ಹೋಗಲೇಬೇಕು ಎಂಬ ಸನ್ನಿವೇಶ ಬಂದಾಗ ಡಿಎನ್‌ಸಿ ತೈಲವನ್ನು ಮೈಗೆ ಲೇಪಿಸಿಕೊಳ್ಳಬೇಕು. ವಾಪಸ್ ಬಂದಮೇಲೆ ಬಿಸಿನೀರಿನಿಂದ ಸ್ನಾನ ಮಾಡಬೇಕು. ಮೇಯಲು ಬಿಟ್ಟ ದನಕರುಗಳನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT