ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರ್ಜಾಲಕ್ಕಿಂತ ಗ್ರಂಥಾಲಯ ಜ್ಞಾನ ಮೇಲು’

ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧೆಡೆಯ ಮಕ್ಕಳು ಭಾಗಿ
Last Updated 2 ಫೆಬ್ರುವರಿ 2020, 12:51 IST
ಅಕ್ಷರ ಗಾತ್ರ

ಶಿರಸಿ: ಯುವ ಬರಹಗಾರರು, ಕವಿಗಳನ್ನು ಹಿರಿಯರು ಪ್ರೋತ್ಸಾಹಿಸಬೇಕು. ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಸಿಗುವಂತಾಗಬೇಕು ಎಂದು ಭಟ್ಕಳದ ಶ್ರೀವಲಿ ಪ್ರೌಢಶಾಲೆ ವಿದ್ಯಾರ್ಥಿ ಪ್ರಜ್ವಲ್ ಕಾಯ್ಕಿಣಿ ಹೇಳಿದರು.

ಉತ್ತರ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ನೇತೃತ್ವದಲ್ಲಿ ಭಾನುವಾರ ಇಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯದ ಒಡನಾಟ ಹಾಗೂ ಪುಸ್ತಕ ಓದಿನಿಂದ ಜ್ಞಾನ ಹೆಚ್ಚುತ್ತದೆ. ಅಂತರ್ಜಾಲ ಜ್ಞಾನಕ್ಕಿಂತ ಗ್ರಂಥಾಲಯದಿಂದ ಜ್ಞಾನ ಹೆಚ್ಚಬೇಕು. ಹೀಗಾಗಿ ಪುಸ್ತಕಗಳ ಓದನ್ನು ಮುಂದುವರಿಸಬೇಕು. ಸಾಹಿತ್ಯ ಓದಿನಿಂದ ಜ್ಞಾನ ವಿಸ್ತಾರವಾಗುತ್ತದೆ ಎಂದರು.

‘ಮಕ್ಕಳ ಉತ್ತರ ಕನ್ನಡ’ ಸ್ಮರಣ ಸಂಚಿಕೆಯನ್ನು ಡಿಡಿಪಿಐ ದಿವಾಕರ ಶೆಟ್ಟಿ ಬಿಡುಗಡೆಗೊಳಿಸಿದರು. ‘ಪಾಲಕರು ಅಂಕದ ಹಿಂದೆ ಬೀಳದೇ, ಮಕ್ಕಳಲ್ಲಿ ಕಲೆ, ಸಾಹಿತ್ಯದ ಅಭಿರುಚಿ ಬಿತ್ತಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಭಾವಶೂನ್ಯ ಸಮಾಜ ಸೃಷ್ಟಿಯಾಗುವ ಅಪಾಯವಿರುತ್ತದೆ’ ಎಂದರು.

ಹಿರಿಯ ಸಾಹಿತಿ ಎನ್.ಆರ್.ನಾಯಕ ಮಾತನಾಡಿ, ‘ಮಕ್ಕಳ ಪ್ರತಿಭೆಯ ಫಲ ಸಮಾಜಕ್ಕೆ ಸಿಗಬೇಕು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಕ್ಕಳು ಸಾಹಿತ್ಯ ಕೊಡುಗೆ ನೀಡಬೇಕು. ಸರ್ಕಾರದ ನೀತಿ, ಇಂಗ್ಲಿಷ್ ಭಾಷೆ ವ್ಯಾಮೋಹದಿಂದ ಮಾತೃಭಾಷೆ ಸತ್ವ ಕಳೆದುಕೊಳ್ಳುತ್ತಿದೆ’ ಎಂದರು.

‘ನನ್ನ ಓದು ನನ್ನ ಅನುಭವ’ ಗೋಷ್ಠಿ, ವಿದ್ಯಾರ್ಥಿ ಕಥಾಗೋಷ್ಠಿ, ಸಂಭಾಷಣಾ ಗೋಷ್ಠಿ, ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು. ಯಲ್ಲಾಪುರ ವೈಟಿಎಸ್‌ಎಸ್ ವಿದ್ಯಾರ್ಥಿನಿ ಸ್ವಾತಿ ನಾಯ್ಕ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಜಿಲ್ಲಾ ಸಂಚಾಲಕ ಸುಮುಖಾನಂದ ಜಲವಳ್ಳಿ, ಕಾರ್ಯದರ್ಶಿ ನಾರಾಯಣ ಹೆಗಡೆ, ಖಜಾಂಚಿ ವಿ.ಐ.ನಾಯಕ, ಪ್ರಮುಖರಾದ ಎಸ್.ಎಚ್.ಗೌಡ, ಚಂದ್ರಶೇಖರ ಪಡುವಣಿ, ಭಾರತಿ ನಲವಡೆ, ಗಂಗಾಧರ ಬಿ.ಎಸ್, ಸುರೇಶ ನಾಯ್ಕ ಇದ್ದರು. ದೇವಿದಾಸ ನಾಯಕ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ ನಾಯ್ಕ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT