ಪ್ರಾಬಲ್ಯ, ದೌರ್ಬಲ್ಯದ ಲೆಕ್ಕಾಚಾರ ಜೋರು

7
ಜಿಲ್ಲೆಯಲ್ಲಿ ಕಾವೇರಿದ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಖಾಡ

ಪ್ರಾಬಲ್ಯ, ದೌರ್ಬಲ್ಯದ ಲೆಕ್ಕಾಚಾರ ಜೋರು

Published:
Updated:

ಕಾರವಾರ: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾವೇರುತ್ತಿದ್ದು, ಈಗಾಗಲೇ ಅಧಿಕಾರದಲ್ಲಿರುವ ಪಕ್ಷಗಳು ತಮ್ಮ ಪ್ರಾಬಲ್ಯ ಮುಂದುವರಿಸುವ ಹುಮ್ಮಸ್ಸಿನಲ್ಲಿವೆ. ಈ ಹಿಂದೆ ಗೆದ್ದಿರುವ ಸಂಸ್ಥೆಗಳಲ್ಲಿ ಅಧಿಕಾರ ಉಳಿಸಿಕೊಂಡು, ಮತ್ತಷ್ಟು ಸಂಸ್ಥೆಗಳಲ್ಲಿ ಅಧಿಕಾರ ಪಡೆಯಲು ತಂತ್ರ ರೂಪಿಸುತ್ತಿವೆ.

ಈ ಬಾರಿ ಚುನಾವಣೆ ಘೋಷಣೆಯಾಗಿರುವ ಎಂಟು ಸ್ಥಳೀಯ ಸಂಸ್ಥೆಗಳ 184 ವಾರ್ಡ್‌ಗಳಿವೆ. ಅವುಗಳಲ್ಲಿ ಹಿಂದಿನ ಬಾರಿ ಕಾಂಗ್ರೆಸ್ ಅತಿ ಹೆಚ್ಚು 92 ವಾರ್ಡ್‌ಗಳಲ್ಲಿ ಜಯ ಕಂಡಿತ್ತು. ಉಳಿದಂತೆ ಬಿಜೆಪಿ 41, ಜೆಡಿಎಸ್ 35 ಸ್ಥಾನಗಳನ್ನ ಗೆದ್ದುಕೊಂಡಿದ್ದವು. ಬಿಎಸ್ಆರ್ ಕಾಂಗ್ರೆಸ್, ಕೆಜೆಪಿ ಮತ್ತು ಪಕ್ಷೇತರರು ಸೇರಿ 16 ಸ್ಥಾನಗಳಲ್ಲಿ ಜಯ ಸಾಧಿಸಿದ್ದರು.

ಹಿಂದಿನ ಬಾರಿಯ ಲೆಕ್ಕಾಚಾರಗಳು ಈ ಬಾರಿ ತಲೆಕೆಳಗಾಗುವ ಸಾಧ್ಯತೆಯಿದೆ. ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೀಗಾಗಿ ಅವರ ಪ್ರಭಾವವೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೆ ಇರುತ್ತದೆ.

ಕುಮಟಾದಲ್ಲಿ ಮೊದಲು ಜೆಡಿಎಸ್‌ನಲ್ಲಿದ್ದ ದಿನಕರ ಶೆಟ್ಟಿ ಅವರು ಬಿಜೆಪಿಗೆ ಬಂದು ಶಾಸಕರಾದರು. ಹಳಿಯಾಳದಲ್ಲಿ ಸುನೀಲ ಹೆಗಡೆ ಅವರೂ ಜೆಡಿಎಸ್‌ನಿಂದ ಬಿಜೆಪಿ ಸೇರಿದ್ದಾರೆ. ಕಾರವಾರದಲ್ಲಿ ಬಿಜೆಪಿಯಲ್ಲಿದ್ದ ಆನಂದ ಅಸ್ನೋಟಿಕರ್ ಈಗ ಜೆಡಿಎಸ್‌ನಲ್ಲಿದ್ದಾರೆ. ಹೀಗಾಗಿ ಮೂರೂ ಕಡೆಗಳಲ್ಲಿ ಪಕ್ಷಗಳ ಪ್ರಾಬಲ್ಯದಲ್ಲಿ ಏರುಪೇರಾಗಿದೆ. ಹಳಿಯಾಳದ ಶಾಸಕ ಆರ್.ವಿ.ದೇಶಪಾಂಡೆ ಮತ್ತೆ ಸಚಿವರಾಗಿದ್ದು ಮತ್ತು ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ ಶಾಸಕರಾಗಿದ್ದು ಈ ಭಾಗದಲ್ಲಿ ಪಕ್ಷಕ್ಕೆ ಪ್ರಯೋಜನವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮುಖಂಡರಿದ್ದಾರೆ.

ಮಹಿಳಾ ಮತದಾರರು ಅಧಿಕ: ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳ ಪೈಕಿ ಪುರುಷ ಮತದಾರರಿಗಿಂತ 1,467 ಮಹಿಳಾ ಮತದಾರರು ಹೆಚ್ಚಿದ್ದಾರೆ. ಆದ್ದರಿಂದ ಕೆಲವು ವಾರ್ಡ್‌ಗಳಲ್ಲಿ ಅವರ ಮತಗಳು ನಿರ್ಣಾಯಕವಾಗುವ ಸಾಧ್ಯತೆಯೂ ಇದೆ.

                                                     ಮತದಾರರ ವಿವರ

ಸ್ಥಳೀಯ ಸಂಸ್ಥೆ ಪುರುಷ ಮಹಿಳೆ ಒಟ್ಟು
ಕಾರವಾರ 25,933 26,371 52,304
ಶಿರಸಿ 24,172 24,296 48,468
ದಾಂಡೇಲಿ 19,852 20,409 40,261
ಅಂಕೋಲಾ 9,036 9,486 18,522
ಕುಮಟಾ 11,412 11,273 22,685
ಹಳಿಯಾಳ 9,096 9,023 18,119
ಯಲ್ಲಾಪುರ 6,740 6,992 13,732
ಮುಂಡಗೋಡ 6,847 6,705 13,552
ಒಟ್ಟು 1,13,088 1,14,555 2,27,643

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !