ಗುರುವಾರ , ಜೂನ್ 24, 2021
29 °C

ಅಪೂರ್ಣ ಕಾಮಗಾರಿ: ಸಂಚಾರ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ಪಟ್ಟಣದ ಕಾಳಮ್ಮನಗರ ವಾರ್ಡ್‌ನ ಮಾರ್ಕೋಜಿ ದೇವಸ್ಥಾನದ ಬಳಿಯ ಲಿಂಕ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ಸಮಸ್ಯೆಯಾಗಿದೆ. ರಸ್ತೆಗೆ ಜಲ್ಲಿಕಲ್ಲು ಹಾಕಿ ಸುಮಾರು ಒಂದು ತಿಂಗಳಾದರೂ ಡಾಂಬರು ಮಾಡಿಲ್ಲ.

ನಗರೋತ್ಥಾನ ಯೋಜನೆಯಡಿಯಲ್ಲಿ ಪಟ್ಟಣದ ಬಹುತೇಕ ರಸ್ತೆಗಳನ್ನು ಕಾಂಕ್ರೀಟ್ ಮಾಡಲಾಗಿದೆ. ಆದರೆ, ಈ ರಸ್ತೆಗೆ ಮಾತ್ರ ಡಾಂಬರೀಕರಣ ಮಾಡಲಾಗುತ್ತಿದೆ. ನಗರೋತ್ಥಾನ ಕಾಮಗಾರಿಗಳು ಜಿಲ್ಲಾಮಟ್ಟದ ಗುತ್ತಿಗೆಯಾಗಿದೆ. ಮೂರು ವರ್ಷಗಳ ಹಿಂದೆಯೂ ರಸ್ತೆ ಕಾಮಗಾರಿಗಾಗಿ ಅಗೆದು ಹಾಕಲಾಗಿತ್ತು. ಮೂರು ವರ್ಷಗಳ ನಂತರ ಈಗ ಕಾಮಗಾರಿ ಆರಂಭಿಸಿದ್ದರೂ ಅಪೂರ್ಣವಾಗಿದೆ. 50ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಅವ್ಯವಸ್ಥೆಯಿಂದ ಜನ ನಡೆದುಕೊಂಡು ಹೋಗಲು, ವಾಹನಗಳಲ್ಲಿ ಸಂಚರಿಸಲು ಬಹಳ ಕಷ್ಟವಾಗುತ್ತಿದೆ.

‘ರಸ್ತೆಯ ಕಾಮಗಾರಿ ಆರಂಭಿಸುವ ಮೊದಲು ಸುಲಭವಾಗಿ ಸಂಚರಿಸುತ್ತಿದ್ದೆವು. ಈಗ ವಾಹನಗಳನ್ನು ರಸ್ತೆಗೆ ಇಳಿಸಲು ಸಾಧ್ಯವಾಗುತ್ತಿಲ್ಲ. ಯಾರಿಗಾದರೂ ಅನಾರೋಗ್ಯವಾದರೆ, ಆಂಬುಲೆನ್ಸ್ ಅಥವಾ ಆಟೊರಿಕ್ಷಾ ತಂದು ರೋಗಿಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಶಿ ಗಣೇಶ್ಚಂದ್ರ ಪಂಡರಾಪುರ.

‘ನೋಟಿಸ್ ನೀಡಲಾಗಿದೆ’

‘ರಸ್ತೆಗೆ ಜಲ್ಲಿಕಲ್ಲು ಹಾಕಿ ಹಾಗೆಯೇ ಬಿಟ್ಟಿರುವುದು ನನ್ನ ಗಮನಕ್ಕೆ ಬಂದಿದೆ. ನಗರೋತ್ಥಾನ ಯೋಜನೆಯ ಈ ಕಾಮಗಾರಿಯ ಗುತ್ತಿಗೆಯನ್ನು ಕಾರವಾರದ ಶ್ರೀರಾಮ ಕನ್‌ಸ್ಟ್ರಕ್ಷನ್ ಕಂಪನಿ ಪಡೆದುಕೊಂಡಿದೆ. ಕಾಮಗಾರಿ ಮುಗಿಸದೇ ಇರುವ ಕುರಿತು ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಕೂಡಲೇ ಕೆಲಸ ಆರಂಭಿಸುವಂತೆ ಸೂಚಿಸಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಅರುಣ ನಾಯ್ಕ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು