ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ವೃದ್ಧಿಸಿದ ಕಾಂಡ್ಲಾ ಕಾಡು: ಉತ್ತರ ಕನ್ನಡದಲ್ಲೇ ಅಧಿಕ

ದೇಶದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ
Last Updated 28 ಜನವರಿ 2022, 19:30 IST
ಅಕ್ಷರ ಗಾತ್ರ

ಕಾರವಾರ: ರಾಜ್ಯದ ಕಾಂಡ್ಲಾ ಕಾಡಿನ ಪ್ರದೇಶವು 2019ರ ನಂತರ 2.57 ಚದರ ಕಿಲೋಮೀಟರ್ (ಸುಮಾರು 257 ಹೆಕ್ಟೇರ್) ಹೆಚ್ಚಳವಾಗಿದೆ. ಎರಡು ವರ್ಷಗಳಲ್ಲಿ ಅತಿಹೆಚ್ಚು ಕಾಂಡ್ಲಾವನ ವಿಸ್ತರಿಸಿದ ರಾಜ್ಯಗಳ ಪೈಕಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. 1.97 ಚದರ ಕಿಲೋಮೀಟರ್‌ನೊಂದಿಗೆ (197 ಹೆಕ್ಟೇರ್) ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲಿ ಮುಂದಿದೆ.

ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿರುವ ‘ಅರಣ್ಯ ಸ್ಥಿತಿಗತಿ ವರದಿ 2021’ರಲ್ಲಿ ಈ ಬಗ್ಗೆ ಉಲ್ಲೇಖವಿದೆ. ದಕ್ಷಿಣ ಕನ್ನಡದಲ್ಲಿ 0.45 ಚದರ ಕಿಲೋಮೀಟರ್ ಮತ್ತು ಉಡುಪಿ ಜಿಲ್ಲೆಯಲ್ಲಿ 0.15 ಚದರ ಕಿಲೋಮೀಟರ್ ಕಾಂಡ್ಲಾ ವನ ವೃದ್ಧಿಯಾಗಿದೆ.

ರಾಜ್ಯದ ಕಾಂಡ್ಲಾ ಅರಣ್ಯವು ಒಟ್ಟು 12.61 ಚದರ ಕಿಲೋಮೀಟರ್ (1,260 ಹೆಕ್ಟೇರ್) ಇದೆ. ಈ ಪೈಕಿ ಉತ್ತರ ಕನ್ನಡದಲ್ಲೇ 10.47 ಚದರ ಕಿಲೋಮೀಟರ್ (1,047 ಹೆಕ್ಟೇರ್) ಒಳಗೊಂಡಿದೆ. ಉಳಿದಂತೆ, ಉಡುಪಿ ಜಿಲ್ಲೆಯಲ್ಲಿ 1.69 ಚದರ ಕಿಲೋಮೀಟರ್ (169 ಹೆಕ್ಟೇರ್) ಹಾಗೂ ದಕ್ಷಿಣ ಕನ್ನಡದಲ್ಲಿ 0.45 (45 ಹೆಕ್ಟೇರ್) ಕಾಂಡ್ಲಾ ವನವಿದೆ. ದೇಶದಲ್ಲಿ ಎರಡು ವರ್ಷಗಳಲ್ಲಿ 1,710 ಹೆಕ್ಟೇರ್‌ಗಳಷ್ಟು ಏರಿಕೆ ಕಾಣುವ ಮೂಲಕ ಪ್ರಸ್ತುತ ಒಟ್ಟು 4.99 ಲಕ್ಷ ಹೆಕ್ಟೇರ್ ಕಾಂಡ್ಲಾ ಸಂಪತ್ತಿದೆ ಎಂದು ವರದಿಯಲ್ಲಿ ವಿವರ ನೀಡಲಾಗಿದೆ.

ಈ ಅಂಕಿ ಅಂಶಗಳಲ್ಲಿ ನೈಸರ್ಗಿಕವಾಗಿ ಬೆಳೆದು ವ್ಯಾಪಿಸಿದ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳು ನಾಟಿ ಮಾಡಿ ಸಂರಕ್ಷಣೆ ಮಾಡಿದ ಕಾಂಡ್ಲಾ ವನದ ಮಾಹಿತಿಗಳೂ ಒಳಗೊಂಡಿವೆ. ಉತ್ತರ ಕನ್ನಡದ ಕಾರವಾರ, ಕುಮಟಾ ಮತ್ತು ಹೊನ್ನಾವರ ತಾಲ್ಲೂಕುಗಳ ಕೆಲವೆಡೆ ಆಸಕ್ತರು, ಸರ್ಕಾರೇತರ ಸಂಘ ಸಂಸ್ಥೆಗಳು ಕೆಲವು ವರ್ಷಗಳಿಂದ ಪಾಳು ಬಿದ್ದಿರುವ ಗಜನಿ ಭೂಮಿಯಲ್ಲಿ (ಉಪ್ಪು ನೀರಿನ ಪ್ರದೇಶ) ಕಾಂಡ್ಲಾ ಸಂರಕ್ಷಣೆ ಮಾಡುತ್ತಿದ್ದಾರೆ.

ಕರಾವಳಿಯ ವಿವಿಧೆಡೆ ಉಪ್ಪು ನೀರು ಮತ್ತು ಸಿಹಿನೀರು ಮಿಶ್ರಣವಾಗುವ ಹಿನ್ನೀರು ಪ್ರದೇಶಗಳಲ್ಲಿ ಸೀಗಡಿ, ಏಡಿ ಕೃಷಿ ಮಾಡಲಾಗುತ್ತದೆ. ಬಳಿಕ ಆ ಪ್ರದೇಶವನ್ನು ಹಾಗೇ ಬಿಟ್ಟರೆ ಅಲ್ಲಿ ಕಾಂಡ್ಲಾ ಅಭಿವೃದ್ಧಿಯಾಗುತ್ತದೆ. ಇದು ಕೂಡ ಈ ವನ್ಯ ಸಂಪತ್ತಿನ ವಿಸ್ತರಣೆಗೆ ತಕ್ಕಮಟ್ಟಿಗೆ ಸಹಕಾರಿಯಾಗಿದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.

‘ರೈಸೋಫೋರಾಕ್ಕೆ ಹೆಚ್ಚು ಯಶಸ್ಸು’:‘ಉತ್ತರ ಕನ್ನಡದಲ್ಲಿ ಅರಣ್ಯ ಇಲಾಖೆಯಿಂದ ರೈಸೊಫೋರಾ ಕಾಂಡ್ಲಾ ತಳಿಯನ್ನು ಹೆಚ್ಚು ನಾಟಿ ಮಾಡಲಾಗುತ್ತಿದೆ. ಸಮುದ್ರದ ಉಬ್ಬರ, ಇಳಿತದ ಪ್ರಭಾವದಲ್ಲೂ ಹಿನ್ನೀರಿನಲ್ಲಿ ಅವು ಚಿಗುರೊಡೆಯುತ್ತವೆ. ಶರಾವತಿ ನದಿಯ ಹಿನ್ನೀರಿನಲ್ಲಿ ಹೆಚ್ಚು ಯಶಸ್ಸು ಕಂಡಿರುವ ತಳಿಯಿದು’ ಎನ್ನುತ್ತಾರೆ ಹೊನ್ನಾವರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.

‘ದಪ್ಪ ಎಲೆಯಿರುವ ಈ ಪ್ರಭೇದದ ಕೋಡುಗಳು ಹೆಚ್ಚು ಉದ್ದ ಇರುತ್ತವೆ. ಅವು ಮರದಿಂದ ನೀರಿಗೆ ಬಿದ್ದಾಗ ತಳಕ್ಕೆ ತಲುಪಿ ಗಟ್ಟಿಯಾಗಿ ನಿಲ್ಲುತ್ತವೆ. ಅವಿಸೀನಿಯಾ, ಸೊನರೇಷಿಯಾ, ಬ್ರುಗೇರಾ ತಳಿಗಳು ನಮ್ಮ ರಾಜ್ಯದಲ್ಲಿ ಕಡಿಮೆ ಪ್ರಮಾಣದಲ್ಲಿವೆ. ಇಲಾಖೆಯಿಂದ ವರ್ಷಕ್ಕೆ ಅಂದಾಜು 50 ಹೆಕ್ಟೇರ್‌ಗಳಷ್ಟು ಕಾಂಡ್ಲಾ ಸಂಪತ್ತಿನ ವಿಸ್ತರಣೆ ಮಾಡಲಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಸರ್ಕಾರದ ಸಿ.ಎಸ್.ಎಸ್ ಮ್ಯಾನ್‌ಗ್ರೋವ್ ಯೋಜನೆಯ ಅನುದಾನ ಬಳಸಿಕೊಂಡು ಹೊನ್ನಾವರ ಮತ್ತು ಕಾರವಾರದಲ್ಲಿ ಕಾಂಡ್ಲಾ ಬೋರ್ಡ್ ವಾಕ್ ನಿರ್ಮಿಸಲಾಗಿದೆ.

– ಗಣಪತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ

ಕಾಂಡ್ಲಾ ಹೆಚ್ಚು ವಿಸ್ತರಣೆಯಾದ ರಾಜ್ಯಗಳು

ರಾಜ್ಯ: ಚದರ ಕಿ.ಮೀ

ಒಡಿಶಾ: 8.34

ಮಹಾರಾಷ್ಟ್ರ: 4.02

ಕರ್ನಾಟಕ: 2.57

ಪಶ್ಚಿಮ ಬಂಗಾಳ: 1.66

ಗೋವಾ: 1.34

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT