ಭಾನುವಾರ, ಜೂನ್ 20, 2021
25 °C
ಕಾರವಾರದಲ್ಲಿ ಮೀನು ಮಾರುಕಟ್ಟೆ ಉದ್ಘಾಟಿಸಿದ ಸಚಿವ ಶಿವರಾಮ ಹೆಬ್ಬಾರ ಮನವಿ

ಅರ್ಜಿ ವಾಪಸ್ ಪಡೆದು ಸಹಕರಿಸಿ: ಶಿವರಾಮ ಹೆಬ್ಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನಗರದ ಮೀನು ಮಾರುಕಟ್ಟೆಯ ಎರಡನೇ ಹಂತದ ಕಾಮಗಾರಿ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಒಂಬತ್ತು ಅಂಗಡಿಯವರಿಗೆ ಇನ್ನೂ ಒಂದು ವಾರ ಕಾಲಾವಕಾಶ ಕೊಡ್ತೇವೆ. ದಯವಿಟ್ಟು ಅರ್ಜಿ ವಾಪಸ್ ಪಡೆದು ಸರ್ಕಾರದೊಂದಿಗೆ ಸಹಕರಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮನವಿ ಮಾಡಿದರು.

ನಗರದ ಗಾಂಧಿ ಮಾರುಕಟ್ಟೆಯ ಬಳಿ ಮೀನು ಮಾರುಕಟ್ಟೆಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆದರೆ ಹೊಸ ಕಟ್ಟಡದಲ್ಲಿ ಮಳಿಗೆ ನೀಡಲಾಗುವುದು. ಈ ಬಗ್ಗೆ ನ್ಯಾಯಾಲಯಕ್ಕೂ ಲಿಖಿತವಾಗಿ ತಿಳಿಸಿದ್ದೇವೆ. ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳಲು ಸಿದ್ಧವಿದ್ದು, ಯಾವುದೇ ಜಿದ್ದಿಗೆ ಬೀಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮೀನು ಮಾರುಕಟ್ಟೆಯಲ್ಲಿ 500 ಮಹಿಳೆಯರು ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಡುವುದು ಉದ್ದೇಶವಾಗಿದೆ. ಇದರ ಕಾಮಗಾರಿಗೆ ₹ 5 ಕೋಟಿ ಹಣವೂ ಸಿದ್ಧವಿದೆ. ಕೆಲವರ ಸ್ವಾರ್ಥದಿಂದ ಬಡ ಮೀನುಗಾರ ಮಹಿಳೆಯರಿಗೆ ಹಾಗೂ ನಗರದ ಗ್ರಾಹಕರಿಗೆ ಅನ್ಯಾಯವಾಗಬಾರದು. ರಸ್ತೆ ಬದಿ ಕುಳಿತು ಮೀನು ಮಾರಾಟ ಮಾಡಿ ಜೀವನ ಕಳೆದವರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಸಹಕರಿಸಿ’ ಎಂದು ಕೋರಿದರು.

ಪರ್ಯಾಯ ಜಾಗದ ಗುರುತು:

‘ಅಂಕೋಲಾದ ಅಲಗೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ 97 ಎಕರೆ ನಾಲ್ಕು ಗುಂಟೆ ಜಮೀನು ಸ್ವಾಧೀನ ಆಗಬೇಕಿದೆ. ಅದರಲ್ಲಿ ಕೇವಲ 63 ಮನೆಗಳಿವೆ. ಅವರೆಲ್ಲರಿಗೂ ಪರ್ಯಾಯ ವ್ಯವಸ್ಥೆಗೆ ಈಗಾಗಲೇ ಜಾಗ ಗುರುತಿಸಲಾಗಿದೆ. ಒಂದೆರಡು ವಾರಗಳಲ್ಲಿ ಅಲ್ಲಿನ ಭೂ ಮಾಲೀಕರ ಜೊತೆ ಪಕ್ಷಾತೀತವಾಗಿ, ಮುಕ್ತವಾಗಿ ಚರ್ಚಿಸಲಾಗುವುದು’ ಎಂದು ಹೇಳಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಬಡ ಮೀನುಗಾರ ಮಹಿಳೆಯರಿಗೆ ಸೌಲಭ್ಯ ಕೊಟ್ಟ ಮಾದರಿಯಲ್ಲೇ ಅಂಗಡಿ ಮಾಲೀಕರಿಗೂ ಅನುಕೂಲ ಮಾಡಿಕೊಡುವ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಹಾಗಾಗಿ ನ್ಯಾಯಾಲಯದ ಮೆಟ್ಟಿಲೇರುವುದು ಸರಿಯಲ್ಲ’ ಎಂದು ಅಭಿಪ್ರಾಯಪ‍ಟ್ಟರು.

‘ಗಾಂಧಿ ಮಾರುಕಟ್ಟೆಯ ಈಗಿನ ಕಟ್ಟಡದ ಶಿಥಿಲವಾಗಿದ್ದು, ಅದರ ಮೇಲೆ ಹೋಗಲು ಭಯವಾಗುತ್ತದೆ. ಅದನ್ನು ತೆರವು ಮಾಡಿ ಹೊಸದನ್ನು ನಿರ್ಮಿಸಬೇಕಿದೆ. ಅಂಗಡಿ ಮಾಲೀಕರಿಗೆ ಅವರದೇ ಜಾಗದಲ್ಲಿ ಮತ್ತೆ ಅವಕಾಶ ಕೊಡಲಾಗುವುದು. ಹಾಗಾಗಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ನಗರದ ಮೂರು ಮೂಲೆಗಳಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು. ಚಿತ್ತಾಕುಲಾ, ಅಮದಳ್ಳಿ ಹಾಗೂ ಶಿರವಾಡ ಅಥವಾ ನಂದನಗದ್ದಾ ಭಾಗದಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗುವುದು. ಆ ಭಾಗದಿಂದ ಬರುವ ಮೀನುಗಾರ ಮಹಿಳೆಯರಿಗೆ ಇದರಿಂದ ಅನುಕೂಲವಾಗಲಿದೆ’ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವ‍ಪ್ರಕಾಶ ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಉಪ ವಿಭಾಗಧಿಕಾರಿ ಪ್ರಿಯಾಂಗಾ ಇದ್ದರು.

ಮೀನು ಮಾರುಕಟ್ಟೆ: ಅಂಕಿ ಅಂಶ

* 9,000 ಚ.ಮೀ- ಮಾರುಕಟ್ಟೆಯ ವಿಸ್ತೀರ್ಣ

* ₹ 4.96 ಕೋಟಿ- ಕಾಮಗಾರಿಗೆ ತಗುಲಿದ ವೆಚ್ಚ

* 170- ಮಹಿಳೆಯರಿಗೆ ಮೊದಲ ಹಂತದಲ್ಲಿ ಅವಕಾಶ

* 500- ಮಹಿಳೆಯರಿಗೆ ಅವಕಾಶ ಕೊಡುವ ಉದ್ದೇಶ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು