ಅನುದಾನ ದುರ್ಬಳಕೆ: ತನಿಖೆಗೆ ಒತ್ತಾಯ

7

ಅನುದಾನ ದುರ್ಬಳಕೆ: ತನಿಖೆಗೆ ಒತ್ತಾಯ

Published:
Updated:
Prajavani

ಕಾರವಾರ: ‘ಸಮುದಾಯ ಭವನಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಹೆಸರಿನಲ್ಲಿ ಹಳಿಯಾಳದಲ್ಲಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರ ಶಂಕರ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

‘ಪಟ್ಟಣದ ಶಹಾಜಿ ರಾಜೆ ಭೋಸ್ಲೆ ಸ್ಮಾರಕ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆಗೆ (ಮರಾಠಾ 3 ಬಿ), ಛತ್ರಪತಿ ಶಿವಾಜಿ ಮರಾಠಾ ಸಮುದಾಯ ಭವನಕ್ಕೆ, ಅದೇ ಹೆಸರಿನಲ್ಲಿ ಮತ್ತೊಂದು ಸಮುದಾಯ ಭವನಕ್ಕೆ, ಹಳಿಯಾಳ ತಾಲ್ಲೂಕು ಟೌನ್ ಕ್ಷತ್ರಿಯ ಮರಾಠಾ ಪರಿಷತ್ತಿಗೆ ತಲಾ ₹ 20 ಲಕ್ಷ ಮಂಜೂರಾಗಿದೆ. ಜತೆಗೇ ಛತ್ರಪತಿ ಶಿವಾಜಿ ಮರಾಠಾ ಸಮುದಾಯ ಭವನಕ್ಕೆ ಹೆಚ್ಚುವರಿ ಅನುದಾನವಾಗಿ ₹ 15 ಲಕ್ಷ ಬಿಡುಗಡೆ ಮಾಡಲಾಗಿದೆ. ತಾಲ್ಲೂಕು ಪಂಚಾಯ್ತಿಯ ಕೆಡಿಪಿ ಸಭೆಗೆ ಸಲ್ಲಿಸಲಾದ ಮಾಹಿತಿಗೂ ಮಾಹಿತಿ ಹಕ್ಕಿನಡಿ ಪಡೆದುಕೊಂಡ ದಾಖಲೆಗಳಲ್ಲಿರುವ ಮಾಹಿತಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ’ ಎಂದು ಅವರು ದೂರಿದರು.

‘ಛತ್ರಪತಿ ಶಿವಾಜಿ ಶಿಕ್ಷಣ ಸಂಸ್ಥೆಯು ಹಳಿಯಾಳದಲ್ಲಿ ಎಸ್.ಎಲ್.ಘೋಟ್ನೇಕರ ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿದೆ. ಅವರು ಪ್ರಭಾವ ಹಾಗೂ ಒತ್ತಡ ಬೀರಿ ತಮ್ಮ ಹೆಸರಿನಲ್ಲಿರುವ ಶಾಲೆಗೆ ಅನುದಾನವನ್ನು ದುರುಪಯೋಗ ಮಾಡಿಸಿಕೊಂಡಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಈ ಬಗ್ಗೆಯೂ ತನಿಖೆಯಾಗಬೇಕು’ ಎಂದು ಅವರು ಒತ್ತಾಯಿಸಿದರು.

‘ಹಳಿಯಾಳ ತಾಲ್ಲೂಕು ಕ್ಷತ್ರಿಯ ಮರಾಠಾ ಪರಿಷತ್ತಿನ ಅಧ್ಯಕ್ಷರನ್ನಾಗಿ ಘೋಟ್ನೇಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಠರಾವು ಪ್ರತಿಯನ್ನು ದಾಖಲೆಗಳಲ್ಲಿ ಲಗತ್ತಿಸಲಾಗಿದೆ. 2017ರ ಫೆ.5ರಂದು ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿ ಹೇಳಲಾಗಿದೆ. ಆದರೆ, ಸಾವಿರಾರು ಸದಸ್ಯರಿರುವ ಈ ಪರಿಷತ್ತಿನ ಕೇವಲ 23 ಸದಸ್ಯರು ಅಂದು ಹಾಜರಿದ್ದರು ಎಂಬುದು ಮಾಹಿತಿ ಹಕ್ಕಿನಲ್ಲಿ ತಿಳಿದುಬಂದಿದೆ’ ಎಂದು ಅವರು ಹೇಳಿದರು. 

‘ನಿವೇಶನವಿಲ್ಲದಿದ್ದರೂ ಹಣ ಮಂಜೂರು’: ‘ಎಸ್.ಎಲ್.ಘೋಟ್ನೇಕರ ಅವರು ಅಧ್ಯಕ್ಷರಾಗಿರುವ ಹಳಿಯಾಳ ತಾಲ್ಲೂಕು ಕ್ಷತ್ರಿಯ ಮರಾಠಾ ಪರಿಷತ್ತಿಗೆ ಪಟ್ಟಣದಲ್ಲಿ ಸ್ವಂತ ನಿವೇಶನವಾಗಲೀ ಕಟ್ಟಡವಾಗಲೀ ಇಲ್ಲ. ಹಾಗಾದರೆ, ಇದರ ಹೆಸರಿನಲ್ಲಿ ಅನುದಾನ  ಮಂಜೂರಾಗಿದ್ದು, ಸಮುದಾಯ ಭವನವನ್ನು ಎಲ್ಲಿ ನಿರ್ಮಿಸಲಾಗುತ್ತಿದೆ ಎಂಬುದು ಪ್ರಶ್ನಾರ್ಹ’ ಎಂದು ನಾಗೇಂದ್ರ ಶಂಕರ್ ಹೇಳಿದರು.

‘ಸಮುದಾಯದ ಅಭಿವೃದ್ಧಿಗೆ ಮಂಜೂರಾಗುವ ಹಣ, ಸಂಘ– ಸಂಸ್ಥೆಗಳ ಹೆಸರಿನಲ್ಲಿ ದುರುಪಯೋಗವಾಗುತ್ತಿದೆ. ಇದರ ಬಗ್ಗೆ ತನಿಖೆ ಮಾಡಬೇಕು’ ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾಜಿ ನರಸಾನಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ತುಕಾರಾಮ್ ಪಟ್ಟೇಕರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ದೇವಣ್ಣ ವೆಂಕಪ್ಪಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !