ಗುರುವಾರ , ಸೆಪ್ಟೆಂಬರ್ 23, 2021
28 °C
ಕಾರವಾರದಲ್ಲಿ ‘ಕ್ಯಾಲಿಗ್ರಾಫಿಕ್ ಸ್ಕೆಚಿಂಗ್’ ಮಾಡಿ ಗಮನ ಸೆಳೆಯುತ್ತಿರುವ ಯುವಕ

ಕಾರವಾರ: ಅಕ್ಷರಗಳೇ ಸಾಲಾಗಿ ಕಲೆಯಾದಾಗ..!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಚಿತ್ರಕಲೆಯಲ್ಲಿ ವಿವಿಧ ರೀತಿಯ ಗೆರೆಗಳು ಸಾಮಾನ್ಯ. ಆದರೆ, ಅವುಗಳೊಂದಿಗೆ ವಿವಿಧ ಭಾಷೆಗಳ ಅಕ್ಷರಗಳನ್ನೂ ಸೇರಿಸಿ ಕಲಾಕೃತಿ ಮಾಡುವ ಕಲೆಯನ್ನು ನಗರದ ಯುವಕರೊಬ್ಬರು ಒಲಿಸಿಕೊಂಡಿದ್ದಾರೆ.

ನಗರದ ಕೋಡಿಬಾಗದ ತಸ್ಮೈ ರೇವಂಡಿಕರ್ ಅಂತಹ ಚಿತ್ರಗಳನ್ನು ಬರೆಯುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಚಿತ್ರಕಲೆಯಲ್ಲಿ ಯಾವುದೇ ರೀತಿಯ ತರಬೇತಿಯನ್ನೂ ಪಡೆಯದ ಅವರು, ನಾಲ್ಕು ವರ್ಷಗಳಿಂದ 200ಕ್ಕೂ ಅಧಿಕ ಚಿತ್ರಗಳನ್ನು ಬರೆದಿದ್ದಾರೆ. 

‌ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ಮಲಯಾಳಂ, ತೆಲುಗು, ಉರ್ದು, ಜಪಾನೀಸ್ ಮುಂತಾದ ಹತ್ತಾರು ಭಾಷೆಗಳ ಲಿಪಿಗಳನ್ನು ತಮ್ಮ ಕಲಾಕೃತಿಯಲ್ಲಿ ಬಳಸಿಕೊಳ್ಳುತ್ತಾರೆ. ಹನುಮಂತ, ದೇವರು ಮುಂತಾದ ಪೌರಾಣಿಕ ಪಾತ್ರಗಳಿಗೆ ತಮ್ಮದೇ ಪರಿಕಲ್ಪನೆಯಲ್ಲಿ ಜೀವಂತಿಕೆ ತಂದುಕೊಡುತ್ತಿದ್ದಾರೆ. ಜೊತೆಗೇ ಪಕ್ಷಿಗಳು, ಪ್ರಾಣಿಗಳು, ಮನುಷ್ಯರು, ವ್ಯಕ್ತಿ ಚಿತ್ರಣವನ್ನೂ ಅವರು ತಮ್ಮ ಕೈಚಳಕದಲ್ಲಿ ಮೂಡಿಸಿದ್ದಾರೆ.

ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಕೆಮೆಸ್ಟ್ರಿ ವಿಷಯದಲ್ಲಿ ನಾಲ್ಕನೇ ಸೆಮಿಸ್ಟರ್ ಅಧ್ಯಯನ ಮಾಡುತ್ತಿರುವ ಅವರಿಗೆ ಚಿತ್ರಕಲೆ ಹವ್ಯಾಸವಾಗಿದೆ.

‘ಒಂದೊಂದು ಚಿತ್ರದಲ್ಲೂ 100ರಿಂದ 200 ಅಕ್ಷರಗಳಿರುತ್ತವೆ. ಶ್ಲೋಕ, ಭಜನೆ, ದೇವರನಾಮ, ಇನ್ಯಾವುದೇ ಶಬ್ದಗಳು ಅಥವಾ ವಾಕ್ಯಗಳನ್ನು ಚಿತ್ರದ ಅಗತ್ಯಕ್ಕೆ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತೇನೆ. ಮೊದಲು ಪೆನ್ಸಿಲ್ ಸ್ಕೆಚಿಂಗ್ ಮಾಡಿಕೊಂಡು ನಂತರ ಬಣ್ಣಗಳಿಂದ ತುಂಬುತ್ತ ಚಿತ್ರಕ್ಕೆ ರೂಪು ನೀಡುತ್ತೇನೆ’ ಎಂದು ಅವರು ವಿವರಿಸುತ್ತಾರೆ.

ಚಿತ್ರಕ್ಕೆ ಹೊಂದುವ ಲಿಪಿ: ‘ನಾನು ಬರೆಯುವ ಚಿತ್ರದ ಆಕಾರವನ್ನು ಮೊದಲು ಗುರುತು ಮಾಡಿಕೊಳ್ಳುತ್ತೇನೆ. ಒಂದುವೇಳೆ, ಗುಂಗುರು ಕೂದಲಿನ ವ್ಯಕ್ತಿಯ ಚಿತ್ರ ಬರೆಯುವುದಾದರೆ ಕನ್ನಡ, ಮಲಯಾಳಂ, ತಮಿಳು ಭಾಷೆಗಳ ಅಕ್ಷರಗಳನ್ನು ಬರೆಯುತ್ತೇನೆ. ಚಿತ್ರದ ಕೋನಗಳಿಗೆ ಇಂಗ್ಲಿಷ್ ಅಕ್ಷರಗಳನ್ನು ಬಳಸುತ್ತೇನೆ. ಜಪಾನ್ ಭಾಷೆಯ ಅಕ್ಷರಗಳೂ ಚಿತ್ರದಲ್ಲಿವೆ. ಒಂದೊಂದು ಚಿತ್ರವನ್ನೂ ಪೂರ್ಣಗೊಳಿಸಲು ಕನಿಷ್ಠ ಒಂದು ವಾರವಾದರೂ ಬೇಕಾಗುತ್ತದೆ’ ಎಂದು ತಸ್ಮೈ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು