ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ: ಮೊಹರಂ ಡೋಲಿಗೆ ರಾಷ್ಟ್ರಧ್ವಜದ ಬಣ್ಣ

ಯಲ್ಲಾಪುರ: ಭಾವೈಕ್ಯದ ಮೊಹರಂ ಆಚರಣೆ
Last Updated 9 ಆಗಸ್ಟ್ 2022, 15:50 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕಿನ ಕಿರವತ್ತಿಯಲ್ಲಿ ನಡೆಯುತ್ತಿರುವ ಮೊಹರಂ ಆಚರಣೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದ ಭಾವವಿಲ್ಲ. ಎಲ್ಲರೂ ಒಂದಾಗಿ ಆಚರಿಸುವ ಮೂಲಕ ಭಾವೈಕ್ಯ ಮೆರೆಯುತ್ತಾರೆ.

ಗುರುವಾರ ಪಂಜಾಗಳ ಪ್ರತಿಷ್ಠಾಪನೆಯಿಂದ ಹಿಡಿದು, ಮೊಹರಂ ಮೊದಲ ರಾತ್ರಿ (ಸೋಮವಾರ ರಾತ್ರಿ) ‘ಕತ್ಲ್ ರಾತ್’ ಹಾಗೂ ಅನ್ನ ಸಂತರ್ಪಣೆ, ಮೊಹರಂ ದಿನ ಬೆಳಿಗ್ಗೆ ಮೆರವಣಿಗೆ ಅಲಬೇಲಾ ಮತ್ತು ಸಂಜೆ ಮತ್ತೆ ಮೆರವಣಿಗೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.

ಕರಬಲಾ ಮೈದಾನದಲ್ಲಿ ನಡೆದ ಯುದ್ಧದ ಪ್ರತೀಕವಾದ ಮೊಹರಂನಲ್ಲಿ ಮೊಹಮ್ಮದ್ ಪೈಗಂಬರ್ ಅವರ ಪತ್ನಿ ಬಿಬಿ ಫಾತಿಮಾ, ಪುತ್ರರಾದ ಹಸನ್, ಹುಸೇನ್ ಮತ್ತು ಮೌಲಾಲಿ, ಇತರ ಕುಟುಂಬ ಸದಸ್ಯರ ನೆನಪಿನಲ್ಲಿ ಐದು ದಿನಗಳ ಮೊಸಲು ಪಂಜಾಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಕೊನೆಯ ದಿನ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುತ್ತದೆ.

ಕಿರವತ್ತಿಯಲ್ಲಿ ಒಟ್ಟು ಐದು ಕಡೆಗಳಲ್ಲಿ ಪಂಜಾಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಅವುಗಳಲ್ಲಿ ನಾಲ್ಕು ಕಡೆಗಳಲ್ಲಿ ಡೋಲಿಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಹಮತ್ ಅಬ್ಬಿಗೇರಿ ಅವರ ನೇತೃತ್ವದಲ್ಲಿ ಜಯಂತಿ ನಗರದಲ್ಲಿ ನಿರ್ಮಿಸಿದ ಡೋಲಿ ಎಲ್ಲರ ಗಮನ
ಸೆಳೆದಿದೆ.

ರಾಷ್ಟ್ರಧ್ವಜದ ಪ್ರತೀಕವಾಗಿ ಕೇಸರಿ, ಬಿಳಿ, ಹಸಿರು ಬಣ್ಣಗಳನ್ನು ಹಾಕಿ, ನಡುವೆ ಅಶೋಕ ಚಕ್ರವನ್ನು ಇಡಲಾಗಿದೆ. ಕೇಸರಿ, ಬಿಳಿ ಬಣ್ಣವನ್ನು ಹೂವುಗಳಿಂದ, ಹಸಿರು ಬಣ್ಣಗಳನ್ನು ಎಲೆಗಳಿಂದ ಮಾಲೆ ಮಾಡಿ ಡೋಲಿಯ ಸುತ್ತಲೂ ಹಾಕಲಾಗಿದೆ. ನಡುವೆ ನೀಲಿ ಬಣ್ಣದ ಚಕ್ರವನ್ನು ತಯಾರಿಸಿ ಇದಲಾಗಿದೆ. ಈ ಮೂಲಕ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ.

ಈ ಕಾರ್ಯದಲ್ಲಿ ಜಾತ್ಯತೀತವಾಗಿ ರಹಮತ್ ಅಬ್ಬಿಗೇರಿ ನೇತೃತ್ವದಲ್ಲಿ ರುದ್ರಪ್ಪ ವಾಲ್ಮೀಕಿ, ಮಾರುತಿ ಮಿಂಡೊಳ್ಳಿ, ವಿಲ್ಸನ್ ಫರ್ನಾಂಡಿಸ್, ಮುದ್ಕಣ್ಣ ದೂಳಿಕೊಪ್ಪ, ಉಸ್ಮಾನ ಪಟೇಲ, ಸಂಜೀವ ಬೆಲ್ದಾರ್, ರಷೀದ ಮೇಸ್ತ್ರಿ ಮುಂತಾದವರು ಭಾಗವಹಿಸಿದ್ದಾರೆ.

ಕಿರವತ್ತಿಯಲ್ಲಿ ಹಲವು ದಶಕಗಳಿಂದ ಜಾತಿ ಧರ್ಮ ಭೇದವಿಲ್ಲದೇ ಮೊಹರಂ ಆಚರಿಸಲಾಗುತ್ತಿದೆ. ಇದು ಜಾತ್ಯತೀತತೆಯ ಪ್ರತೀಕವಾಗಿದೆ ಎನ್ನುತ್ತಾರೆ ಜಯ ಕರ್ನಾಟಕ ಸಂಘಟನೆಯ ಸ್ಥಳೀಯ ಘಟಕದ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT