ಶನಿವಾರ, ನವೆಂಬರ್ 23, 2019
17 °C
ಜನಸ್ಪಂದನ ಸಭೆ ನಡೆಸಿದ ವಿ.ಎಸ್.ಪಾಟೀಲ

ಬಸ್ ಸಂಚಾರ ಕಿರಿಕಿರಿ; ಸಾರ್ವಜನಿಕರ ಆಕ್ರೋಶ

Published:
Updated:
Prajavani

ಶಿರಸಿ: ಅನಿಯಮಿತ ಬಸ್ ಸಂಚಾರ, ಪಾಸ್ ಹೊಂದಿರುವ ಮಕ್ಕಳಿಗೆ ನಿರ್ವಾಹಕರ ಕಿರಿಕಿರಿ, ಬಸ್ ನಿಲುಗಡೆಯಲ್ಲಿ ಆಗುವ ತೊಂದರೆಯನ್ನು ಹೇಳಿಕೊಂಡ ಸಾರ್ವಜನಿಕರು, ಸಾರಿಗೆ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಅವರು ಗುರುವಾರ ಇಲ್ಲಿ ಕರೆದಿದ್ದ ಜನಸ್ಪಂದನ ಸಭೆಯಲ್ಲಿ ಭಾಗವಹಿಸಿದ್ದ ಜನರು ದೂರಿನ ಸುರಿಮಳೆಗರೆದರು.

ಬನವಾಸಿ ಬಸ್ ನಿಲ್ದಾಣದಲ್ಲಿ ಹೊಂಡಗಳಾಗಿವೆ. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ವರ್ಷದಿಂದ ಇದೇ ಪರಿಸ್ಥಿತಿ ಮುಂದುವರಿದಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ದೂರಿದರು. ಜಿಲ್ಲೆಯಲ್ಲಿ ಖಾಸಗಿ ಬಸ್ ಸೌಲಭ್ಯವಿಲ್ಲ. ಜನರು ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಸಂಸ್ಥೆಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಬರಬೇಕು ಎಂದು ಉಪಾಧ್ಯಕ್ಷ ಚಂದ್ರು ದೇವಾಡಿಗ ಹೇಳಿದರು.

ಕುಮಟಾ ರಸ್ತೆಯಲ್ಲಿ ಸಾಕಷ್ಟು ಬಸ್ ಸಂಚರಿಸುತ್ತದೆ. ಆದರೆ, ಬಂಡಲದಲ್ಲಿ ಹೆಚ್ಚಿನ ಬಸ್‌ಗಳಿಗೆ ನಿಲುಗಡೆ ಇಲ್ಲ. ಸಾರಿಗೆ ಸಂಸ್ಥೆ ಬಸ್‌ಗಳನ್ನೇ ನಂಬಿರುವ ಒಳ ಹಳ್ಳಿಗಳ ಜನರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕೆಲವು ಬಸ್‌ಗಳಿಗಾದರೂ ಇಲ್ಲಿ ನಿಲುಗಡೆ ನೀಡಬೇಕು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವರಾಜ ಮರಾಠೆ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಸರೋಜಾ ಭಟ್ಟ, ಸೊಸೈಟಿ ಅಧ್ಯಕ್ಷ ಪ್ರವೀಣ ಗೌಡ ಒತ್ತಾಯಿಸಿದರು.

ಬಸ್ ಪಾಸ್ ಹೊಂದಿರುವ ಶಾಲಾ ಮಕ್ಕಳು ನಿರ್ವಾಹಕರಿಂದ ಕಿರಿಕಿರಿ ಅನುಭವಿಸುತ್ತಾರೆ. ಎಲ್ಲ ಮಾರ್ಗಗಳಲ್ಲೂ ಈ ಸಮಸ್ಯೆಯಿದೆ. ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗದಂತೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಮಕ್ಕಳು ಶಾಲೆಗೆ ಹೋಗುವ ಮತ್ತು ತಿರುಗಿ ಬರುವ ಸಮಯ ಹೊಂದಾಣಿಕೆ ಮಾಡಿಕೊಂಡು ಗ್ರಾಮೀಣ ಪ್ರದೇಶಗಳಿಗೆ ಬಸ್ ಓಡಿಸಬೇಕು ಎಂದು ಹಲವರು ಸಲಹೆ ನೀಡಿದರು.

ಸಿಟಿ ಬಸ್ ಬದಲಾಯಿಸಬೇಕು. ಮಂಗಳೂರಿನ ನಿಟ್ಟೆಗೆ ಸ್ಲೀಪರ್ ಕೋಚ್ ಬಸ್ ಬಿಡಬೇಕು. ಹೊಸ ಬಸ್ ನಿಲ್ದಾಣ ಸದ್ಬಳಕೆಯಾಗಬೇಕು. ಹಳೇ ಬಸ್ ನಿಲ್ದಾಣ ಕೆಡವಿ, ಹೊಸ ಕಟ್ಟಡ ನಿರ್ಮಾಣ ಶೀಘ್ರ ಆಗಬೇಕು. ಎಲ್ಲ ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು. ಶಿರಸಿ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಬಸ್ ಓಡಿಸಬೇಕು. ನಗರಕ್ಕೆ ಸಮೀಪವಿರುವ ಕಾನಗೋಡ ಇನ್ನಿತರ ಕೊನೆಯ ಸ್ಟೇಜ್‌ನಲ್ಲಿ ಬಸ್ ನಿಲುಗಡೆಯಾಗದೇ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಸಲಹೆ ಕೇಳಿಬಂತು.

‘ಹಳೇ ಬಸ್ ನಿಲ್ದಾಣದ ಕಟ್ಟಡ ಕೆಡವಲು ₹ 2 ಲಕ್ಷಕ್ಕೆ ಟೆಂಟರ್‌ ಕರೆಯಲಾಗಿತ್ತು. ಕಟ್ಟಡ ಕೆಡವಿದ ವೆಚ್ಚ ಅಧಿಕವಾಗುವುದರಿಂದ ಗುತ್ತಿಗೆದಾರರು ಭಾಗವಹಿಸಿಲ್ಲ’ ಎಂದು ವಿಭಾಗೀಯ ಸಂಚಾರಾಧಿಕಾರಿ ಸುರೇಶ ನಾಯ್ಕ ಹೇಳಿದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪ್ರಭಾವತಿ ಹೆಗಡೆ, ಉಷಾ ಹೆಗಡೆ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಇದ್ದರು.

ಪ್ರತಿಕ್ರಿಯಿಸಿ (+)