ಬುಧವಾರ, ಅಕ್ಟೋಬರ್ 21, 2020
25 °C
ಕೋವಿಡ್ ಭಯ ಬಿಟ್ಟು ಸರ್ಕಾರಿ ಬಸ್ ಏರುತ್ತಿರುವ ಪ್ರಯಾಣಿಕರು

ಚೇತರಿಕೆ ಹಾದಿಯಲ್ಲಿ ಸಾರಿಗೆ ವಿಭಾಗ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕೋವಿಡ್ ಭಯದಿಂದ ಜನ ಹಂತಹಂತವಾಗಿ ಹೊರ ಬರುತ್ತಿದ್ದು, ಹಳ್ಳಿಗಳಿಂದ ಬಸ್‌ಗಳನ್ನು ಅವಲಂಬಿಸಿ ನಗರಕ್ಕೆ ಬರುವವರ ಪ್ರಮಾಣವೂ ಏರುತ್ತಿದೆ. ಪರಿಣಾಮವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದ ಆದಾಯದಲ್ಲಿ ಚೇತರಿಕೆ ಕಾಣುತ್ತಿದೆ.

ಮಾರ್ಚ್ ಕೊನೆಯ ವಾರದಿಂದ ಬಸ್‌ಗಳ ಸಂಚಾರ ನಿಂತಿತ್ತು. ಮೂರು ತಿಂಗಳು ಕಳೆದ ನಂತರ ಜೂನ್ ವೇಳೆಗೆ ದೂರದ ಊರುಗಳಿಗೆ ಮಾತ್ರ ಬಸ್ ಸಂಚಾರ ಆರಂಭವಾಯಿತು. ಆದರೆ, ಪ್ರಯಾಣಿಕರ ಕೊರತೆಯಿಂದ ಸ್ಥಳೀಯ ಬಸ್‌ಗಳ ಸಂಚಾರ ಕಡಿಮೆಯಾಗಿತ್ತು.

ಒಂದು ತಿಂಗಳದಿಂದ ಗ್ರಾಮೀಣ ಭಾಗಗಳತ್ತ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಕೋವಿಡ್ ಭಯಕ್ಕೆ ಪ್ರಯಾಣಿಕರು ಬಸ್ ಏರಲು ಹಿಂದೇಟು ಹಾಕುತ್ತಿದ್ದರು. ವಾರದಿಂದೀಚೆಗೆ ಹಳ್ಳಿಗಳಿಂದಲೂ ಜನ ನಗರ, ಪಟ್ಟಣಕ್ಕೆ ಬಸ್‌ಗಳ ಸಂಚಾರವನ್ನು ನೆಚ್ಚಿಕೊಂಡು ಬರುತ್ತಿದ್ದಾರೆ.

‘ಆರಂಭದ ದಿನಗಳಿಗಿಂತ ಈಗ ಸ್ವಲ್ಪಮಟ್ಟಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ದಿನದ ಟಿಕೆಟ್ ಶುಲ್ಕ ಸಂಗ್ರಹವೂ ಉತ್ತಮವಾಗಿದೆ. ಒಂದು ಬಾರಿಗೆ ಸರಾಸರಿ 15ರಿಂದ 20 ಪ್ರಯಾಣಿಕರು ಹಳ್ಳಿಗಳಿಂದ ನಗರಕ್ಕೆ ಬರುತ್ತಿದ್ದಾರೆ’ ಎಂದು ಶಿರಸಿ ಘಟಕದ ಬಸ್ ನಿರ್ವಾಹಕರೊಬ್ಬರು ತಿಳಿಸಿದರು.

‘ವಿಭಾಗ ವ್ಯಾಪ್ತಿಯ ಸಾರಿಗೆ ಘಟಕಗಳಲ್ಲಿ ಪ್ರಮುಖ ಮಾರ್ಗಗಳಿಗೆ ದಿನಕ್ಕೆ ಎರಡು ಬಾರಿ ಬಸ್‌ಗಳನ್ನು ಬಿಡುವಂತೆ ಸೂಚನೆ ಕೊಡಲಾಗಿದೆ. ಪ್ರಯಾಣಿಕರು ಹೆಚ್ಚು ಇರುವ ಬನವಾಸಿ, ಗೋಕರ್ಣ ಮುಂತಾದ ಕಡೆಗಳಲ್ಲಿ ಪ್ರತಿ 15 ನಿಮಿಷ ಅಥವಾ ಅರ್ಧ ಗಂಟೆಗೊಮ್ಮೆ ಬಸ್‌ಗಳನ್ನು ಬಿಡುವಂತೆ ಕ್ರಮ ವಹಿಸಲಾಗಿದೆ’ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಮಾಹಿತಿ ನೀಡಿದರು.

ಆದಾಯ ಏರಿಕೆಯ ವಿಶ್ವಾಸ:

‘ಕೋವಿಡ್ ಸೋಂಕು ಕಾಣಿಸಿಕೊಳ್ಳುವ ಮೊದಲು ಉತ್ತರ ಕನ್ನಡ ವಿಭಾಗದಲ್ಲಿ ದಿನವೊಂದಕ್ಕೆ ಸರಾಸರಿ ₹ 50 ಲಕ್ಷ ಆದಾಯವಿತ್ತು. ಆದರೆ, ಕೋವಿಡ್ ಕಾರಣದಿಂದ ಮೂರು ತಿಂಗಳಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇತ್ತೀಚೆಗೆ ಗ್ರಾಮೀಣ ಭಾಗಕ್ಕೆ ಬಸ್‌ಗಳ ಓಡಾಟ ಆರಂಭಿಸಿದ ಬಳಿಕ ದಿನವೊಂದಕ್ಕೆ ಸರಾಸರಿ ₹ 15 ಲಕ್ಷದಿಂದ ₹ 16 ಲಕ್ಷ ಆದಾಯ ಬರತೊಡಗಿದೆ. ಹಂತಹಂತವಾಗಿ ಇದು ಏರಿಕೆಯಾಗಬಹುದು’ ಎಂದು ವಿವೇಕ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.

––––

ಬಸ್: ಅಂಕಿ ಅಂಶ

550

ಉ.ಕ ವಿಭಾಗದಲ್ಲಿರುವ ಒಟ್ಟು ಬಸ್‌ಗಳು

510

ನಿತ್ಯ ಸಂಚರಿಸುವ ಬಸ್‌ಗಳ ಸರಾಸರಿ ಸಂಖ್ಯೆ

275

ಸದ್ಯ ಸಂಚರಿಸುತ್ತಿರುವ ಬಸ್‌ಗಳು

1,500

ಚಾಲಕ, ನಿರ್ವಾಹಕರ ಸಂಖ್ಯೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು