ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಜ್ಞಾ ವಿಧಿ ವೀಕ್ಷಣೆಗೆ ಭರದ ಸಿದ್ಧತೆ

ಜಿಲ್ಲೆಯ 336 ಕೇಂದ್ರಗಳಲ್ಲಿ ಪರದೆ ಮೇಲೆ ಕಾರ್ಯಕ್ರಮ ನೋಡಲು ತಯಾರಿ
Last Updated 1 ಜುಲೈ 2020, 13:47 IST
ಅಕ್ಷರ ಗಾತ್ರ

ಶಿರಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಡೆಸಲು ಕಾಂಗ್ರೆಸ್ ಜಿಲ್ಲಾ ಘಟಕ ಭರದ ಸಿದ್ಧತೆ ನಡೆಸಿದೆ. ಜುಲೈ 2ರಂದು ಇಲ್ಲಿನ ಇಂದಿರಾ ನಗರದಲ್ಲಿರುವ ಜಿಲ್ಲಾ ಕಾರ್ಯಾಲಯದಲ್ಲಿ ದೊಡ್ಡ ಎಲ್‌ಇಡಿ ಪರದೆ ಹಾಕಿ, ಕಾರ್ಯಕ್ರಮ ವೀಕ್ಷಣೆಗೆ ತಯಾರಿ ನಡೆಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಎಲ್ಲ 14 ಬ್ಲಾಕ್‌ಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಜ್ಞಾ ವಿಧಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ 16 ವೀಕ್ಷಕರನ್ನು ಕೆಪಿಸಿಸಿ ನೇಮಿಸಿದೆ. ಅವರು ಜಿಲ್ಲೆಯಲ್ಲಿಯೇ ಇದ್ದು, ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ 224 ಸ್ಥಳಗಳಲ್ಲಿ ಕಾರ್ಯಕ್ರಮ ವೀಕ್ಷಣೆ ಕೇಂದ್ರಗಳನ್ನು ಮಾಡಲಾಗಿದೆ. ಪ್ರತಿ ಕೇಂದ್ರದಲ್ಲಿ 30ರಿಂದ 50ರಷ್ಟು ಜನರು ಸೇರುತ್ತಾರೆ. ಕೋವಿಡ್ 19 ಇರುವ ಕಾರಣಕ್ಕೆ ಶಾರೀರಿಕ ಅಂತರ, ಮುಖಗವಸು, ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಪ್ರತಿಕ್ರಿಯಿಸಿದರು.

ಎಲ್ಲ 11 ತಾಲ್ಲೂಕುಗಳ ನಗರ, ಪಟ್ಟಣ ಪ್ರದೇಶಗಳ 112 ಕಡೆಗಳಲ್ಲಿ ಕಾರ್ಯಕ್ರಮ ನಡೆಯುತ್ತದೆ. ಶಿರಸಿಯಲ್ಲಿ ಜಿಲ್ಲಾ ಕಾರ್ಯಾಲಯ ಹೊರತುಪಡಿಸಿ, ಗಣೇಶನಗರ, ಮರಾಠಿಕೊಪ್ಪ, ವಿವೇಕಾನಂದ ನಗರ, ಕಸ್ತೂರಬಾ ನಗರ, ರಾಮನಬೈಲ್, ರಾಯರಪೇಟೆ, ಖಾಜಿಗಲ್ಲಿ, ಗಾಂಧಿನಗರ ಮೊದಲಾದ 16 ಕಡೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು.

ಪ್ರತಿ ಕೇಂದ್ರದಲ್ಲಿ ಪ್ರಾಜೆಕ್ಟರ್ ಅಳವಡಿಸಲಾಗಿದೆ. ಈ ಪ್ರಾಜೆಕ್ಟರ್ ಹಾಗೂ ಟಿ.ವಿ ಚಾನೆಲ್‌ಗಳಲ್ಲಿ ನೇರ ಕಾರ್ಯಕ್ರಮ ವೀಕ್ಷಿಸಬಹುದು. ಝೂಮ್ ಆ್ಯಪ್‌ ಮೂಲಕ ಸಂಪರ್ಕ ಮೊಬೈಲ್‌ನಲ್ಲೂ ನೋಡಬಹುದು. ಇಲ್ಲಿ ನಡೆಯುವ ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಮುಖರು ಅಲ್ಲಿಯೇ ಕುಳಿತು ವೀಕ್ಷಿಸಬಹುದು. ಗುರುವಾರ ಬೆಳಿಗ್ಗೆ 10.30ರಿಂದ ಕಾರ್ಯಕ್ರಮ ಆರಂಭವಾಗುತ್ತದೆ. ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಮಾದರಿಯಲ್ಲಿಯೇ, ಸೇವಾದಳದ ಗೌರವ ರಕ್ಷೆ, ವಂದೇ ಮಾತರಂ ಗೀತೆ ಪ್ರಸ್ತುತಿ, ಸಂವಿಧಾಣ ಪೀಠಿಕೆ ಪಠಣ, ಸಾಮೂಹಿಕ ಪ್ರತಿಜ್ಞಾ ವಿಧಿ ಸ್ವೀಕಾರ ಮೊದಲ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT