ಅಜಿತ ಮನೋಚೇತನದಲ್ಲಿ ‘ವಿಕಾಸ’ಕ್ಕೆ ಆದ್ಯತೆ

7

ಅಜಿತ ಮನೋಚೇತನದಲ್ಲಿ ‘ವಿಕಾಸ’ಕ್ಕೆ ಆದ್ಯತೆ

Published:
Updated:
ವಿಕಾಸ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಚಲನ ವಲನ ತರಬೇತಿ ನೀಡುತ್ತಿರುವುದು

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ‘ವಿಕಾಸ’ ವಿಶೇಷ ಮಕ್ಕಳ ಶಾಲೆ ಅಜಿತ ಮನೋಚೇತನ ಟ್ರಸ್ಟ್ ಆಡಳಿತಕ್ಕೆ ಒಳಪಟ್ಟಿದೆ. 1996–97ನೇ ಸಾಲಿನಲ್ಲಿ ಯೋಗಪಟು, ಸಾಮಾಜಿಕ ಕಾರ್ಯಕರ್ತ ಅಜಿತಕುಮಾರ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ಟ್ರಸ್ಟ್ ಶಿರಸಿಯ ಮರಾಠಕೊಪ್ಪದಲ್ಲಿ ಸ್ವಂತ ನಿವೇಶನ ಹಾಗೂ ಕಟ್ಟಡ ಹೊಂದಿದ್ದು, ಅಲ್ಲಿಯೇ ವಿಕಾಸ ಶಾಲೆ ನೆಲೆಗೊಂಡಿದೆ.

ಮಾನಸಿಕ ಆರೋಗ್ಯ ಸೇವೆ ಹಾಗೂ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ವಿಶೇಷ ಶಾಲೆಯಲ್ಲಿ ಆಟಿಸಂ, ಡೌನ್ ಸಿಂಡ್ರೋಂ, ಬುದ್ಧಿಮಾಂದ್ಯತೆ, ಕಲಿಕಾ ನ್ಯೂನತೆ , ಡಿಸ್ಲೆಕ್ಷಿಯಾ, ವರ್ತನಾ ಸಮಸ್ಯೆಯಿಂದ ಬಳಲುವ ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ.

ಉತ್ತರ ಕನ್ನಡ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮಾನಸಿಕ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ಮಾನಸಿಕವಾಗಿ ಹಿಂದುಳಿದ ವಿಶೇಷ ಮಕ್ಕಳನ್ನು ಗುರುತಿಸಿ ಆ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಅವರಿಗೆ ಶಿಕ್ಷಣ, ತರಬೇತಿ ನೀಡಲಾಗುತ್ತದೆ. ಶಾಲೆಯಲ್ಲಿ ವಸತಿ ವ್ಯವಸ್ಥೆ ಇಲ್ಲ. ಹೀಗಾಗಿ, ಸುತ್ತಲಿನ ಪ್ರದೇಶಗಳಿಂದ ಬರುವ ಬಡ ಮಕ್ಕಳಿಗಾಗಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು, ಮಧ್ಯಾಹ್ನ ಉಚಿತ ಭೋಜನ ವ್ಯವಸ್ಥೆ ಮಾಡಲಾಗಿದೆ.

ಆರಂಭಿಕವಾಗಿ ಶಾಲೆಯಲ್ಲಿ 3 ವಿದ್ಯಾರ್ಥಿಗಳು ಹಾಗೂ ಒಬ್ಬರು ಬೋಧಕರು ಇದ್ದರು. ಪ್ರಸ್ತುತ ಇಲ್ಲಿ 42 ಮಕ್ಕಳು ಓದುತ್ತಿದ್ದು, 4 ಜನ ವಿಶೇಷ ಬೋಧಕರು, ಇಬ್ಬರು ಸಹಾಯಕಿಯರು ಇದ್ದಾರೆ. 42 ಮ್ಕಕಳ ಪೈಕಿ 14 ಬಾಲಕಿಯರು 28 ಬಾಲಕರು ಇಲ್ಲಿದ್ದಾರೆ.

ಶಾಲೆಯಲ್ಲಿ ಎನ್.ಐ.ಎಂ.ಎಚ್ (N.I.M.H: National Institute of Mental Health) ನಿಯಮಾವಳಿಗೆ ಅನುಗುಣವಾದ ಪಠ್ಯಕ್ರಮ ಅನುಸರಿಸುತ್ತಿದ್ದು, ಪ್ರಾಥಮಿಕ, ಮಾಧ್ಯಮಿಕ, ವೃತ್ತಿ ಪೂರ್ವ ಮತ್ತು ವೃತ್ತಿ ತರಬೇತಿ ಎಂಬ ನಾಲ್ಕು ಹಂತದ ಶಿಕ್ಷಣ ಒದಗಿಸಲಾಗುತ್ತದೆ.

ಶಾಲೆಯಲ್ಲಿ ಸುಸಜ್ಜಿತ ತರಗತಿಗಳು, ಆಪ್ತ ಸಮಾಲೋಚನಾ ಕೊಠಡಿ, ಕಚೇರಿ, ಸಿಬ್ಬಂದಿ ಕೊಠಡಿ, ಗ್ರಂಥಾಲಯ, ಆಟದ ಮೈದಾನ, ಶುದ್ಧ ಕುಡಿಯುವ ನೀರು, ಶೌಚಾಲಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಕಲಿಕೆಯಲ್ಲಿ ವಿಶೇಷ ಬೋಧನೋಪಕರಣ, ವಿಶೇಷ ಶಿಕ್ಷಣ ಕಿಟ್‌, ಮಿಂಚುಪಟ್ಟಿ, ಚಟುವಟಿಕಾ ಪಟ್ಟಿಗಳನ್ನು ಬಳಸಲಾಗುತ್ತದೆ. ವೃತ್ತಿ ಶಿಕ್ಷಣದ ಭಾಗವಾಗಿ ಚಾಕ್‌ಪೀಸ್, ಕಾಗದದ ಲಕೋಟೆ, ರಾಖಿ, ಮಣ್ಣಿನ ದೀಪ, ಕಸಬರಿಗೆ, ಕರಕುಶಲ ವಸ್ತುಗಳ ತಯಾರಿಕೆ, ಡಿಜಿಟಲ್ ಪ್ರಿಂಟಿಂಗ್, ಹೊಲಿಗೆ, ತೋಟಗಾರಿಕೆ, ಪಶು ಸಂಗೋಪನೆ... ಇತ್ಯಾದಿ ತರಬೇತಿ ನೀಡಲಾಗುತ್ತದೆ.

ಶಾಲೆಯ ಸಿಬ್ಬಂದಿ ವಿಶೇಷ ತರಬೇತಿ ಹಾಗೂ ಶೈಕ್ಷಣಿಕ ಅರ್ಹತೆ ಹೊಂದಿದ್ದು, ಶಿಕ್ಷಣದ ಜೊತೆ ವೈಯಕ್ತಿಕ ಸ್ವಚ್ಛತೆ ನಿರ್ವಹಣೆ, ಜೀವನ ಕೌಶಲ ವಿಕಸನ ಕುರಿತು ಪ್ರತಿನಿತ್ಯ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಶೌಚಕ್ರಿಯೆ, ಹಲ್ಲುಜ್ಜುವುದು, ಊಟ ಮಾಡುವುದು, ಬಟ್ಟೆ ಧರಿಸುವುದು, ಶೂ ಧರಿಸುವುದು, ಶಾಲಾ ಬ್ಯಾಗ್ ಸಿದ್ಧ ಪಡಿಸಿಕೊಳ್ಳುವುದು, ವಾಹನ ಹತ್ತುವುದು– ಇಳಿಯುವುದು... ಇತ್ಯಾದಿ ಜೀವನ ಕೌಶಲಗಳನ್ನು ಇಲ್ಲಿ ಕಲಿಸಲಾಗುತ್ತದೆ. ಪೋಷಕರ ಜತೆ ನಿಯಮಿತವಾಗಿ ಸಮಾಲೋಚನೆ ನಡೆಸಿ ಮಕ್ಕಳ ಕಲಿಕೆ, ವಿಕಾಸ, ಸಮಸ್ಯೆ, ನ್ಯೂನತೆಗಳ ಕುರಿತು ಮಾಹಿತಿ ನೀಡಲಾಗುತ್ತದೆ.

ಆಯಾ ಮಕ್ಕಳ ಅಗತ್ಯಕ್ಕೆ ತಕ್ಕಂತೆ ಸ್ಪೀಚ್ ಥೆರಪಿ, ಫಿಜಿಯೊ ಥೆರಪಿ, ಆರ್ಟ್ ಬೇಸ್ಡ್ ಥೆರಪಿ, ಯೋಗ ಥೆರಪಿ, ಮ್ಯೂಸಿಕ್ ಥೆರಪಿ, ಥೀಯೇಟರ್ ಥೆರಪಿ, ಆಕ್ಯುಪಂಕ್ಚರ್‌ ಥೆರಪಿ, ವೈದ್ಯಕೀಯ ಚಿಕಿತ್ಸಾ ಸೌಲಭ್ಯ, ಆಪ್ತ ಸಮಾಲೋಚನೆ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತದೆ.

ಶಾಲೆಯ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಅಂಗವಿಕಲರ ದಿನಾಚರಣೆ ಅಂಗವಾಗಿ 2017–18ನೇ ಸಾಲಿನಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಶೇಷ ಕ್ರೀಡಾಕೂಟದಲ್ಲಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಮ್ಯೂಸಿಕಲ್ ಚೇರ್, ಕಾಲಿಗೆ ಬಲೂನುಗಳನ್ನು ಕಟ್ಟಿಕೊಂಡು ಒಡೆಯುವದರಲ್ಲಿ ರಾಜೇಸಾಬ್, 100 ಮೀ. ಓಟದಲ್ಲಿ ಆಪ್ತಾ ಮತ್ತು ಕಾವ್ಯಾ, ಗೋಣಿಚೀಲ ಓಟ ಹಾಗೂ ಪಿರಾಮಿಡ್ ನಿರ್ಮಾಣದಲ್ಲಿ ನಾಗರತ್ನಾ, ಮಾಧುರಿ, ಅಲ್ಫಾಜ್, ಸುಮಂತ್ ಬಹುಮಾನ ಗಳಿಸಿದ್ದಾರೆ.

ಸ್ವರ್ಣವಲ್ಲೀ ಶ್ರೀ, ಪೇಜಾವರ ಶ್ರೀ, ಬಿಳಿಗಿರಿರಂಗನ ಬೆಟ್ಟದ ಡಾ.ಸುದರ್ಶನ, ಡಾ.ಅಶೋಕ ಪೈ, ಡಾ.ಸಿ.ಆರ್.ಚಂದ್ರಶೇಖರ, ಡಾ.ಗಂಗಾಧರ, ಡಾ.ಆನಂದ ಪಾಂಡುರಂಗಿ, ಡಾ.ಕೆ.ಆರ್.ಶ್ರೀಧರ್, ಡಾ.ಉಪೇಂದ್ರ ಶೆಣೈ, ಕ್ರೀಡಾಪಟು ಮಾಲತಿ ಹೊಳ್ಳ ಮುಂತಾದ ಗಣ್ಯರು ಶಾಲೆಗೆ ಭೇಟಿ ನೀಡಿ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಭವಿಷ್ಯದಲ್ಲಿ ವಸತಿ ಸಹಿತ ಶಾಲೆ ನಿರ್ಮಾಣದ ಯೋಜನೆಯನ್ನು ಟ್ರಸ್ಟ್ ಹೊಂದಿದ್ದು, ವಿಕಾಸ ಶಾಲೆಯಲ್ಲಿ ಪ್ರವೇಶ, ನೆರವು, ಮತ್ತಿತರ ಮಾಹಿತಿಗೆ
ಮೊ: 97398 90178 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !