ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

ಮೀನುಗಾರ ಮುಖಂಡರು, ಮಹಿಳೆಯರ ಬೃಹತ್ ‍ಪ್ರತಿಭಟನೆ
Last Updated 5 ಸೆಪ್ಟೆಂಬರ್ 2020, 14:03 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲಾ ಆಸ್ಪತ್ರೆಯಲ್ಲಿ ಸೆ.3ರಂದು ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೀನುಗಾರ ಮುಖಂಡರು, ಮಹಿಳೆಯರು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು. ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮೀನು ಮಾರಾಟ ಬಂದ್ ಮಾಡಿ ಮಾಲಾದೇವಿ ಮೈದಾನದಲ್ಲಿ ಸೇರಿದ ಮೀನುಗಾರರು, ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು. ವೈದ್ಯರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೃತ ಮಹಿಳೆಯ ಕುಟುಂಬಕ್ಕೆ ಜಿಲ್ಲಾಡಳಿತದಿಂದ ಪರಿಹಾರ ನೀಡುವಂತೆ ಆಗ್ರಹಿಸಿದರು.

ಸರ್ವೋದಯ ನಗರದ ಗೀತಾ ಬಾನಾವಳಿ (30) ಎಂಬುವವರು ಜಿಲ್ಲಾ ಆಸ್ಪತ್ರೆಯಲ್ಲಿ ಆ.31ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸೆ.3ರಂದು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆಂದು ಅವರನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದರು. ಬಾಣಂತಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಅವರ ಸಂಬಂಧಿಕರು, ಪರಿಚಯಸ್ಥರು ಆಸ್ಪತ್ರೆಯ ಬಳಿ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದರು.

ಶನಿವಾರ ಮತ್ತೊಮ್ಮೆ ಭಾರಿ ಪ್ರತಿಭಟನೆ ನಡೆಸಿ, ವೈದ್ಯರನ್ನು ಬಂಧಿಸಬೇಕು. ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಮೃತರ ಪತಿ ಶಿವನಾಥ, ಮಗುವಿನೊಂದಿಗೆ ಬಂದು ದುಃಖ ತೋಡಿಕೊಂಡರು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಗೆ ಇದೇ ವೇಳೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಡಾ.ಶಿವಾನಂದ ಕುಡ್ತಲಕರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರತಿಭಟನೆಯಲ್ಲಿ ಮುಖಂಡರಾದ ರಾಜು ತಾಂಡೇಲ, ಜಿ.ಪಿ.ತಾರಿಕರ್, ರಾಘು ನಾಯ್ಕ, ನಗರಸಭೆ ಸದಸ್ಯರಾದ ಪ್ರೇಮಾನಂದ ಗುನಗಾ, ಸುವಿಧಾ ಉಳ್ವೇಕರ್, ರಂಜಿತಾ ಮಾಳ್ಸೇಕರ್ ಇದ್ದರು.

ತನಿಖೆಗೆ ತಂಡ ರಚನೆ:ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತಂಡವೊಂದನ್ನು ರಚಿಸಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಶನಿವಾರ ಆದೇಶಿಸಿದ್ದಾರೆ. 10 ದಿನಗಳ ಒಳಗಾಗಿ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.

ತನಿಖಾ ತಂಡಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರದ್ ನಾಯಕ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಹೃದ್ರೋಗ ತಜ್ಞರೊಂದಿಗೆ, ಖಾಸಗಿ ಅರಿವಳಿಕೆ ತಜ್ಞರು ಮತ್ತು ಖಾಸಗಿ ಸ್ತ್ರೀರೋಗ ತಜ್ಞರನ್ನು ಸಮಿತಿಯ ಸದಸ‌್ಯರನ್ನಾಗಿ ನೇಮಕ ಮಾಡಿದ್ದಾರೆ. ತಂಡಕ್ಕೆ ಖಾಸಗಿ ವೈದ್ಯರನ್ನು ನೇಮಿಸಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT