ಬೆಟ್ಟದಷ್ಟು ಸವಾಲಿನ ನಡುವೆ ಪ್ರತಿಷ್ಠೆಯ ಪ್ರಶ್ನೆ

7
ಹಳಿಯಾಳ ಪುರಸಭೆ: 20ರಿಂದ 23ಕ್ಕೆ ಏರಿಕೆಯಾದ ವಾರ್ಡ್‌ಗಳ ಸಂಖ್ಯೆ, ನಿರೀಕ್ಷೆ ಅಪಾರ

ಬೆಟ್ಟದಷ್ಟು ಸವಾಲಿನ ನಡುವೆ ಪ್ರತಿಷ್ಠೆಯ ಪ್ರಶ್ನೆ

Published:
Updated:
Deccan Herald

ಹಳಿಯಾಳ: ಸ್ಥಳೀಯ ಪುರಸಭೆಯು ಚುನಾವಣೆಗೆ ಸಿದ್ಧವಾಗಿದ್ದು, ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳು ಈ ಬಾರಿ ಹೊಸಬರಿಗೇ ಮಣೆ ಹಾಕಿವೆ.

ಈ ಹಿಂದೆ 20 ವಾರ್ಡ್‌ಗಳಿದ್ದುದು ಈ ಬಾರಿ 23ಕ್ಕೆ ಏರಿಕೆಯಾಗಿದೆ. ವಾರ್ಡ್‌ವಾರು ಮೀಸಲಾತಿಯಲ್ಲಿಯೂ ಬದಲಾಗಿದೆ. ಐದು ವರ್ಷಗಳಿಂದ ಕೆಲವರು ತಮ್ಮ ಆಯ್ಕೆಯ ವಾರ್ಡ್‌ನಲ್ಲಿ ಸ್ಪರ್ಧಿಸಲು ಯತ್ನಿಸಿದರೂ ಮೀಸಲಾತಿಯಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿರಲಿಲ್ಲ. ಇದೇ ಸ್ಥಿತಿ ಈ ಬಾರಿಯೂ ಇದ್ದು ಬೇರೆ ಬೇರೆ ವಾರ್ಡ್‌ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ಸಚಿವ ಆರ್.ವಿ.ದೇಶಪಾಂಡೆ ಅವರು ಪಟ್ಟಣವನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಪುರಸಭೆಗೆ ಕೋಟ್ಯಂತರ ರೂಪಾಯಿ ಅನುದಾನ ಮಂಜೂರು ಮಾಡಿಸಿದ್ದರು. ಆದರೆ, ಕೆಲವಷ್ಟೇ ಕಾಮಗಾರಿಗಳು ನಡೆದಿದ್ದು, ಇನ್ನೂ ಕೆಲವು ಬಾಕಿಯಿವೆ. ಇದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪಟ್ಟಣದಲ್ಲಿ ಎಲ್ಲ ರಸ್ತೆಗಳು ಕಾಂಕ್ರೀಟ್ ಹಾಗೂ ಡಾಂಬರೀಕರಣವಾಗಿದ್ದು, ಪ್ರತಿಯೊಂದು ಬಡಾವಣೆಯಲ್ಲೂ ಕೊಳಚೆ ನೀರು ಸಾಗಲು ಕಾಂಕ್ರೀಟ್ ಕಾಲುವೆ ನಿರ್ಮಾಣವಾಗಿದೆ. 24x7 ಕುಡಿಯುವ ನೀರಿನ ಯೋಜನೆ ಸಹ ಜಾರಿಯಲ್ಲಿದೆ. ಕುಡಿಯುವ ನೀರಿನ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರವಾಗಿದೆ ಎಂದು ವಿರೋಧ ಪಕ್ಷದವರು ದೂರಿದ್ದಾರೆ. ನೀರು ಸರಬರಾಜಿನ ಶುಲ್ಕ ಆಕರಣೆಯೂ ಅವೈಜ್ಞಾನಿಕವಾಗಿದೆ ಎಂಬ ಆರೋಪವಿದೆ. ಇದೇ ಮಾದರಿಯ ದೂರು ಕಸ ವಿಲೇವಾರಿ ತೆರಿಗೆ ಸಂಗ್ರಹದ ಬಗ್ಗೆಯೂ ಇದೆ.

ಪುರಸಭೆಯಿಂದ ಅಂಗಡಿ ಸಂಕೀರ್ಣ ಹೆಚ್ಚಾಗಿ ನಿರ್ಮಾಣವಾಗುತ್ತಿದ್ದು, ಅವುಗಳಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ನಿರ್ಮಿಸುವ ಅಗತ್ಯವಿದೆ. ಈಗಾಗಲೇ ಸಿಎಸ್‌ಆರ್ ಯೋಜನೆಯಡಿಯಲ್ಲಿ ಮರಡಿ ಗುಡ್ಡದ ಹತ್ತಿರ ಹಾಗೂ ಎಪಿಎಂಸಿಯಲ್ಲಿ ಸುಸಜ್ಜಿತ ಶೌಚಾಲಯ, ಸ್ನಾನಗೃಹ ನಿರ್ಮಾಣವಾಗಿದೆ. ಅವುಗಳನ್ನು ಪುರಸಭೆ ಸುಪರ್ದಿಗೆ ತೆಗೆದುಕೊಂಡಿದ್ದರೂ  ನಿರ್ವಹಣೆಯ ಕೊರತೆಯಿದೆ.

ಪಟ್ಟಣದ ಮಧ್ಯಭಾಗದಲ್ಲಿಯ ಮೋತಿಕೆರೆ ಕಾಮಗಾರಿಗೆ ₹ 90 ಲಕ್ಷ ಮಂಜೂರಿಯಾಗಿತ್ತು. ಸಚಿವರು ವಿಧಾನಸಭೆ ಚುನಾವಣೆಗೂ  ಮೊದಲೇ ಚಾಲನೆ ನೀಡಿದ್ದರೂ ಕಾಮಗಾರಿ ಪ್ರಾರಂಭವಾಗಲಿಲ್ಲ. ಈಗ ಮಳೆಯ ಕಾರಣವೊಡ್ಡಿ ಕಾಮಗಾರಿ ನಿಲ್ಲಿಸಲಾಗಿದ್ದು, ಕೆರೆಯ ತುಂಬ ಕೆಸರು ತುಂಬಿದೆ. 

ಪಟ್ಟಣದ ಡವಗೇರಿ ಕೆರೆ ಅಭಿವೃದ್ದಿಗೆ ₹ 90 ಲಕ್ಷ ಮಂಜೂರಾಗಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಪಟ್ಟಣದಲ್ಲಿ ಜಿ+2 ಮಾದರಿಯಲ್ಲಿ 240 ಮನೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಆದರೆ, ಅದೂ ಮಳೆಯ ಕಾರಣದಿಂದ ಸ್ಥಗಿತಗೊಂಡಿದೆ.

ಈಗಿರುವ ಪುರಸಭೆ ಕಟ್ಟಡವನ್ನು ನೂತನವಾಗಿ ನಿರ್ಮಿಸಲು ₹ 5 ಕೋಟಿ ಮಂಜೂರಾಗಿದೆ. ಆದರೆ ಅದರ ಕಾಮಗಾರಿಯೂ ಶುರುವಾಗಿಲ್ಲ. ಈ ಕಟ್ಟಡದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಟೌನ್‌ಹಾಲ್, ₹ 1.50 ಕೋಟಿ ವೆಚ್ಚದಲ್ಲಿ ಅಂಗಡಿ ಸಂಕೀರ್ಣ, ₹ 1.50 ಕೋಟಿ ವೆಚ್ಚದಲ್ಲಿ ಸಿಬ್ಬಂದಿ ವಸತಿ ಗೃಹ ನಿರ್ಮಾಣಗೊಳಿಸಲು ನಿರ್ಧರಿಸಲಾಗಿದೆ.

ನಗರೋತ್ಥಾನ ಯೋಜನೆಯಡಿ ಸುಮಾರು ₹ 6.50 ಕೋಟಿ ವೆಚ್ಚದಲ್ಲಿ ಹಳಿಯಾಳ ಪಟ್ಟಣದಲ್ಲಿ ರಸ್ತೆ, ಕಾಲುವೆ ನಿರ್ಮಾಣ ಮಾಡಲಾಗಿದೆ. ಆದರೆ, ಶೇ 50ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ ಹಲವಾರು ಕಾಮಗಾರಿಗಳು ಬಾಕಿ ಇವೆ. ಇಂದಿರಾ ನಗರದ ಮುಂಭಾಗದಲ್ಲಿ ಸುಮಾರು ₹ 2 ಕೋಟಿ ವೆಚ್ಚದಿಂದ 42 ಅಂಗಡಿ ಸಂಕೀರ್ಣಗಳು ನಿರ್ಮಾಣವಾಗಬೇಕಾದೆ. ಇದಕ್ಕೆ ಈಗಾಗಲೇ ₹ 96 ಲಕ್ಷ ರೂಪಾಯಿ ಮಂಜೂರಾಗಿದೆ. ಇನ್ನುಳಿದ ಹಣಕ್ಕೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಪಟ್ಟಣಕ್ಕೆ ಬಹುಮುಖ್ಯವಾಗಿರುವ ಒಳಚರಂಡಿಯೋಜನೆಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂಬರುವ ಆಡಳಿತ ಮಂಡಳಿಗೆ ಬೆಟ್ಟದಷ್ಟು ಅಭಿವೃದ್ದಿ ಕಾಮಗಾರಿಗಳು ಇದ್ದು, ತೀರಾ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕಿದೆ.

ಪಕ್ಷಗಳ ಪೈಪೋಟಿ

ಈ ಹಿಂದೆ ಹಳಿಯಾಳ ಪಟ್ಟಣ ಪಂಚಾಯ್ತಿ ಇದ್ದಾಗ 20 ವಾರ್ಡ್‌ಗಳಿದ್ದವು. ಆಗ 15 ಕಾಂಗ್ರೆಸ್, 4 ಜೆಡಿಎಸ್, ಒಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಬಿಜೆಪಿ ಒಂದೂ ಸ್ಥಾನ ಗೆದ್ದಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳ ಬಲಾಬಲ ಎಷ್ಟರ ಮಟ್ಟಿಗೆ ಏರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !