ಶನಿವಾರ, ಸೆಪ್ಟೆಂಬರ್ 18, 2021
28 °C

ಗುಡ್ಡ ಕುಸಿಯಲು 40ಕ್ಕೂ ಹೆಚ್ಚು ಅಂಶಗಳು ಕಾರಣ: ವಿಜ್ಞಾನಿಗಳ ಅಭಿಮತ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಭೂ ಕುಸಿತವಾಗಲು ನಿರ್ದಿಷ್ಟವಾಗಿ ಒಂದೇ ಕಾರಣವನ್ನು ಹೇಳುವುದು ಕಷ್ಟ. ಏಕಾಏಕಿ ಭಾರಿ ಪ್ರಮಾಣದ ವರ್ಷಧಾರೆ, ವರ್ಷದ ಮಳೆಯ ಪ್ರಮಾಣ, ಮಣ್ಣಿನ ಕಣಗಳ ಹಿಡಿತ, ಹಸಿರು ಪದರದಲ್ಲಿ ಇಳಿಕೆ, ಸುರಕ್ಷಿತವಲ್ಲದ ರೀತಿಯಲ್ಲಿ ಗುಡ್ಡಗಳನ್ನು ಕತ್ತರಿಸುವುದು ಸೇರಿದಂತೆ 40ಕ್ಕೂ ಹೆಚ್ಚು ಅಂಶಗಳು ಜೊತೆಯಾಗಿ ಪರಿಣಾಮ ಬೀರಬಹುದು’ ಎನ್ನುತ್ತಾರೆ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣೆ (ಜಿ.ಎಸ್.ಐ) ಇಲಾಖೆಯ ಭೂ ವಿಜ್ಞಾನಿ ಕಮಲ್ ಕುಮಾರ್.

ಶಿರಸಿ ತಾಲ್ಲೂಕಿನ ಕಲ್ಲಳ್ಳಿ, ಕೆಳಗಿನಕೇರಿ, ಯಲ್ಲಾಪುರ ತಾಲ್ಲೂಕಿನ ಕಳಚೆ, ತಳಕೆಬೈಲ್, ಅರಬೈಲ್, ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟ ಹಾಗೂ ಕಾರವಾರ ತಾಲ್ಲೂಕಿನ ಕೊಡಸಳ್ಳಿ ಜಲಾಶಯದ ಸುತ್ತಮುತ್ತ ಈ ವರ್ಷ ಭೂ ಕುಸಿತವಾಗಿದೆ. ಇದಕ್ಕೆ ಕಾರಣ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರು ಮತ್ತು ಮತ್ತೊಬ್ಬ ಭೂ ವಿಜ್ಞಾನಿ ಮೋಹನ್ ರಾಜ್, ಸೋಮವಾರ ಮತ್ತು ಮಂಗಳವಾರ ಈ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಮ್ಮ ಪರಿಶೀಲನೆಯ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಭಾರಿ ಮಳೆ ಮತ್ತು ಭೂ ಕುಸಿತದಿಂದ ಇಡೀ ಜಿಲ್ಲೆಗೆ ತೊಂದರೆ ಆಗಿರುವುದನ್ನು ಗಮಸಿದ್ದೇವೆ. ಕಳಚೆಯಲ್ಲಿ ತೊರೆಯೊಂದು ಮುಖ್ಯ ಹಳ್ಳಕ್ಕೆ ಸಂಪರ್ಕ ಹೊಂದಿದೆ. ಅಣಶಿಯಲ್ಲಿ ಬಂಡೆಗಳೇ ಉರುಳಿವೆ. ಈ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಬಳಿಕವೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಿದೆ’ ಎನ್ನುತ್ತಾರೆ ಅವರು.

‘ಕಳಚೆ, ಕೊಡಸಳ್ಳಿ ಸುತ್ತಮುತ್ತ ಇಡೀ ಪ್ರದೇಶವು ಸದಾ ನೀರಿನಿಂದ ತುಂಬಿರುವುದನ್ನು ಗಮನಿಸಿದ್ದೇವೆ. ಹಾಗಾಗಿ, ಇದೂ ಕಾರಣವೇ ಅಥವಾ ಮಳೆ ಮುಂತಾದ ಇತರ ಕಾರಣಗಳಿವೆಯೇ ಎಂಬ ಬಗ್ಗೆ ಅಧ್ಯಯನ ಮಾಡಬೇಕಿದೆ’ ಎಂದು ಸ್ಪಷ್ಟಪಡಿಸುತ್ತಾರೆ.

‘ಕೊಡಗು ಮತ್ತು ಉತ್ತರ ಕನ್ನಡದಲ್ಲಿ ಆಗಿರುವ ಭೂ ಕುಸಿತಗಳಿಗೆ ಹೋಲಿಕೆ ಅಥವಾ ವ್ಯತ್ಯಾಸವನ್ನು ಈಗಲೇ ಗುರುತಿಸುವುದು ಸಾಧ್ಯವಿಲ್ಲ. ಎರಡೂ ಜಿಲ್ಲೆಗಳ ಮಣ್ಣಿನ ರಚನೆಗಳಲ್ಲಿ ವ್ಯತ್ಯಾಸವಿರಬಹುದು. ಇಲ್ಲಿ ಸಂಗ್ರಹಿಸಿದ ಮಾದರಿಗಳನ್ನು ಆಧರಿಸಿ ಮಾಡುವ ಅಧ್ಯಯನದಿಂದ ಭೂ ಕುಸಿತಕ್ಕೆ ಕಾರಣಗಳನ್ನು ಕಂಡುಕೊಳ್ಳಲಿದ್ದೇವೆ. ಇದು ಪ್ರಾಥಮಿಕ ಅಧ್ಯಯನವಾಗಿದ್ದು, ಸುಮಾರು 20 ದಿನಗಳಲ್ಲಿ ನಮ್ಮ ತಂಡದ ವರದಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಿದ್ದೇವೆ. ಅವರು ಅದನ್ನು ಪರಿಶೀಲಿಸಿ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ನೀಡಲಿದ್ದಾರೆ’ ಎಂದು ಹೇಳುತ್ತಾರೆ.

4.30 ಲಕ್ಷ ಕ್ಯುಸೆಕ್ ಒಳಹರಿವು: ‘ಕೊಡಸಳ್ಳಿ ಜಲಾಶಯಕ್ಕೆ ಜುಲೈ 22ರಂದು 4.30 ಲಕ್ಷ ಕ್ಯುಸೆಕ್ ನೀರಿನ ಒಳಹರಿವು ಇತ್ತು. ಕೆಳಭಾಗದಲ್ಲಿರುವ ಕದ್ರಾ ಜಲಾಶಯ ಮತ್ತು ಗ್ರಾಮಸ್ಥರ ಸುರಕ್ಷತೆಯನ್ನು ಗಮನದಲ್ಲಿ ಇರಿಸಿ 2.15 ಲಕ್ಷ ಕ್ಯುಸೆಕ್ ನೀರನ್ನು ಹೊರ ಹರಿಸಲಾಗಿದೆ’ ಎಂದು ಕೊಡಸಳ್ಳಿ ಜಲಾಶಯದ ಸಿವಿಲ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶೈಲೇಂದ್ರ ಪ್ರಸಾದ ಬಾಂದೇಕರ್ ತಿಳಿಸಿದ್ದಾರೆ.

‘ಇಷ್ಟೊಂದು ನೀರನ್ನು ಕೊಡಸಳ್ಳಿ ಜಲಾಶಯದಿಂದ ಹೊರಹರಿಸಿದ್ದು ಇದೇ ಮೊದಲು. ರಾತ್ರಿ ಪೂರ್ತಿ ನೀರನ್ನು ನಿಯಂತ್ರಿಸಲಾಗಿದೆ. ಒಂದುವೇಳೆ, ಜಲಾಶಯ ಇಲ್ಲದಿದ್ದಲ್ಲಿ ನದಿ ಪಾತ್ರದ ಮತ್ತಷ್ಟು ಗ್ರಾಮಗಳಲ್ಲಿ ಪ್ರವಾಹ ಉಂಟಾಗುತ್ತಿತ್ತು’ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು