ಬುಧವಾರ, ಸೆಪ್ಟೆಂಬರ್ 18, 2019
23 °C
‘ಮತ್ತೆ ಕಲ್ಯಾಣ’ ಅಭಿಯಾನದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ

ಸಮಾನತೆ ಮೂಡಿದಾಗ ಮೀಸಲಾತಿ ಅಂತ್ಯ

Published:
Updated:
Prajavani

ಕಾರವಾರ: ‘ಸಮಾಜದಲ್ಲಿ ಮೀಸಲಾತಿಯಂತಹ ಸೌಲಭ್ಯಗಳನ್ನು ಪಡೆದು ಮೇಲೆ ಬಂದವರು ತಮಗಿಂತ ಕೆಳಗಿರುವವರಿಗೆ ಸಹಾಯ ಹಸ್ತ ಚಾಚಬೇಕು. ಇದಾಗದಿದ್ದರೆ ಮೀಸಲಾತಿ ಕೊನೆಯಾಗುವುದಿಲ್ಲ’ ಎಂದು ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. 

ನಗರದಲ್ಲಿ ‘ಮತ್ತೆ ಕಲ್ಯಾಣ’ ಸಮಿತಿಯಿಂದ ಶನಿವಾರ ಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗೆ ಅವರು ಉತ್ತರಿಸಿದರು. 

‘ಸಮಾಜದ ಕೆಲವು ವರ್ಗದವರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದ್ದಾರೆ. ಅಂಥವರಿಗೆ ಸೌಲಭ್ಯ ನೀಡುವುದು ಸರ್ಕಾರ ಮತ್ತು ಸಮಾಜದ ಹೊಣೆಗಾರಿಕೆಯಾಗಿದೆ. ಸಮಾಜದಲ್ಲಿ ಎಂದಿಗೆ ಸಮಾನತೆ ಮೂಡುತ್ತದೋ ಅಂದಿಗೆ ಮೀಸಲಾತಿ ಮುಕ್ತಾಯವಾಗುತ್ತದೆ’ ಎಂದರು. 

‘ಶರಣರು ಜಾತ್ಯತೀತ ಮನೋಭಾವವನ್ನು 12ನೇ ಶತಮಾನದಲ್ಲೇ ಬೆಳೆಸಿದರು. ಆದರೆ, ಅದೀಗ ಮತ್ತೆ ಹಳ್ಳ ಹಿಡಿಯುತ್ತಿದೆ. ಜಾತೀಯತೆಯನ್ನು ಹೊಡೆದೋಡಿಸುವ ಕೆಲಸ ಮೊದಲಾಗಬೇಕು. ಯಾವುದೇ ಅರ್ಜಿಗಳಲ್ಲಿ ಜಾತಿಯನ್ನು ನಮೂದಿಸಲೇ ಬೇಕೆಂದಿಲ್ಲ. ವಿಶ್ವ ಮಾನವ ಎಂದು ಬರೆಯಿರಿ’ ಎಂದು ಸಲಹೆ ನೀಡಿದರು.

ಜಾತಿಯ ಉಲ್ಲೇಖವೇಕೆ?: ‘ನಮ್ಮದು ಜಾತ್ಯತೀತ ರಾಷ್ಟ್ರ. ಆದರೆ, ಈಗಿನ ಸ್ಥಿತಿಯಲ್ಲಿ ಸರ್ಕಾರದ ಅರ್ಜಿಗಳಲ್ಲಿ ಜಾತಿಯನ್ನು ಬರೆಯಲೇಬೇಕು. ಈ ವೈರುಧ್ಯವೇಕೆ’ ಎಂದು ಸಭಿಕರ ಪ್ರಶ್ನೆಗೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಉತ್ತರಿಸಿದರು. 

‘ಈಗ ಇರುವ ಜಾತೀಯತೆಯನ್ನು ನೋಡಿದರೆ ನಮ್ಮ ದೇಶವನ್ನು ಜಾತ್ಯತೀತ ಎಂದು ಕರೆಯುವುದು ತಪ್ಪು ಎನಿಸುತ್ತಿದೆ. ಜಾತ್ಯತೀತ ಪದ್ಧತಿ ಕೇವಲ ಪುಸ್ತಕದಲ್ಲಿದೆ. ನಮ್ಮೆದುರು ಯಾರೇ ಬಂದರೂ ಅವರ ಜಾತಿ ಕೇಳುತ್ತೇವೆ. ಅಕ್ಷರಸ್ಥರು ಜಾಸ್ತಿಯಾದಂತೆ ಜಾತಿ ಪ್ರೀತಿಯೂ ಹೆಚ್ಚುತ್ತಿದೆ. ಇದರ ವಿರುದ್ಧ ಯುವಕರೇ ಹೋರಾಡಬೇಕು’ ಎಂದು ಹೇಳಿದರು.

‘ಜಾತಿ, ರಾಜಕಾರಣವೇ ಸಮಸ್ಯೆ’: ‘ಜಾತಿ ಮತ್ತು ರಾಜಕಾರಣ ಸೇರಿದ್ದೇ ಈಗಿನ ದೇಶದ ಬಹುತೇಕ ಸಮಸ್ಯೆಗಳಿಗೆ ಕಾರಣ. ಇದು ಇರುವಷ್ಟು ಕಾಲ ದೇಶ ಮುಂದೆ ಬರಲು ಸಾಧ್ಯವೇ ಇಲ್ಲ’ ಎಂದು ಸೇಂಟ್ ಜೋಸೆಫ್ ಪಿಯು ಕಾಲೇಜಿನ ಪ್ರಾಂಶುಪಾಲ ಫಾದರ್ ಸ್ಟ್ಯಾನಿ ಪಿಂಟೊ ಅಭಿಪ್ರಾಯಪಟ್ಟರು. 

‘ಈಗ ಒಂದುವೇಳೆ ಅಮ್ಮನ ಹೆಸರು ಬರೆಯದಿದ್ದರೂ ಆಗುತ್ತದೆ. ಆದರೆ, ಜಾತಿಯ ಹೆಸರು ಇಲ್ಲದಿದ್ದರೆ ಆನ್‌ಲೈನ್‌ ಅರ್ಜಿಗಳು ಮುಂದೆ ಹೋಗುವುದೇ ಇಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, ‘ಈ ಬಗ್ಗೆ ನಾನು ಹೋರಾಟ ನಡೆಸಿದ್ದೆ. ಆಗ ಸಂವಿಧಾನದಿಂದ ಕೆಲವು ಸೌಲಭ್ಯಗಳನ್ನು ನೀಡಲು ಇದು ಅಗತ್ಯ ಎಂದು ತಿಳಿಸಿದ್ದರು’ ಎಂದು ಹೇಳಿದರು.

ಬಹುಮಾನ ವಿತರಣೆ: ‘ಮತ್ತೆ ಕಲ್ಯಾಣ’ ಅಭಿಯಾನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರವಾರದ ಪ್ರೀಮಿಯರ್ ಪಿ.ಯು ಕಾಲೇಜಿನ ನಮನ್.ಎಸ್, ಶ್ವೇತಾ ರಾಯ್ಕರ್ ಪ್ರಥಮ, ಭಟ್ಕಳದ ಜ್ಞಾನೇಶ್ವರಿ ಕಾಲೇಜಿನ ಚಂದ್ರಪ್ರಭಾ ಕೊಡಿಯಾ ದ್ವಿತೀಯ ಮತ್ತು ಕಾರವಾರದ ಸರ್ಕಾರಿ ಪಿಯು ಕಾಲೇಜಿನ ನಂದಿನಿ ಶೆಟ್ಟಿ, ಅಂಕೋಲಾದ ದೀಪಾ ನಾಯಕ ತೃತೀಯ ಬಹುಮಾನ ಪಡೆದುಕೊಂಡರು.

ಕವಯತ್ರಿ ಹೇಮಾ ಪಟ್ಟಣಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಸಾಹಿತಿ ರಾಮಕೃಷ್ಣ ಗುಂದಿ, ಪ್ರೊ.ವಿಜಯಾ ಡಿ.ನಾಯ್ಕ, ಸುಮಂಗಲಾ ಚ.ಅಂಗಡಿ, ಖಲೀಲ್ ಉಲ್ಲಾ ವೇದಿಕೆಯಲ್ಲಿದ್ದರು. ಇದಕ್ಕೂ ಮೊದಲು ನಗರ ಪ್ರಮುಖ ರಸ್ತೆಗಳಲ್ಲಿ ಸಾಮರಸ್ಯದ ನಡಿಗೆ ಹಮ್ಮಿಕೊಳ್ಳಲಾಯಿತು.

Post Comments (+)