ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕರಿಕಲ್ಲಿನ ಸುಂದರ ಸದಾಶಿವಗಡದ ‘ಸ್ವಗತ’

ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆಗಾಗಿ ನೆಲಸಮವಾದ ಬೆಟ್ಟದ ಒಂದು ಭಾಗ
Last Updated 6 ಅಕ್ಟೋಬರ್ 2020, 7:37 IST
ಅಕ್ಷರ ಗಾತ್ರ
ADVERTISEMENT
""
""

ಕಾರವಾರ: ‘ನಾಲ್ಕು ವರ್ಷಗಳ ಹಿಂದಿನವರೆಗೂ ನಾನು ಫೋಟೊಶೂಟ್ ಮಾಡಿಕೊಳ್ಳುವವರಿಗೆ ಅಚ್ಚುಮೆಚ್ಚಾಗಿದ್ದೆ. ಹತ್ತಾರು ಚಲನಚಿತ್ರಗಳ ‘ಆ್ಯಕ್ಷನ್, ಕಟ್, ರಿಟೇಕ್’ ಸನ್ನಿವೇಶಗಳನ್ನು ಕಂಡಿದ್ದೆ. ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಬಂದು ಸೂರ್ಯಾಸ್ತ ಕಣ್ತುಂಬಿಕೊಳ್ಳುತ್ತಿದ್ದರು. ಪ್ರೇಮಿಗಳು ಬಂದು ಪಿಸುಮಾತು ಹೇಳುತ್ತಿದ್ದರು. ಆದರೆ, ಈಗ ನನ್ನ ಒಂದು ಭಾಗವನ್ನೇ ನೆಲಸಮ ಮಾಡಿ ಅಂಗವಿಕಲನನ್ನಾಗಿ ಮಾಡಲಾಗಿದೆ..’

‘ಹೌದು, ನಾನು ಕಾರವಾರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಸದಾಶಿವಗಡದ ಬೆಟ್ಟ. ಕಾರವಾರವನ್ನು ಉತ್ತರ ಭಾಗದಿಂದ ಬೇರ್ಪಡಿಸುವ ಕಾಳಿ ನದಿಗೆ ನನ್ನ ಮೇಲಿನಿಂದ ಸೇತುವೆ ನಿರ್ಮಿಸಲಾಗಿದೆ. ಈಗ ಒಂದಲ್ಲ ಎರಡು ಸೇತುವೆಗಳಿವೆ. ಸುಮಾರು 30 ವರ್ಷಗಳ ಹಿಂದೆ ಮನುಷ್ಯರು ತಮ್ಮ ಸಂಚಾರಕ್ಕೆ ಮೊದಲು ನನ್ನ ಹೃದಯಭಾಗವನ್ನೇ ಸೀಳಿ ಒಂದು ಹೆದ್ದಾರಿ ಮಾಡಿಕೊಂಡರು. ಅದು ಒಂದು ರೀತಿಯಲ್ಲಿ ನನ್ನ ಆಕರ್ಷಣೆ ಹೆಚ್ಚಲೂ ಕಾರಣವಾಯಿತು. ಆದರೆ, ಆಗ ನಾನು ಯಾವ ವಿಚಾರವಾಗಿ ಹೆದರಿದ್ದೆನೋ ಅದು ನಿಜವಾಗಲು ಹೆಚ್ಚು ವರ್ಷಗಳು ಬೇಕಾಗಲಿಲ್ಲ..’

‘ಅವರ ವಾಹನಗಳ ಸಂಖ್ಯೆ ಹೆಚ್ಚಿದಂತೆ ನಾಲ್ಕು ಪಥದ ಹೆದ್ದಾರಿ ನಿರ್ಮಿಸಲು ಯೋಜಿಸಿದರು. ನನ್ನ ಒಂದು ಭಾಗಕ್ಕೇ ಡೈನಮೈಟ್, ದೊಡ್ಡ ಯಂತ್ರಗಳನ್ನು ಬಳಸಿ ಸಂಪೂರ್ಣ ನೆಲಸಮ ಮಾಡಿದರು. ಆದರೆ, ಮಾತು ಬಾರದ ನಾನಾದರೂ ಏನು ತಾನೇ ಮಾಡಲು ಸಾಧ್ಯ? ನನ್ನ ಸಂಕಷ್ಟವನ್ನು ಯಾರೊಂದಿಗೆ ಹಂಚಿಕೊಳ್ಳಲು ಸಾಧ್ಯ? ಬೆರಳೆಣಿಕೆಯ ಮಂದಿ ನನ್ನ ಪರವಾಗಿ ದನಿಯೆತ್ತಿ ಬಳಿಕ ಅವರೂ ಸುಮ್ಮನಾದರು. ನಾಲ್ಕು ಪಥದ ಹೆದ್ದಾರಿಗಾಗಿ ನಾನು ಒಂದು ಭಾಗವನ್ನೇ ಕಳೆದುಕೊಂಡು ಸಂಪೂರ್ಣ ಅಂಗವಿಕಲನಾಗಿ ಹೋದೆ..’

‘ನನ್ನ ಮೇಲೆ ಏರಿದರೆ ಅರಬ್ಬಿ ಸಮುದ್ರದ ವಿಶಾಲ ನೋಟ ಕಾಣುತ್ತದೆ. ಕಾಳಿ ನದಿಯು ಓಡೋಡಿ ಬಂದು ಸಾಗರವನ್ನು ಸಂಧಿಸುವ ದೃಶ್ಯ ನಯನಮನೋಹರ. ಶತಮಾನಗಳ ಹಿಂದಿನ ದಿನಗಳಲ್ಲಿ ಇದು ವೈರಿಗಳ ಸಂಚಾರದ ಮೇಲೆ ಕಣ್ಣಿಡಲೂ ಅತ್ಯುತ್ತಮ ಸ್ಥಳವಾಗಿತ್ತು. ಹಾಗಾಗಿ ಸೋಂದೆಯ ಅರಸ ರಾಜಾ ಬಸವಲಿಂಗ 1715ರಲ್ಲಿ ತನ್ನ ತಂದೆ ರಾಜಾ ಸದಾಶಿವ ಅವರ ಸ್ಮರಣಾರ್ಥಒಂದು ಕೋಟೆಯನ್ನು ಕಟ್ಟಿಸಿದ. ಆತನಕ ಅನಾಮಧೇಯನಾಗಿದ್ದ ನಾನು ಅಂದಿನಿಂದ ‘ಸದಾಶಿವಗಡ ಬೆಟ್ಟ’ ಎಂದು ಜಗತ್ಪ್ರಸಿದ್ಧನಾದೆ..’

‘ಹೆದ್ದಾರಿಗಾಗಿ ನನ್ನ ಒಂದು ಭಾಗವನ್ನೇ ನೆಲಸಮ ಮಾಡುವ ಬದಲು ನನ್ನನ್ನು ಬಳಸಿ ಹೋಗುವಂತೆ ರಸ್ತೆ ನಿರ್ಮಿಸಬಹುದಿತ್ತು ಅಲ್ಲವೇ? ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಇದಕ್ಕೆ ಅವಕಾಶ ಇರಲಿಲ್ಲವೇ? ಸಮುದ್ರದಲ್ಲೇ ಹತ್ತಾರು ಕಿಲೋಮೀಟರ್ ಸೇತುವೆ ನಿರ್ಮಿಸುವುದು, ಹಿಮಾಲಯದಂತಹ ಪ್ರದೇಶದಲ್ಲಿ ಅತಿ ಉದ್ದದ ಸುರಂಗವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಹೀಗಿರುವಾಗ ನನ್ನ ಶರೀರದ ಭಾಗವನ್ನು ಉಳಿಸಿಕೊಳ್ಳುವುದು ಕಷ್ಟವಿತ್ತೇ? ಈ ಪ್ರಶ್ನೆಗಳಿಗೆ ನನಗಿನ್ನೂ ಉತ್ತರ ಸಿಕ್ಕಿಲ್ಲ..’

‘ನನ್ನ ಮತ್ತೊಂದು ಭಾಗವೂ ಇರುತ್ತಿದ್ದರೆ ವಿದೇಶಗಳಲ್ಲಿ ಇರುವಂತೆ ಹೆದ್ದಾರಿಯ ಮೇಲಿನಿಂದ ಸೇತುವೆ ನಿರ್ಮಿಸಬಹುದಿತ್ತು. ಅದಕ್ಕೆ ಒಡೆಯದಂಥ ಗಾಜಿನ ಹಲಗೆಗಳನ್ನು ಅಳವಡಿಸಿ, ಎರಡೂ ಭಾಗಗಳ ನಡುವೆ ಪ್ರವಾಸಿಗರಿಗೆ ನಡೆದುಕೊಂಡು ಹೋಗಲು ಅವಕಾಶ ಕೊಟ್ಟಿದ್ದರೆ ನನ್ನ ಆಕರ್ಷಣೆ ಮತ್ತಷ್ಟು ಹೆಚ್ಚುತ್ತಿತ್ತು. ಪ್ರವಾಸಿಗರಿಗೆ ಇದೊಂದು ಅನೂಹ್ಯ ಅನುಭವ ನೀಡುವ ತಾಣವಾಗುತ್ತಿತ್ತು. ನಾನೀಗ ಅದನ್ನೆಲ್ಲ ನೆನಪಿಸಿಕೊಂಡು ದುಃಖಿಸಿದರೆ ಏನು ಪ್ರಯೋಜನವಿದೆ? ಬಹುಶಃ ನನ್ನ ಶರೀರದಲ್ಲಿ ಹೇರಳವಾಗಿದ್ದ ಕರಿಕಲ್ಲಿನ ಮೇಲೆ ಯಾರಿಗೋ ಕಣ್ಣಿತ್ತು ಅನಿಸುತ್ತದೆ. ಅದರಿಂದ ಅವರ ಬಾಳು ಬಂಗಾರವಾಗುತ್ತದೆ ಎಂದುಕೊಂಡಿದ್ದರೋ ಏನೋ ಗೊತ್ತಿಲ್ಲ. ಅಂತೂ ನನ್ನನ್ನು ಒಡೆದು ನೆಲಸಮ ಮಾಡಿದರು..’

‘ಬೇಸರವೆನಿಸುವುದು ಇದಕ್ಕೇ ನೋಡಿ.. ಅದೆಷ್ಟೋ ಶತಮಾನಗಳಿಂದ ಕಾಪಿಟ್ಟುಕೊಂಡ ಇಂತಹ ಸೌಂದರ್ಯವನ್ನು ಹಾಳುಗೆಡವಲು ಮನುಷ್ಯನಿಗೆ ಅತ್ಯಲ್ಪ ಸಮಯ ಸಾಕು. ಆದರೆ, ಇಂತಹ ಮತ್ತೊಂದನ್ನು ಆತ ಸೃಷ್ಟಿ ಮಾಡಲು ಸಾಧ್ಯವಿಲ್ಲ..’

‘ನನ್ನ ಮೇಲೆ ರಾಜಾ ಬಸವಲಿಂಗ ಕಟ್ಟಿಸಿದ ಕೋಟೆಯ ಪ್ರದೇಶವು ಇಂದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಉಸ್ತುವಾರಿಯಲ್ಲಿದೆ. ಒಂದಷ್ಟು ಪ್ರವಾಸಿಗರು ಬಂದು ಉಳಿದುಕೊಂಡು ಸಂತಸ ಪಡುತ್ತಾರೆ. ಅವರ ನಗು, ಸಂಭ್ರಮದಲ್ಲಿ ನಾನೂ ಭಾಗಿಯಾಗಿ ನನ್ನ ದುಃಖವನ್ನು ಮರೆಯುತ್ತಿದ್ದೇನೆ..’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT