ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೀನ’ ಸಾಂಬಾರು ಪುಡಿಗೆ ಭರಪೂರ ಬೇಡಿಕೆ

ಬಿಡುವಿನ ವೇಳೆಯಲ್ಲಿ ಕೈಗೊಂದು ಕೆಲಸ, ಮನೆಗೆ ಉಪ ಆದಾಯ
Last Updated 3 ಜುಲೈ 2019, 12:09 IST
ಅಕ್ಷರ ಗಾತ್ರ

ಶಿರಸಿ: ಮನೆಗೆಲಸದ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬ ಕನಸಿನೊಂದಿಗೆ ಗ್ರಾಮೀಣ ಮಹಿಳೆಯೊಬ್ಬರು ಶುರು ಮಾಡಿಕೊಂಡಿರುವ ಸಾಂಬಾರು ಪುಡಿ ತಯಾರಿಕೆ ಗೃಹೋದ್ಯಮವಾಗಿ ಬೆಳೆದಿದೆ.

ಶಿರಸಿ ತಾಲ್ಲೂಕು ಶಿಂಗನಮನೆಯ ಮಹಾದೇವಿ ಹೆಗಡೆ ಅವರಿಗೆ ಸದಾ ಹೊಸತನ್ನು ಕಲಿಯುವ ಮತ್ತು ಅದನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರುವ ಹಂಬಲ. ಹೊಸ ಅಡುಗೆ, ಹೊಲಿಗೆ ಇವುಗಳನ್ನು ನೋಡಿ ಬಂದು, ಮನೆಯಲ್ಲಿ ಪ್ರಯೋಗ ಮಾಡುವ ಅವರಿಗೆ ಸಣ್ಣ ಉದ್ಯಮ ಆರಂಭಿಸುವ ಯೋಚನೆ ಬಂತು. ಅಡುಗೆಮನೆ ಸಾಂಬಾರು ಬಟ್ಟಲಿನಲ್ಲಿರುವ ಸಾಮಗ್ರಿಗಳನ್ನು ಬಳಸಿ ಸಾಂಬಾರು ಪುಡಿ ತಯಾರಿಸಿ, ಪೇಟೆಗೆ ಬರುವ ಪತಿಯ ಬಳಿ ಟಿಎಸ್‌ಎಸ್‌ ಸುಪರ್ ಮಾರ್ಕೆಟ್‌ಗೆ ಕಳುಹಿಸಿದರು. ಅಲ್ಲಿ ಮಾರಾಟಕ್ಕಿಟ್ಟಿದ್ದ ಸಾಂಬಾರು ಪುಡಿ ಪ್ಯಾಕೆಟ್ ಎರಡೇ ದಿನಗಳಲ್ಲಿ ಖಾಲಿಯಾಯಿತು ಜೊತೆಗೆ ಗ್ರಾಹಕರಿಂದ ಬೇಡಿಕೆಯೂ ಬಂತು.

‘ಬೇಡಿಕೆ ಹೆಚ್ಚಾದ ಮೇಲೆ ನಮ್ಮದೇ ಆದ ಒಂದು ಬ್ರ್ಯಾಂಡ್ ಇರಬೇಕೆಂದು ‘ಭೀನ’ ಹೋಂ ಪ್ರಾಡಕ್ಟ್ ಎಂದು ಹೆಸರಿಟ್ಟೆ. ಆರಂಭದಲ್ಲಿ 3–4 ಕೆ.ಜಿ.ಯಷ್ಟು ಮಾರಾಟವಾಗುತ್ತಿದ್ದ ಉತ್ಪನ್ನ ಈಗ ತಿಂಗಳಿಗೆ 40–50 ಕೆ.ಜಿ.ಯಷ್ಟು ಮಾರಾಟವಾಗುತ್ತದೆ. ಟಿಎಸ್‌ಎಸ್‌, ಕಿರಾಣಿ ಅಂಗಡಿ, ದಿನಸಿ ಅಂಗಡಿಗಳಲ್ಲಿ ಮಾರಾಟಕ್ಕೆ ಇಡುತ್ತೇವೆ. ಯಜಮಾನರು ಪೇಟೆಗೆ ಬರುವಾಗ ಅಂಗಡಿಗೆ ತಂದು ಕೊಡುತ್ತಾರೆ’ ಎನ್ನುತ್ತಾರೆ ಮಹಾದೇವಿ ಹೆಗಡೆ.

ಸಾಂಬಾರು ಪದಾರ್ಥಗಳ ದರಕ್ಕನುಗುಣವಾಗಿ 100 ಗ್ರಾಂ ಪೊಟ್ಟಣಕ್ಕೆ ₹ 28ರಿಂದ 30 ದರ ನಿಗದಿಪಡಿಸಲಾಗಿದೆ. ನಗರವಾಸಿಗಳು ಬಿಡಿ ಪೊಟ್ಟಣಗಳನ್ನು ಹೆಚ್ಚು ಖರೀದಿಸಿದರೆ, ಮದುವೆ–ಉಪನಯನ, ಸಮಾರಂಭಗಳಿಗೆ 5,10 ಕೆ.ಜಿ ಪ್ಯಾಕೆಟ್ ಒಯ್ಯುತ್ತಾರೆ. ಆರಂಭದಲ್ಲಿ ಮೇಣದ ಬತ್ತಿ ದೀಪದಲ್ಲಿ ಪ್ಯಾಕೆಟ್ ಸೀಲ್ ಮಾಡುತ್ತಿದ್ದೆವು. ಬಂದಿರುವ ಆದಾಯದಲ್ಲಿ ಪ್ಯಾಕಿಂಗ್ ಮಷಿನ್ ಖರೀದಿಸಿದ್ದೇವೆ. ಸ್ವಯಂ ಚಾಲಿತ ಪ್ಯಾಕಿಂಗ್ ಯಂತ್ರ ಖರೀದಿಸುವ ಯೋಚನೆಯಿದೆ’ ಎನ್ನುತ್ತಾರೆ ಅವರು.

ಮಹಾದೇವಿ ಹೆಗಡೆ ಜೊತೆ ಅವರ ಪತಿ ಲಕ್ಷ್ಮೀನಾರಾಯಣ ಹೆಗಡೆ ಪ್ಯಾಕೆಟ್ ಮಾಡಲು ಸಹಕರಿಸುತ್ತಾರೆ. ‘ಮನೆ ಕೆಲಸದ ನಂತರ ಸಾಕಷ್ಟು ಸಮಯವಿರುತ್ತದೆ. ಟಿ.ವಿ ನೋಡುವ ಸಮಯದಲ್ಲಿ ಇಂತಹ ಕೆಲಸದಲ್ಲಿ ತೊಡಗಿಕೊಂಡರೆ ಉಪ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಗುಣಮಟ್ಟದ ಉತ್ಪನ್ನಕ್ಕೆ ಬೇಡಿಕೆ ಇದ್ದೇ ಇದೆ’ ಎಂಬುದು ಅವರ ವಿಶ್ವಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT