ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ

ಇಂದು ಸಂಜೆ 6 ಗಂಟೆಯವರೆಗೆ ಅನ್ವಯ: ನಾಳೆ ಬೆಳಗಿನವರೆಗೆ ತನಕ ಮದ್ಯ ಮಾರಾಟ ನಿಷೇಧ
Last Updated 9 ನವೆಂಬರ್ 2019, 17:30 IST
ಅಕ್ಷರ ಗಾತ್ರ

ಕಾರವಾರ: ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ. ಭಾನುವಾರ ಸಂಜೆ 6 ಗಂಟೆಯವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿರುವಾಗ ಪಟಾಕಿಮಾರಾಟ ಮಳಿಗೆಗಳನ್ನುಕಡ್ಡಾಯವಾಗಿ ಮುಚ್ಚಬೇಕು ಹಾಗೂ ಯಾರೂ ಪಟಾಕಿ ಸಿಡಿಸಬಾರದು. ಇದೇ ರೀತಿ, ನ.11ರಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ, ಸಾಗಣೆಯನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ವೈನ್ ಶಾಪ್‌ಗಳು ಮತ್ತು ಬಾರ್‌ಗಳನ್ನುತೆರೆಯಬಾರದು ಎಂದು ಆದೇಶಿಸಿದ್ದಾರೆ.

ನಗರದ ನಿವಾಸಿಗಳಿಗೆ ಶನಿವಾರ ಒಂದೆಡೆ ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಬಗ್ಗೆ ಕುತೂಹಲ. ಮತ್ತೊಂದೆಡೆ, ಸಂಜೆ ತುಳಸಿ ಹಬ್ಬಕ್ಕೆ ತಯಾರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ. ಇವುಗಳ ನಡುವೆಯೇ ಕಬ್ಬು, ಹೂ, ತರಕಾರಿ, ಹಣ್ಣಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ತುಳಸಿ ಹಬ್ಬದ ಸಿದ್ಧತೆ:ಶನಿವಾರ ಒಂದೆಡೆ ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್‌ ತೀರ್ಪಿನ ಕುತೂಹಲ. ಮತ್ತೊಂದೆಡೆ, ಸಂಜೆ ನಡೆಯುವ ತುಳಸಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುವ ಗಡಿಬಿಡಿ ಕಂಡುಬಂತು.

ಬೇರೆ ಬೇರೆ ಜಿಲ್ಲೆಗಳಿಂದ ವ್ಯಾಪಾರಕ್ಕೆ ಬಂದಿದ್ದ ವರ್ತಕರು, ನಗರದಮಹಾತ್ಮ ಗಾಂಧಿ ರಸ್ತೆ, ಗ್ರೀನ್ ಸ್ಟ್ರೀಟ್, ಹೂವಿನ ಚೌಕ ಮುಂತಾದೆಡೆ ಹೂ, ಕಬ್ಬಿನ ವ್ಯಾಪಾರ ಮಾಡಿದರು. ಶುಕ್ರವಾರಕ್ಕಿಂತ ಶನಿವಾರ ಕಬ್ಬಿನ ದರ ದುಪ್ಪಟ್ಟು ಆಗಿರುವುದು ಮಾತ್ರ ಗ್ರಾಹಕರ ತಲೆಬಿಸಿ ಮಾಡಿಸಿತು. ಸಾಧಾರಣ ದಪ್ಪದ ಒಂದು ಕಬ್ಬಿಗೆ ₹ 50ರಂತೆ ಹಾಗೂ 10ರ ಒಂದು ಕಟ್ಟು ₹ 500ರಂತೆ ಮಾರಾಟವಾಯಿತು.ದಿಢೀರ್ ದರ ಏರಿಕೆಯಿಂದ ಕಂಗಾಲಾದ ಗ್ರಾಹಕರು ವ್ಯಾಪಾರಿಗಳ ಜೊತೆ ಚರ್ಚೆ ಮಾಡುತ್ತಿದ್ದುದೂ ಸಾಮಾನ್ಯವಾಗಿತ್ತು.

‘ಈ ಬಾರಿ ನೆರೆ ಬಂದು ಬೆಳೆಯೆಲ್ಲ ಹಾಳಾಗಿದೆ. ಉಳಿದಿರೋದನ್ನೇ ಮಾರಾಟಕ್ಕೆ ತಂದಿದ್ದೇವೆ. ಇದರಲ್ಲೇ ನಮ್ಮ ಜೀವನವೂ ಸಾಗಬೇಕು. ರಸ್ತೆಯೂ ಸರಿಯಿಲ್ಲದ ಕಾರಣ ಸಾಗಣೆ ವೆಚ್ಚವೂ ಹೆಚ್ಚಾಗಿದೆ’ ಎಂದುಕಬ್ಬಿನವರ್ತಕ, ಗೋಕಾಕ್‌ನ ರಾಮಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

ಉಳಿದಂತೆ, ಒಂದು ಮಾರು ಚೆಂಡು ಹೂವಿಗೆ ₹ 30, ಕಮಲದ ಒಂದು ಹೂವಿಗೆ ₹ 10, ತಳಿರು ತೋರಣ ಮಾಡಿ ಅಲಂಕರಿಸಲು ಅಗತ್ಯವಾದ ಮಾವಿನ ಎಲೆಯ ಕಟ್ಟೊಂದಕ್ಕೆ ₹ 5ರಂತೆ ಮಾರಾಟವಾಯಿತು.

ಈದ್ ಮೆರವಣಿಗೆ ಮುಂದೂಡಿಕೆ:ಮುಸ್ಲಿಮರ ಪವಿತ್ರ ಹಬ್ಬ ಈದ್ ಮಿಲಾದ್ ಭಾನುವಾರ ನಡೆಯಲಿದೆ. ಆದರೆ, ನಿಷೇಧಾಜ್ಞೆ ಜಾರಿಯಾಗಿರುವ ಕಾರಣ ಈ ಬಾರಿ ಈದ್ ಮೆರವಣಿಗೆಯನ್ನು ಮುಂದೂಡಲು ಕಾರವಾರದಜಾಮಿಯಾ ಮಸೀದಿ ಸಮಿತಿ ನಿರ್ಧರಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಮಿತಿಯಜಂಟಿ ಕಾರ್ಯದರ್ಶಿ ಬಾಬು ಶೇಖ್, ‘ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿದ ಬಳಿಕ ಈ ಬಗ್ಗೆ ನಿರ್ಧರಿಸಲಾಗಿದೆ. ಕಾರವಾರ ತಾಲ್ಲೂಕಿನಲ್ಲಿ ಈದ್ ಮೆರವಣಿಗೆ ಮುಂದೂಡಲು ತೀರ್ಮಾನಿಸಿದ್ದೇವೆ. ಕಾನೂನು ಪಾಲನೆ ನಮ್ಮ ಕರ್ತವ್ಯ. ಈದ್ ಮೆರವಣಿಗೆಯನ್ನು ನಿಷೇಧಾಜ್ಞೆ ಅವಧಿ ಮುಗಿದ ಬಳಿಕ ಹಮ್ಮಿಕೊಳ್ಳುತ್ತೇವೆ. ಅಯೋಧ್ಯೆಯ ವಿಚಾರದಲ್ಲಿ ಸುಪ್ರೀಂಕೋರ್ಟ್‌ ತೀಪರ್ನ್ನು ಸ್ವಾಗತಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT