ಭಾನುವಾರ, ಜನವರಿ 26, 2020
21 °C
ಕೈ, ಕಾಲು ಕಟ್ಟಿ ಹಾಕಿ ಕೊಂದು ಮನೆ ದರೋಡೆ ಮಾಡಿದ ಕೊಲೆಗಡುಕರು

ಆಂದ್ಲೆಯಲ್ಲಿ ಹಿರಿಯ ದಂಪತಿಯ ಬರ್ಬರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ತಾಲ್ಲೂಕಿನ ಮೊಗಟಾ ಗ್ರಾಮದ ಆಂದ್ಲೆಯ ಮನೆಯೊಂದರಲ್ಲಿ ಶುಕ್ರವಾರ ತಡರಾತ್ರಿ ಹಿರಿಯ ದಂಪತಿಯ ಕೈ, ಕಾಲುಗಳನ್ನು ಕಟ್ಟಿ, ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿದೆ. 

ನಾರಾಯಣ ಬೊಮ್ಮಯ್ಯ ನಾಯಕ (78) ಮತ್ತು ಅವರ ಪತ್ನಿ ಸಾವಿತ್ರಿ ನಾರಾಯಣ ನಾಯಕ (72) ಕೊಲೆಯಾದವರು. ದುಷ್ಕರ್ಮಿಗಳು ಮನೆಯಲ್ಲಿದ್ದ ಸುಮಾರು 15 ತೊಲೆ ಬಂಗಾರ ಮತ್ತು ₹ 2 ಲಕ್ಷ ನಗದನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಕೊಲೆ ಮಾಡಿದವರು ಹಲವು ದಿನಗಳಿಂದ ಮನೆಯ ಸುತ್ತಮುತ್ತಲಿನ ಜನರ ಚಲನವಲನಗಳನ್ನು ವೀಕ್ಷಿಸಿರುವ ಅನುಮಾನವಿದೆ. ಮನೆಯಲ್ಲಿ ಮೆಣಸಿನ ಪುಡಿ ಚೆಲ್ಲಿದ್ದು, ಸಾವಿತ್ರಿ ಅವರ ಬಾಯಿಗೆ ಗಮ್‌ಟೇಪ್ ಹಚ್ಚಲಾಗಿತ್ತು. ಅವರ ಶವವು ಮನೆಯೊಳಗೆ ಇದ್ದರೆ, ನಾರಾಯಣ ಅವರ ಶವವು ಮನೆಯ ಅಂಗಳದಲ್ಲಿ ಬಿದ್ದಿತ್ತು. 

ದಂಪತಿಯ ಕಿರಿಯ ಮಗ ಶುಕ್ರವಾರ ಹುಬ್ಬಳ್ಳಿಗೆ ತೆರಳಿದ್ದರು. ಇನ್ನಿಬ್ಬರು ಮಕ್ಕಳು ಅಂಕೋಲಾದಲ್ಲಿ ವಾಸಿಸುತ್ತಿದ್ದಾರೆ. ಪುತ್ರಿಯರು ಭಟ್ಕಳ ಮತ್ತು ಬೆಳಗಾವಿಯಲ್ಲಿದ್ದಾರೆ. ಮನೆಯಲ್ಲಿ ವೃದ್ಧರಿಬ್ಬರೇ ಇರುವುದನ್ನು ಗಮನಿಸಿದ ಕೊಲೆಗಡುಕರು, ರಾತ್ರಿ ಒಂದು ಗಂಟೆಯಿಂದ ಮೂರು ಗಂಟೆಯ ನಡುವೆ ಕೃತ್ಯವೆಸಗಿರುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ. ಕೊಲೆಯ ಹಿಂದೆ ದರೋಡೆಯೊಂದೇ ಉದ್ದೇಶವಾಗಿತ್ತಾ ಅಥವಾ ಬೇರೆ ಕಾರಣಗಳಿವೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಗೆ ಹುಡುಕಾಟ ನಡೆಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಡಿವೈಎಸ್‌ಪಿ ಶಂಕರ ಮಾರಿಹಾಳ, ಸಿ.ಪಿ.ಐ.ಗಳಾದ ಶ್ರೀಧರ ಎಸ್.ಆರ್, ಸಂತೋಷ ಶೆಟ್ಟಿ, ಪಿ.ಎಸ್‍.ಐ.ಗಳಾದ ಸಂಪತ್ ಕುಮಾರ, ನವೀನ ನಾಯಕ, ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲಿಸಿದರು.

ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು