ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೋತ್ಸಾಹಧನ ನೀಡಲು ಕಬ್ಬು ಬೆಳೆಗಾರರ ಆಗ್ರಹ

ಕಾರ್ಖಾನೆಯವರು, ರೈತರು ಸಭೆ ಸೇರಿ ನಿರ್ಧರಿಸಲು ಜಿಲ್ಲಾಧಿಕಾರಿ ನಿರ್ದೇಶನ
Last Updated 16 ಅಕ್ಟೋಬರ್ 2019, 18:30 IST
ಅಕ್ಷರ ಗಾತ್ರ

ಕಾರವಾರ: ಸುಮಾರು 14 ಸಾವಿರ ಕಬ್ಬು ಬೆಳೆಗಾರರಿಗೆ ಹಳಿಯಾಳದ ಇ.ಐ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಿಂದ 2016–17ನೇ ಸಾಲಿನ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ. ಈಬಗ್ಗೆಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಬ್ಬು ಬೆಳೆಗಾರರು ಒತ್ತಾಯಿಸಿದ್ದಾರೆ.

ಈ ಸಂಬಂಧ ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ವಿವರಿಸಿದರು.

‘ಕಬ್ಬು ಬೆಳೆಗಾರರಿಗೆಪ್ರತಿ ಟನ್‌ಕಬ್ಬಿಗೆ ನ್ಯಾಯೋಚಿತ ದರವನ್ನಾಗಿ ₹3,094 ನಿಗದಿಪಡಿಸಲಾಗಿದೆ. ಇದರಲ್ಲಿ ಸಾಗಣೆ ಮತ್ತುಕಟಾವು ದರ₹714 ಕಡಿತಗೊಳಿಸಿದಾಗ ಪ್ರತಿ ಟನ್‌ಗೆ ₹2,380ಮಾತ್ರ ಸಿಗುತ್ತದೆ. ಇದರಿಂದ ನಷ್ಟ ಉಂಟಾಗುತ್ತಿದೆ. ಈ ಕಾರಣದಿಂದಾಗಿ ರೈತರು ಯೋಗ್ಯ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ರೈತರು ಹಾಗೂ ಕಾರ್ಖಾನೆಯ ಪ್ರತಿನಿಧಿಗಳು ಸಭೆ ಸೇರಬೇಕು. ಎಲ್ಲರಿಗೂ ಸರಿ ಹೊಂದುವ ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕು. ಕಾರ್ಖಾನೆಯವರು ನಿಗದಿತ ಸಮಯವನ್ನು ಗೊತ್ತುಪಡಿಸಿ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಕಬ್ಬು ಸಾಗಾಣಿಕೆಗೆ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಸೂಚಿಸಿದರು.

ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಗಾ.ಎಂ ಅವರು ಶೀಘ್ರವೇ ಕಬ್ಬು ಬೆಳೆಗಾರರೊಂದಿಗೆ ಪುನಃ ಸಭೆ ನಡೆಸಿ ಸಮಸ್ಯೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ವಿವಿಧ ಅಧಿಕಾರಿಗಳು, ರೈತ ಮುಖಂಡರು ಸಭೆಯಲ್ಲಿದ್ದರು.

‘₹ 20 ಕೋಟಿ ಬಾಕಿ’:ಜಿಲ್ಲಾಧಿಕಾರಿ ಜೊತೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಗಿರೀಶ ಪಾಟೀಲ್, ‘6.18 ಲಕ್ಷ ಟನ್ ಕಬ್ಬಿಗೆ ₹ 20 ಕೋಟಿ ಪ್ರೋತ್ಸಾಹ ಧನ ಪಾವತಿಯಾಗಬೇಕಿದೆ. ಅಲ್ಲದೇ 2018–19ನೇ ಸಾಲಿನಲ್ಲಿ ಸಾಗಣೆ ಮತ್ತುಕಟಾವಿಗೆಪ್ರತಿ ಟನ್‌ಗೆ ₹ 250ರಂತೆ ಸುಮಾರು ₹ 13 ಕೋಟಿ ಬಾಕಿಯಿದೆ’ ಎಂದು ತಿಳಿಸಿದರು.

‘ಈ ಬಗ್ಗೆ ಕೇವಲ ಮಾತುಕತೆಯಾಗುತ್ತದೆಯೇ ವಿನಾ ಯಾವುದೇ ಫಲ ಸಿಗುತ್ತಿಲ್ಲ. ಈ ಬಾರಿಯೂ ಇದೇ ರೀತಿಯಾದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕಬ್ಬು ಸಾಗಣೆಗೂ ಸರ್ಕಾರ ನಿಗದಿ ಮಾಡಿದ ರೀತಿಯಲ್ಲಿ ಶುಲ್ಕ ವಸೂಲಿ ಮಾಡದೇ ಎಲ್ಲರ ರೈತರಿಂದ ಒಂದೇ ನಿಯಮ ಅನುಸರಿಸಲಾಗುತ್ತಿದೆ. ಇದರಿಂದಕಾರ್ಖಾನೆಯ ಸಮೀಪದ ಹಳ್ಳಿಗಳ ರೈತರಿಗೆ ನಷ್ಟವಾಗುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅಶೋಕ ಮೇಟಿ, ಎಂ.ವಿ.ಘಾಡಿ, ಗಿರೀಶ ಹೊಸೂರ್, ರಾಮದಾಸ್ ಬೆಳಗಾಂವ್ಕರ್, ಬೆಳಿರಾಂ ಮೋರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT