‘ಫೋನ್ ಮಾಡಿದ ಮೇಲೆಯೇ ಸಮಾಧಾನ’

ಶುಕ್ರವಾರ, ಮಾರ್ಚ್ 22, 2019
28 °C

‘ಫೋನ್ ಮಾಡಿದ ಮೇಲೆಯೇ ಸಮಾಧಾನ’

Published:
Updated:
Prajavani

ಕಾರವಾರ: ‘ಸಮವಸ್ತ್ರ ಧರಿಸಿ, ಗನ್ ಹಿಡಿದು ದೇಶ ಸೇವೆ ಮಾಡಬೇಕು ಎಂಬ ಹಂಬಲ ಹಲವರಿಗೆ ಇರ್ತದೆ. ಆದರೆ, ಆ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ನನ್ನ ಮಗನಿಗೆ ಅಂತಹ ಅವಕಾಶ ಸಿಕ್ಕಿದೆ. ತುಂಬ ಹೆಮ್ಮೆಯಾಗ್ತದೆ...’

ತಾಲ್ಲೂಕಿನ ಬಿಣಗಾ ಗೌಡರಕೇರಿಯ ಹೊನ್ನುಬಾಯಿ ಹೀಗೆ ಹೇಳುತ್ತ ಆನಂದಬಾಷ್ಪ ತುಂಬಿಕೊಂಡರು. ಅವರ ಹಿರಿಯ ಪುತ್ರ ಮೋಹನ್ ಗೌಡ ಗಡಿ ಭದ್ರತಾ ಪಡೆಯಲ್ಲಿ ಆರು ವರ್ಷಗಳಿಂದ ಕಾನ್‌ಸ್ಟೆಬಲ್ ಆಗಿದ್ದಾರೆ. ಸದ್ಯ ಪಂಜಾಬ್‌ನ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಅವರು, ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು ಎರಡೂವರೆ ವರ್ಷ ನಿಯೋಜನೆಗೊಂಡಿದ್ದರು.

‘ಯುದ್ಧದ ರೀತಿಯ ಸನ್ನಿವೇಶ ಉಂಟಾಗಿದೆ ಎಂದು ಟಿ.ವಿಯಲ್ಲಿ ನೋಡಿದಾಗ ಆತಂಕವಾಗ್ತದೆ. ಮಗ ಎಲ್ಲಿದ್ದಾನೋ ಹೇಗಿದ್ದಾನೋ ಎಂಬ ಯೋಚನೆ ಬರ್ತದೆ. ಕೆಲಸದ ಅವಧಿ ಮುಗಿದ ಮೇಲೆ ಫೋನ್ ಮಾಡ್ತಾನೆ. ಅವನು ಮಾತನಾಡಿದ ನಂತರವೇ ಮನಸ್ಸಿಗೆ ಸಮಾಧಾನವಾಗುವುದು’ ಎಂದು ತಮ್ಮ ದುಗುಡವನ್ನು ಹೊರಹಾಕಿದರು.

‘ಆದರೂ ಅವನ ವೃತ್ತಿ ಆಯ್ಕೆಯ ಬಗ್ಗೆ, ಕಾರ್ಯದ ಬಗ್ಗೆ ಖುಷಿ ಉಂಟು. ಯಾರಾದರೂ ಮಾತಾಡುವಾಗ ‘ನಿಮ್ಮ ಮಗ ಮಿಲಿಟ್ರಿಯಲ್ಲಿದ್ದಾನಾ’ ಎಂದು ಕೇಳಿದ್ರೆ ಹೌದು ಎಂದು ಹೆಮ್ಮೆಯಿಂದ ಹೇಳ್ತೇನೆ’ ಎಂದು ಸಮವಸ್ತ್ರದಲ್ಲಿರುವ ಮಗನ ಫೋಟೊ ತೋರಿಸಿದರು.

ಹೊನ್ನುಬಾಯಿ ಅವರ ಆರೋಗ್ಯ ಸಮಸ್ಯೆಯಾದ ಕಾರಣ ಒಂದು ವಾರದ ಹಿಂದೆಯಷ್ಟೇ ಮೋಹನ್ ಮನೆಗೆ ಬಂದಿದ್ದರು. ‘ಅಮ್ಮ ನಿನ್ನ ಆರೋಗ್ಯ ಸುಧಾರಣೆಯಾಗ್ಲಿ, ನಂತರ ಪಂಜಾಬ್‌ಗೆ ಕರೆದುಕೊಂಡು ಹೋಗ್ತೇನೆ. ಆ ಊರಲ್ಲಿ ನೀನು ಸುತ್ತಾಡ್ಬೇಕು, ಅಲ್ಲಿನ ಜನ, ಜೀವನ ನೋಡ್ಬೇಕು ಎಂದು ಹೇಳಿದಾನೆ. ಅವಕಾಶ ಆದ್ರೆ ಒಮ್ಮೆ ಹೋಗಿಬರುವ ಆಸೆಯಿದೆ’ ಎಂದು ಮುಗುಳ್ನಕ್ಕರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !