ಮುಂಡಗೋಡ: ಪಟ್ಟಣ ಸ್ವಚ್ಛಗೊಳಿಸಿದ ಟಿಬೆಟಿಯನ್ ನಿರಾಶ್ರಿತರು

7
‘ಥ್ಯಾಂಕ್ಯು ಇಂಡಿಯಾ’ ವಾಕ್ಯದ ಟಿ ಶರ್ಟ್ ಧರಿಸಿ ಶ್ರಮದಾನ

ಮುಂಡಗೋಡ: ಪಟ್ಟಣ ಸ್ವಚ್ಛಗೊಳಿಸಿದ ಟಿಬೆಟಿಯನ್ ನಿರಾಶ್ರಿತರು

Published:
Updated:
Deccan Herald

ಮುಂಡಗೋಡ: ಬೌದ್ಧ ಧರ್ಮಗುರು ದಲೈಲಾಮ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸುದ್ದಿಯ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಆದರೆ, ಇದಾವುದರ ಅರಿವು ಇಲ್ಲದಂತೆ ನಿರಾಶ್ರಿತ ಟಿಬೆಟನ್ನರು ಪಟ್ಟಣದ ರಸ್ತೆ, ಗಟಾರ ಸ್ವಚ್ಛಗೊಳಿಸುತ್ತ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಕಸ ಹೊಡೆಯುತ್ತ ಬುದ್ಧನ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದರು.

‘ಥ್ಯಾಂಕ್ಯು ಇಂಡಿಯಾ’ ಎಂಬ ಬರಹದ ಬಿಳಿ ಟಿ ಶರ್ಟ್ ಧರಿಸಿಕೊಂಡು ಮುಖಗವಸು, ಕೈಗೆ ಗ್ಲೌಸ್ ಧರಿಸಿಕೊಂಡು ರಸ್ತೆ ಬದಿಯಲ್ಲಿ ಸ್ವಚ್ಛ ಮಾಡುತ್ತ ಬೌದ್ಧ ಬಿಕ್ಕುಗಳು, ಟಿಬೆಟನ್ ಮಹಿಳೆಯರು ಸಾಗಿದರು. ಪ್ರತಿ ದಿನ ಪೌರ ಕಾರ್ಮಿಕರು ಮಾಡುತ್ತಿದ್ದ ಕೆಲಸವನ್ನು ನೋಡಿದ್ದ ಸ್ಥಳೀಯರು, ಆಕಸ್ಮಿಕವಾಗಿ ಟಿಬೆಟನ್ನರು ಕಸ ಹೊಡೆಯುವುದನ್ನು ಕಂಡು ಚಕಿತರಾದರು. ನಿರಾಶ್ರಿತರ ಸ್ವಚ್ಛತಾ ಕಾರ್ಯಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದರು. ಮತ್ತೆ ಕೆಲವರು ಕುತೂಹಲದಿಂದ ನೋಡುತ್ತಿರುವ ದೃಶ್ಯ ಕಂಡುಬಂತು.

ಶಿವಾಜಿ ವೃತ್ತದಲ್ಲಿ ‘ಟವರ್ಡ್ಸ್ ಕ್ಲೀನ್ ಇಂಡಿಯಾ’ ಎಂಬ ಬ್ಯಾನರ್ ಅಳವಡಿಸಿ, ಪಟ್ಟಣದಲ್ಲಿ ಎಲ್ಲೆಲ್ಲಿ ಸ್ವಚ್ಛತಾ ಕಾರ್ಯ ಮಾಡಬೇಕು ಎಂಬುದನ್ನು ಡೊಗ್ಯುಲಿಂಗ್ ಟಿಬೆಟನ್ ಸೆಟ್ಲಮೆಂಟ್ ಪ್ರತಿನಿಧಿ ಜಿಗ್ಮೆ ಸುಲ್ಟ್ರಿಮ್ ಸೂಚನೆ ನೀಡಿದರು.

ಮಿನಿ ವಿಧಾನಸೌಧಕ್ಕೆ ತೆರಳಿದ ಟಿಬೆಟನ್ನರು ಕಂದಾಯ ಇಲಾಖೆ ಸಿಬ್ಬಂದಿ ಜೊತೆಗೂಡಿ ಆವರಣವನ್ನು ಸ್ವಚ್ಛಗೊಳಿಸುವಲ್ಲಿ ನಿರತರಾದರು. ಕೆಲವು ಟಿಬೆಟನ್ನ ಮಹಿಳೆಯರು ಕೈತೋಟದಲ್ಲಿ ಕಸ ಕಿತ್ತರು. ನಂತರ ರಾಜ್ಯ ಹೆದ್ದಾರಿ ಅಕ್ಕಪಕ್ಕ ಬಿದ್ದಿದ್ದ ಕಸವನ್ನು ಆರಿಸಿ ಚೀಲದಲ್ಲಿ ತುಂಬುತ್ತ ಸಾಗಿದರು. ಸರ್ಕಾರಿ ಆಸ್ಪತ್ರೆ ಆವರಣ, ನ್ಯಾಯಾಲಯ ಎದುರಿನ ರಸ್ತೆ, ಬಸ್ ನಿಲ್ದಾಣ, ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಸ್ವಚ್ಛತೆ ಕೈಗೊಂಡರು.

ಗಟಾರಕ್ಕೆ ಇಳಿದ ಮಹಿಳೆಯರು: ದೈವಜ್ಞ ಸಭಾಭವನ ಎದುರಿನ ಗಟಾರಿನಲ್ಲಿ ಟಿಬೆಟನ್ ಮಹಿಳೆಯರು ಇಳಿದು ಕಸಕಡ್ಡಿ ತೆಗೆದು, ರಾಡಿಯನ್ನು ತೆಗೆದರು. ಬುಟ್ಟಿಯಲ್ಲಿ ಕಸವನ್ನು ತುಂಬಿ ಟ್ರ್ಯಾಕ್ಟರ್‌ಗೆ ಹೊತ್ತು ಹಾಕಿದರು. ಬೌದ್ಧ ಬಿಕ್ಕುಗಳು ಸಹ ಚೀಲಗಳಲ್ಲಿ ಕಸ ತುಂಬಿಕೊಂಡು ಮುಂದೆ ಸಾಗಿದರು.

ಪಟ್ಟಣದಲ್ಲಿ ಆರಿಸಿದ ಕಸ, ತೆಗೆದ ರಾಡಿ, ಕತ್ತರಿಸಿದ ಗಿಡಗಂಟಿಗಳನ್ನು ತಾವು ತಂದಿದ್ದ ಟ್ರ್ಯಾಕ್ಟರ್‌ನಲ್ಲಿಯೆ ತುಂಬಿಕೊಂಡು ಕ್ಯಾಂಪ್‌ನತ್ತ ಸಾಗಿದರು. ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಪ್ರತಿನಿತ್ಯ ಓಡಾಡುತ್ತಿದ್ದ ಟಿಬೆಟನ್ನರು ಗಾಂಧಿ ಜಯಂತಿಯಂದು ಕೈಯಲ್ಲಿ ಕಸಬರಿಗೆ ಹಿಡಿದು ಮುಂಡಗೋಡ ಸ್ವಚ್ಛ ಮಾಡುತ್ತ ವಿಭಿನ್ನವಾಗಿ ಕಂಡರು.

‘ಟಿಬೆಟನ್ ಕ್ಯಾಂಪ್‌ನಿಂದ ಒಟ್ಟು 110 ಜನರು ಬಂದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತವು ಸ್ವಚ್ಛತೆಯತ್ತ ಸಾಗುತ್ತಿರುವುದು ಉತ್ತಮ ಬೆಳವಣಿಗೆ. ಧರ್ಮಶಾಲಾದ ಸೆಂಟ್ರಲ್ ಟಿಬೆಟನ್ ಅಡ್ಮಿನಿಸ್ಟ್ರೇಷನ್ ಸೂಚನೆಯಂತೆ ಸ್ವಚ್ಛ ಭಾರತ ಆಂದೋಲದಲ್ಲಿ ಭಾಗಿಯಾಗಿದ್ದೇವೆ. ನಮ್ಮ ಊರು, ಓಣಿ, ನಗರಗಳನ್ನು ಸ್ವಚ್ಛ ವಾಗಿಡುವುದರ ಮೂಲಕ ರಾಷ್ಟ್ರಪಿತನಿಗೆ ನಮನ ಸಲ್ಲಿಸೋಣ’ ಎಂದು ಡೊಗ್ಯುಲಿಂಗ್ ಟಿಬೆಟನ್ ಸೆಟ್ಲ್‌ಮೆಂಟ್ ಪ್ರತಿನಿಧಿ ಜಿಗ್ಮೆ ಸುಲ್ಟ್ರಿಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !