ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮೇಲ್ದರ್ಜೆಗೇರಿದ ಆಸ್ಪತ್ರೆಗೆ ಮಲ್ಟಿ ಸ್ಪೆಷಾಲಿಟಿ ಪಟ್ಟ!

ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಗರಿಂದ ಪ್ರತಿಬಿಂಬಿಸುವ ಪ್ರಯತ್ನ
Last Updated 26 ಜುಲೈ 2022, 19:30 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ಒತ್ತಾಯ ಬಲವಾಗುತ್ತಿದ್ದಂತೆ ಶಿರಸಿ ಭಾಗದ ಕೆಲವು ಬಿಜೆಪಿ ಕಾರ್ಯಕರ್ತರು ಮೇಲ್ದರ್ಜೆಗೇರುತ್ತಿರುವ ಪಂಡಿತ ಸಾರ್ವಜನಿಕ ಆಸ್ಪತ್ರೆ ಕಟ್ಟಡಕ್ಕೆ ಮಲ್ಟಿ ಸ್ಪೆಷಾಲಿಟಿ ಪಟ್ಟ ಕಟ್ಟುವ ಯತ್ನದಲ್ಲಿ ತೊಡಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಕೂಗು ಟ್ರೆಂಡ್ ಆಗಿದೆ. ಈ ನಡುವೆ ಕೆಲ ಬಿಜೆಪಿ ಕಾರ್ಯಕರ್ತರು ಜಾಲತಾಣಗಳಲ್ಲಿ ಶಿರಸಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆಸ್ಪತ್ರೆಯಲ್ಲಿ ಮಲ್ಟಿ ಸ್ಪೆಷಾಲಿಟಿಗೆ ಕಡಿಮೆ ಇಲ್ಲದಂತ ಸೌಲಭ್ಯಗಳಿರಲಿವೆ ಎಂದು ಪ್ರಚಾರ ಆರಂಭಿಸಿದ್ದಾರೆ.

ಆಸ್ಪತ್ರೆ ನಿರ್ಮಾಣಕ್ಕೆ ಕಾರಣರಾಗಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಹೊಗಳುವ ಪೋಸ್ಟ್‌ಗಳು ಹೆಚ್ಚು ಕಾಣತೊಡಗಿವೆ. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ‘ಜನರ ಹೋರಾಟವನ್ನು ಹತ್ತಿಕ್ಕಿ, ವಿಷಯಾಂತರ ಮಾಡುವ ಪ್ರಯತ್ನ’ ಎಂದು ಟೀಕಿಸಿದ್ದಾರೆ. ಇದು ಪರ–ವಿರೋಧದ ತಿಕ್ಕಾಟಕ್ಕೆ ಕಾರಣವಾಗಿದೆ.

‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಜನರ ಕೂಗು ಗಟ್ಟಿಯಾಗುತ್ತಿದೆ. ಹೋರಾಟ ಬಲಗೊಳ್ಳುವ ಆತಂಕದಿಂದ ಆಡಳಿತಾರೂಢ ಬಿಜೆಪಿ ದಿಗಿಲುಗೊಂಡಿದೆ. ಇದಕ್ಕಾಗಿ ಜನರ ಗಮನ ಬೇರೆಡೆ ಸೆಳೆಯುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದಾರೆ. ನ್ಯಾಯಯುತ ಬೇಡಿಕೆಗೂ ರಾಜಕೀಯ ಲೇಪನ ಮಾಡುವುದು ಸರಿಯಲ್ಲ’ ಎನ್ನುತ್ತಾರೆ ಗಣೇಶ ನಗರದ ನಾಗೇಶ ಶೆಟ್ಟಿ.

‘ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಸರಿಯಾಗಿದೆ. ಶಿರಸಿ ಭಾಗದ ಜನರಿಗೆ ಸುಸಜ್ಜಿತ ಅಸ್ಪತ್ರೆ ನಿರ್ಮಾಣಗೊಳ್ಳುತ್ತಿರುವುದನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಪೋಸ್ಟ್ ಹಾಕಿದ್ದೇವೆಯೇ ಹೊರತು ರಾಜಕೀಯ ಪ್ರಚಾರಕ್ಕಲ್ಲ’ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಸಮರ್ಥಿಸಿಕೊಂಡರು.

100 ಹಾಸಿಗೆ ಸಾಮರ್ಥ್ಯದ ಪಂಡಿತ ಸಾರ್ವಜನಿಕ ಆಸ್ಪತ್ರೆಯನ್ನು ಕಳೆದ ವರ್ಷ 250 ಹಾಸಿಗೆಗೆ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆಸ್ಪತ್ರೆ ವಿಸ್ತರಣೆಗೆ ₹172 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ.

ಮೆಡಿಕಲ್ ಕಾಲೇಜ್ ಕೂಗು:

ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎಂಬ ಆಗ್ರಹದ ಜತೆಗೆ ಘಟ್ಟದ ಮೇಲಿನ ಭಾಗದಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ಮೆಡಿಕಲ್ ಕಾಲೇಜ್ ಸ್ಥಾಪಿಸಬೇಕು ಎಂಬ ಒತ್ತಾಯವೂ ವ್ಯಕ್ತವಾಗುತ್ತಿದೆ.

‘ಶಿರಸಿಯಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಒತ್ತಾಯಿಸಿ ದಶಕದ ಹಿಂದೆಯೇ ಹೋರಾಟ ನಡೆದಿತ್ತು. ಕಾರವಾರಕ್ಕೆ ಕಾಲೇಜ್ ಮಂಜೂರಾದರೂ ಈವರೆಗೆ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಒದಗಿಸಿಲ್ಲ. ಸರ್ಕಾರ ಶಿರಸಿಯಲ್ಲಿ ಇನ್ನೊಂದು ಕಾಲೇಜ್ ಸ್ಥಾಪಿಸಲಿ’ ಎನ್ನುತ್ತಾರೆ ಶೇಖರ ಪೂಜಾರಿ.

-----------------------------

₹172 ಕೋಟಿ ವೆಚ್ಚದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಸೇರಿ ಹಲವು ಸುಧಾರಿತ ವಿಭಾಗಗಳು ಸ್ಥಾಪನೆಗೊಳ್ಳಲಿದೆ. ಇದು ಶಿರಸಿಗರ ಪಾಲಿಗೆ ಸುಸಜ್ಜಿತ ಆಸ್ಪತ್ರೆಯಾಗುತ್ತದೆ ಎಂಬ ವಿಶ್ವಾಸವಿದೆ .

ಗಣಪತಿ ನಾಯ್ಕ

ನಗರಸಭೆ ಅಧ್ಯಕ್ಷ

-------------------------

ಜನರ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನದ ಬದಲು ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಬೇಕು. ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಜನರಿಗೆ ಅತಿ ಅಗತ್ಯವಿದೆ .

ಮಹೇಶ ನಾಯ್ಕ

ರೆಡ್ ಆ‍್ಯಂಟ್ ಸಂಘಟನೆ ಮುಖ್ಯಸ್

---------------------------

ಕಾರವಾರದ ಮೆಡಿಕಲ್ ಕಾಲೇಜ್‍ನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸುವ ಜತೆಗೆ ಶಿರಸಿಯಲ್ಲೂ ಈ ಸೌಲಭ್ಯವುಳ್ಳ ಮೆಡಿಕಲ್ ಕಾಲೇಜ್ ಸ್ಥಾಪಿಸಬೇಕು.

ಶೇಖರ ಪೂಜಾರಿ

ಜೆಡಿಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT