ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯ ಅಂದ ಹೆಚ್ಚಿಸಿದ ವರ್ಲಿ ಚಿತ್ರಕಲೆ

ಅರಬೈಲ್ ಸರ್ಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ, ಮುದ ನೀಡುವ ಪರಿಸರ: ಗುಣಾತ್ಮಕ ಶಿಕ್ಷಣ
Last Updated 11 ಏಪ್ರಿಲ್ 2019, 7:03 IST
ಅಕ್ಷರ ಗಾತ್ರ

ಯಲ್ಲಾಪುರ (ಉತ್ತರ ಕನ್ನಡ): ಮನಸ್ಸಿಗೆ ಮುದ ನೀಡುವ ವಾತಾವರಣ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ. ಈ ಉದ್ದೇಶದಿಂದಲೇ ತಾಲ್ಲೂಕಿನ ಅರಬೈಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಕರ್ಷಿಸುತ್ತಿದೆ.

ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೂ, ಕೆಲವು ಶಿಕ್ಷಕರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದ್ದಾರೆ.

ಅಂತಹ ಆದರ್ಶ ಶಿಕ್ಷಕರು ಅರಬೈಲ್ ಗ್ರಾಮದ ಶಾಲೆಯಲ್ಲೂ ಇದ್ದಾರೆ. ಶಾಲೆಯಲ್ಲಿ ಕೇವಲ 30 ವಿದ್ಯಾರ್ಥಿಗಳಿದ್ದರೂ ನಾಲ್ವರು ಶಿಕ್ಷಕರು ಮಕ್ಕಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಶಾಲೆಯಲ್ಲಿ ವಿಶಾಲವಾದ ಆಟದ ಮೈದಾನ, ಎರಡೂ ಬದಿ ಉದ್ಯಾನವಿದೆ. ಕಲಿಕೆಗೆ ನೆರವಾಗುವ ಸೃಜನಾತ್ಮಕ ಕಾರ್ಯಕ್ರಮಗಳನ್ನು ಇಲ್ಲಿನ ಶಿಕ್ಷಕರು ಶ್ರಮಿಸುತ್ತಿದ್ದಾರೆ.

ಮುಖ್ಯವಾಗಿ ಮುಖ್ಯ ಶಿಕ್ಷಕಿ ಚಂದ್ರಮತಿ ಟಿ.ಆರ್. ಅವರ ಸಹಕಾರ ಮತ್ತು ಕ್ರಿಯಾಶೀಲ ಶಿಕ್ಷಕಿ ಶಿವಲೀಲಾ ಹುಣಸಗಿ ಅವರ ಶ್ರಮ, ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆ ಹೊಸರೂಪ ಪಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆ ಪಡೆದಿದ್ದು. ಅರಬೈಲ್ ಈ ಮೂಲಕ ಗ್ರಾಮೀಣ ಶಾಲೆಯ ಕೀರ್ತಿ ಎಲ್ಲೆಡೆ ವ್ಯಾಪಿಸುವಂತಾಗಿದೆ

ಶಾಲೆಯ ಗೋಡೆಗಳಲ್ಲೆಲ್ಲ ಅರಳಿದ ವರ್ಲಿ ಕಲೆ: ಶಾಲೆಯ ಆವರಣ ಮತ್ತು ತರಗತಿಯ ಗೋಡಗಳೆಲ್ಲ ವರ್ಲಿ ಕಲೆಯ ಚಿತ್ರಗಳಿಂದ ಕಂಗೊಳಿಸುತ್ತಿವೆ.

ಶಾಲೆಗೆ ಹೊಸ ಮೆರುಗು ನೀಡುವಲ್ಲಿ ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳು ಶ್ರಮಿಸಿದ್ದಾರೆ. ಚಿತ್ರಕಲಾ ಶಿಕ್ಷಕಿ ಮಂಜುಳಾ ಕರಿಗಾರ್ ಹಾಗೂ ಅಹೇಶ್ ಆಲ್ಮಠ್ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಕೂಡ ವರ್ಲಿ ಕಲೆ ಕಲಿಯುತ್ತಿದ್ದಾರೆ.

ಅಕ್ಷರ ಬಾವಿ: ಕಲಿಕಾ ಸಮಸ್ಯೆಗಳಿರುವ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಕ್ಷಕಿ ಶಿವಲೀಲಾ ಅವರು ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸುವ ಪ್ರಯೋಗ ಮಾಡಿದ್ದು, ಉತ್ತಮ ಫಲಿತಾಂಶವೂ ಸಿಕ್ಕಿದೆ. ಅಲ್ಲದೇ ನಲಿ–ಕಲಿ ತರಗತಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಹಲವು ಕಾರ್ಯಕ್ರಮಗಳನ್ನು ಇಲ್ಲಿ ಅನುಷ್ಠಾನಗೊಳಿಸಿ ಮಕ್ಕಳಲ್ಲಿ ಶಿಕ್ಷಣ ಆಸಕ್ತಿ ಬೆಳೆಸಲಾಗುತ್ತಿದೆ.

ಉದ್ಯಾನವನ: ಶಾಲೆಯ ಆವರಣದಲ್ಲಿನ ಖಾಲಿ ಸ್ಥಳವನ್ನು ಉದ್ಯಾನವಾಗಿ ಮಾಡಲಾಗಿದ್ದು, ತರಕಾರಿ ಮತ್ತು ಬಾಳೆ ತೋಟಗಳನ್ನು ನಿರ್ಮಿಸಲಾಗಿದೆ. ಬಿಸಿ ಊಟಕ್ಕೆ ಬೇಕಾದ ತರಕಾರಿ ಮಕ್ಕಳೇ ಬೆಳೆಯುತ್ತಿದ್ದಾರೆ. ಈ ಮೂಲಕ ಗಿಡ–ಮರಗಳ ಬಗೆಗಿನ ಆಸಕ್ತಿಯನ್ನೂ ಮಕ್ಕಳಲ್ಲಿ ಮೂಡಿಸಲಾಗುತ್ತಿದೆ.

ಗೊಂಬೆಯಾಟ: ಶಿಕ್ಷಕಿ ಶಿವಲೀಲಾ ಅವರು ಮಕ್ಕಳಿಗೆ ಮನರಂಜನಾತ್ಮಕವಾಗಿ ಪಾಠ ಕಲಿಸಲೆಂದೇ ಪಪೆಟ್ ಷೋ. (ಸೂತ್ರದ ಗೊಂಬೆಯಾಟ) ಮೂಲಕ ಪಾಠ ಮಾಡುತ್ತಾರೆ.

ಸಾಮಾಜಿಕ ತಾಣದಲ್ಲಿ ಶಾಲೆಯ ಕುರಿತು ತಿಳಿದುಕೊಂಡ ಇಲಾಖೆಯ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಎಸ್. ಜಯಕುಮಾರ ಕಾರವಾರಕ್ಕೆ ಹೋಗುತ್ತಿರುವಾಗ ಮಾರ್ಗ ಮದ್ಯೆ ಈ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ದಾಖಲೆಗಳು. ಶಾಲಾ ಗುಣಮಟ್ಟ, ಕಲಿಕಾ ವಿಧಿ, ಶಾಲೆಯ ಪರಿಸರ ವನ್ನು ಪರಿಶೀಲಿಸಿ ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕಿ ಶಿವಲೀಲಾ ಹುಣಸಗಿ ಹಾಗೂ ಸಹೋದ್ಯೋಗಿಗಳ ಹಾಗೂ ಗ್ರಾಮಸ್ಥರ ಸಹಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT